ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬಂಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಗೊಂಡ ಮುಖ್ಯ ಶಿಕ್ಷಕರಿಗೆ ಸಾವಿರಾರು ವಿದ್ಯಾರ್ಥಿಗಳು ಬೀಳ್ಕೊಡಿಗೆ ನೀಡಿ ಸಾಮೂಹಿಕವಾಗಿ ಪಾದಪೂಜೆ ಮಾಡಿ ಚಿನ್ನದ ಸರ ಮತ್ತು ಬೆಳ್ಳಿ ಕಡಗ ನೀಡಿ ಕೃತಜ್ಞತೆ ಸಲ್ಲಿಸಿದರು.1991ರಲ್ಲಿ ಗುಡಿಸಲಿನಲ್ಲಿ ಆರಂಭವಾದ ಬಂಡೂರು ಸಾರ್ವಜನಿಕ ಶಾಲೆಗೆ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ನಂತರ ಮುಖ್ಯ ಶಿಕ್ಷಕ ಕೆ.ಎನ್.ಶಿವಕುಮಾರ್ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದರು. ಜೊತೆಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗಿದ್ದರು.
ನಿವೃತ್ತ ಶಿಕ್ಷಕ ಕೆ.ಎನ್.ಶಿವಕುಮಾರ್ ದಂಪತಿಯನ್ನು ಬಸವೇಶ್ವರಸ್ವಾಮಿ ದೇವಸ್ಥಾನದಿಂದ ಅಲಂಕೃತ ಬೆಳ್ಳಿ ರಥವಲ್ಲಿ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಶಾಲೆ ಆವರಣದಲ್ಲಿ ನಡೆದ ಸಮಾರಂಭದ ವೇದಿಕೆಗೆ ಕರತರಲಾಯಿತು. ನಂತರ ಪಾದಪೂಜೆ ಮೂಲಕ ಗೌರವ ಸಲ್ಲಿಸಿದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೈಗೆ ಬೆಳ್ಳಿ ಕಡಗ, ಕತ್ತಿಗೆ ಚಿನ್ನದ ಸರ ತೊಡಿಸಿ ಅದ್ದೂರಿಯಾಗಿ ಅಭಿನಂದಿಸಿ ಬೀಳ್ಕೊಟ್ಟರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ನಮ್ಮೂರಿನ ಶಾಲೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ರಾಜ್ಯದ ನಾನಾ ಸೇರಿದಂತೆ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಮುಖ್ಯ ಶಿಕ್ಷಕರಾಗಿದ್ದ ಕೆ.ಎನ್.ಶಿವಕುಮಾರ್ ಹಾಗೂ ಹಲವು ಶಿಕ್ಷಕರ ಪರಿಶ್ರಮಕ್ಕೆ ತಂದ ಗೌರವವಾಗಿದೆ ಎಂದರು.
ಬಿಇಒ ವಿ.ಇ.ಉಮಾ ಮಾತನಾಡಿ, ಅತ್ಯಂತ ಕಡಿಮೆ ಸಂಬಳದಿಂದ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿ ನಿಸ್ವಾರ್ಥ ಸೇವೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವ ಜೊತೆಗೆ ಶಿಸ್ತು ಸಂಸ್ಕಾರವನ್ನು ಕೆ.ಎನ್.ಶಿವಕುಮಾರ್ ಕಲಿಸಿದ್ದಾರೆ. ಅವರ ಕಾರ್ಯಕ್ಷಮತೆಗೆ ಇಲ್ಲಿ ನೆರೆದಿರುವ ಸಾವಿರಾರು ಹಳೇ ವಿದ್ಯಾರ್ಥಿಗಳೇ ಸಾಕ್ಷಿ ಎಂದು ಪ್ರಶಂಸಿಸಿದರು.ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ಕಲಾವಿದ ಗಿಲ್ಲಿನಟ ಮಾತನಾಡಿ, ಶಾಲೆಯಲ್ಲಿ ಮುಖ್ಯ ಶಿಕ್ಷಕರು ನಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಫಲವಾಗಿ ಕಲಾವಿದನಾಗಿ ಬೆಳೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಫೋಟೋ ತೆಗೆಸಿಕೊಂಡ ವಿದ್ಯಾರ್ಥಿಗಳು:ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರ ಫಲವಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಿ ವರ್ಷವಾರು ವಿಭಾಗದಲ್ಲಿ ತಮ್ಮ ನೆಚ್ಚಿನ ಗುರುಗಳೊಂದಿಗೆ ಫೋಟೋ ತೆಗೆಸಿಕೊಂಡರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಶಾಲೆ ಹಾಲಿ ಅಧ್ಯಕ್ಷ ಮರಿಗೌಡ, ಕಾರ್ಯದರ್ಶಿ ಬಿ.ಪುಟ್ಟಬಸವಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ರಾಮಚಂದ್ರಯ್ಯ, ಪ್ರಮುಖರಾದ ಚಂದ್ರಶೇಖರ್, ವಿಜಯ್ ಕುಮಾರ್, ಓಂಪ್ರಕಾಶ್, ಮಂಜುನಾಥ್, ಚಂದ್ರಶೇಖರ್, ಶಿವಮೂರ್ತಿ, ಸೋಮರಾಜು, ದೇವು ಸೇರಿದಂತೆ ಇತರರು ಇದ್ದರು.