ಸಾರಾಂಶ
ಭಾರತೀ ವಿದ್ಯಾ ಸಂಸ್ಥೆ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರಗಳನ್ನು ಮಾಡುತ್ತ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕೌಶಲ್ಯಾಧಾರಿತ ಪಠ್ಯ ರಚನೆಯಾದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಉದ್ಯೋಗಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಕೆ.ಶಿವಚಿತ್ತಪ್ಪ ಅಭಿಪ್ರಾಯಪಟ್ಟರು.ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ ಭಾರತೀ ಶಿಕ್ಷಣ ಮಹಾವಿದ್ಯಾಲಯಯದ ಬಿಇಡಿ ವಿದ್ಯಾರ್ಥಿಗಳಿಗೆ 2 ಮತ್ತು 4 ನೇ ಸೆಮಿಸ್ಟಾರ್ ಪಠ್ಯವಸ್ತು ಪರಿಷ್ಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಹಳೆಯ ಪಠ್ಯಕ್ರಮವನ್ನು ಪರಿಷ್ಕರಿಸುವ ದಿಸೆಯಲ್ಲಿ ಹೊಸ ವಿಷಯಗಳ ಬಗ್ಗೆ ಹೆಚ್ಚು ಆಶಾದಯಕವಾಗಿರಬೇಕು ಎಂದರು.
ಪಠ್ಯದ ವಿಚಾರದಲ್ಲಿ ಸಮಾಜದ ಅಭಿವೃದ್ಧಿಗೆ ತಕ್ಕಂತೆ ಪಠ್ಯದ ಸಾರಾಂಶಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಪ್ರಸ್ತುತ ತಲೆಮಾರಿಗೆ ಬೇಕಾಗಿರುವ ಮೌಲ್ಯಗಳುಳ್ಳ ಆಧುನಿಕತೆಯನ್ನು ಸಾರುವ ರೀತಿಯಲ್ಲಿ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಹೆಚ್ಚಿಸಲು ಪ್ರಯತ್ನ ಪಡಬೇಕು ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಸದಸ್ಯ , ಬಿಇಟಿ ಚೇರ್‍ಮನ್ ಮಧು ಜಿ. ಮಾದೇಗೌಡ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ಸಮಾಜದತ್ತ ಕೊಂಡೊಯ್ಯುವ ಜವಾಬ್ದಾರಿ ನಿಮ್ಮ ಮೇಲಿದೆ. ಪಠ್ಯ ಪರಿಷ್ಕರಣೆಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ಭವ್ಯ ಭಾರತದ ಪ್ರಜೆಗಳನ್ನು ರೂಪಿಸಲು ಕಾರ್ಯೋನ್ಮುಖರಾಗಿ ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ, ಭಾರತೀ ವಿದ್ಯಾ ಸಂಸ್ಥೆ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರಗಳನ್ನು ಮಾಡುತ್ತ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದ ಲಕ್ಷಾಂತರ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಶ್ಲಾಘಿಸಿದರು.ಮಂಡ್ಯ ವಿವಿ ಸಿಂಡಿಕೇಟ್ ಸದಸ್ಯ ಎಂ.ನಾಗರಾಜು ಮಾತನಾಡಿದರು. ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಭಾರತೀ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್. ಸುರೇಶ್ ಪ್ರಾಸ್ತಾವಿಕ ನುಡಿ ನುಡಿದರು.
ಕಾರ್ಯಕ್ರಮದಲ್ಲಿ ಬಿಇಟಿ ಟ್ರಸ್ಟಿ ಕಾರ್ಕಹಳ್ಳಿ ಬಸವೇಗೌಡ, ನಿವೃತ್ತ ಪ್ರಾಂಶುಪಾಲರಾದ ಡಾ.ಎಸ್.ಬಿ.ಶಂಕರೇಗೌಡ, ಡಾ.ಎಚ್.ಎಂ. ಮುದ್ದು ಮಲ್ಲೇಶ್, ವಿದ್ಯಾವಿಕಾಸ್ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜ್‌ಗೋಪಾಲ್, ಗಂಗೇಗೌಡ ಸೇರಿದಂತೆ ಮತ್ತಿತರಿದ್ದರು.