ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಮಯದಲ್ಲಿ ತಾಲೂಕಿನ ಗ್ರಾಮೀಣ ಭಾಗದ ಹಿರಿಯ ಪ್ರಾಥಮಿಕ ಪಾಠಶಾಲೆಯೊಂದರಲ್ಲಿ, ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕರ ಶ್ರಮ ಹಾಗೂ ವೃತ್ತಿಯ ಮೇಲಿರುವ ಶ್ರದ್ಧೆಯಿಂದಾಗಿ, ಖಾಸಗಿ ಶಾಲೆಗಳನ್ನು ತೊರೆದು ಪುನಃ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಸೇರುವಂತಾಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ತಾಲೂಕಿನ ಬೈರಾಪುರ ಕ್ಲಸ್ಟರ್ ಹೊಸೂರು ಗ್ರಾಮದ ಹಿರಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ, ಖಾಸಗಿ ಶಾಲೆಗಳ ಆರ್ಭಟದಿಂದಾಗಿ ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಇದರಿಂದಾಗಿ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು. ಈ ಸಮಯದಲ್ಲಿ ಇಲ್ಲಿಗೆ ಮುಖ್ಯ ಶಿಕ್ಷಕಿಯಾಗಿ ನಿಯುಕ್ತಿಗೊಂಡ ಬೇಬಿ ಹಾಜಿರಾರವರು ಸಹ ಶಿಕ್ಷಕರೊಡಗೂಡಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲೇಬೇಕೆಂಬ ದೃಢಸಂಕಲ್ಪ ಕೈಗೊಂಡ ಪರಿಣಾಮ, ಶಾಲೆಯಲ್ಲಿ ಪಠ್ಯ, ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹಲವು ಬದಲಾವಣೆಗಳನ್ನು ತಂದ ಕಾರಣ, ವಿದ್ಯಾರ್ಥಿಗಳಲ್ಲಿನ ಕಲಿಕಾ ಗುಣಮಟ್ಟ ಉತ್ತಮಗೊಂಡು ಇದು ಪೋಷಕರ ಮನಮುಟ್ಟಿದ ಪರಿಣಾಮ, ಈ ಶಾಲೆಯಲ್ಲಿ ದಾಖಲಾತಿ ಹೆಚ್ಚಾಗಿ ಈಗ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ.
ಇಷ್ಟೇ ಅಲ್ಲದೆ ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ ಎಂಬಂತೆ ಸರ್ಕಾರಿ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಬ್ಲೇಜರ್ ಸಹಿತ ಸಮವಸ್ತ್ರವನ್ನು ಮಾಡಿದ ಹೆಮ್ಮೆ ಸಹ ಈ ಶಾಲೆಗೆ ಸಲ್ಲುತ್ತದೆ. ಎಲ್ಲಡೆ ಇರುವಂತೆ ಇಲ್ಲಿಯೂ ಸಹ ಖಾಸಗಿ ಶಾಲೆಯವರ ಹಾವಳಿ ಜೋರಾಗಿ, ಗ್ರಾಮಕ್ಕೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಖಾಸಗಿ ಶಾಲಾ ವಾಹನಗಳು ಬರುವಂತಾಗಿ, ಆ ಶಾಲೆಯ ವಿದ್ಯಾರ್ಥಿಗಳು ಟಿಪ್‌ಟಾಪ್ ಆಗಿ ಸಮವಸ್ತ್ರಗಳನ್ನು ಧರಿಸಿ ಹೋಗುತ್ತಿದ್ದನ್ನು ಕಂಡು, ಸರ್ಕಾರ ನೀಡುವ ಸಮವಸ್ತ್ರಗಳನ್ನು ಹಾಕಿಕೊಂಡು ಅವರ ಮುಂದೆ ಕಳೆಗುಂದಿದವರಂತೆ ಶಾಲೆಗೆ ಹೋಗುತ್ತಿದ್ದ ಇಲ್ಲಿನ ವಿದ್ಯಾರ್ಥಿಗಳು, ಇಂದು ಅವರಿಗಿಂತಲೂ ಒಂದು ಪಟ್ಟು ಹೆಚ್ಚೆಂಬಂತೆ ಬಿಗುಮಾನದಿಂದ ಶಾಲೆಗೆ ಹೋಗುವಂತಾಗಿದೆ.ಇದಕ್ಕೆ ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಹಾಗೂ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದು, ಇತ್ತೀಚೆಗೆ ಪೋಷಕರು ಖಾಸಗಿ ಶಾಲೆಗಳನ್ನು ಬಿಡಿಸಿ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಜ್ಞಾನ ಉತ್ತಮಗೊಳಿಸಬೇಕೆಂಬ ಕಾರಣದಿಂದಾಗಿ, ಎಲ್ಲರ ಸಹಕಾರದೊಂದಿಗೆ ಇಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು ತಯಾರಿ ನಡೆಸಿದ್ದು, ಶೀಘ್ರ ಇಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭವಾಗಲಿದೆ. ಅಲ್ಲದೆ ಇಲ್ಲಿ ಈಗಾಗಲೇ ಕಿಂಡರ್ ಗಾರ್ಡನ್ ಸಹ ಪ್ರಾರಂಭಿಸಲಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳುಗಳನ್ನು ಇಲ್ಲಿಗೆ ಎಲ್ ಕೆ ಜಿ ಹಾಗೂ ಯುಕೆಜಿಗೆ ದಾಖಲುಗೊಳಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣೀಭೂತರಾದ ಮುಖ್ಯ ಶಿಕ್ಷಕಿ ಬೇಬಿ ಹಾಜಿರಾ ಸಹ ಶಿಕ್ಷಕರಾದ ನಂಜೇಗೌಡ ಹಾಗೂ ಶ್ರೀ ವೆಂಕಟನಾರಾಯಣ ರವರ ಶ್ರಮ ಅಭಿನಂದನೀಯವಾಗಿದ್ದು, ಇವರನ್ನು ಮಾದರಿಯಾಗಿಟ್ಟುಕೊಂಡು ಇತರೆ ಶಿಕ್ಷಕರು ಶ್ರಮ ಪಟ್ಟರೆ, ಯಾವೊಂದು ಸರ್ಕಾರಿ ಶಾಲೆಯ ಮುಚ್ಚುವ ಪ್ರಮೇಯವೇ ಬರುವುದಿಲ್ಲ ಎಂಬುದು ತಾಲೂಕಿನ ಸಾರ್ವಜನಿಕರ ಅಭಿಪ್ರಾಯವಾಗಿದೆ.
*ಹೇಳಿಕೆ-1ಈ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಸಹಕಾರ ಪಡೆದು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮೊದಲು ಮಕ್ಕಳಿಗೆ ಕೇವಲ ಇಂಗ್ಲಿಷ್ ಬರೆಯಲು, ಓದಲು ಕಲಿಸಲಾಗುತ್ತಿತ್ತು. ಆದರೆ ಈಗ ಮಾತನಾಡುವುದನ್ನು ಕಲಿಸಲು ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ಶಾಲೆಯ ಶಿಕ್ಷಕರ ಹಾಗೂ ಎಸ್ಟಿಎಂಸಿ ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ.
- ಎ.ಜೆ ಕೃಷ್ಣೇಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ*ಹೇಳಿಕೆ-2
ಶಾಲೆಯ ಶಿಕ್ಷಕರು ಮನಸು ಮಾಡಿದರೆ, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಏನಿಲ್ಲ ಎಂಬಂತೆ ಮಾಡಬಹುದು ಎಂಬುದಕ್ಕೆ ಇಲ್ಲಿನ ಶಿಕ್ಷಕರು ಸಾಕ್ಷಿಯಾಗಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.- ದೀಪಕ್ ಗೌಡ, ಶಾಲೆಯ ಹಳೆಯ ವಿದ್ಯಾರ್ಥಿ