ನ್ಯಾಯವಾದಿಗಳು ಅಧ್ಯಯನಶೀಲರಾಗುವ ಮೂಲಕ ತಮ್ಮ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಪ್ರದೀಪ ಸಿಂಗ್ ಯೆರೂರ್ ಕರೆ ನೀಡಿದರು.

ಅಂಕೋಲಾ: ನ್ಯಾಯದ ಹಕ್ಕಿಗಾಗಿ ಕಕ್ಷಿದಾರರು ನ್ಯಾಯವಾದಿಗಳ ಮೇಲೆ ನಂಬಿಕೆ ಇಟ್ಟು ತಮ್ಮ ತಮ್ಮ ಪ್ರಕರಣಗಳನ್ನು ನೀಡುತ್ತಾರೆ. ಆದರೆ, ಈ ವಿಶ್ವಾಸಕ್ಕೆ ತಕ್ಕ ಪ್ರತಿಫಲ ನೀಡುವುದು ನ್ಯಾಯವಾದಿಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯವಾದಿಗಳು ಅಧ್ಯಯನಶೀಲರಾಗುವ ಮೂಲಕ ತಮ್ಮ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಪ್ರದೀಪ ಸಿಂಗ್ ಯೆರೂರ್ ಕರೆ ನೀಡಿದರು.

ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘ ಅಂಕೋಲಾ ಆಶ್ರಯದಲ್ಲಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೈಗೊಳ್ಳುವ ತೀರ್ಪು ಬಹುಮಟ್ಟಿಗೆ ವಕೀಲರ ವಾದ, ಮಾಹಿತಿ ಸಂಗ್ರಹ ಹಾಗೂ ಕಾನೂನು ಅಧ್ಯಯನದ ಮೇಲೆ ಆಧಾರಿತವಾಗಿರುತ್ತದೆ. ಈ ನಿಟ್ಟಿನಲ್ಲಿ ನ್ಯಾಯ ವೃತ್ತಿಯನ್ನು ಗೌರವಾನ್ವಿತವಾಗಿರಿಸಿ, ಸಮಾಜಕ್ಕೆ ನಿಷ್ಪಕ್ಷಪಾತ ನ್ಯಾಯ ಒದಗಿಸಲು ನ್ಯಾಯವಾದಿಗಳು ನಿರಂತರವಾಗಿ ಅಧ್ಯಯನ, ಒಳದೃಷ್ಟಿಕೋನ ನಡೆಸಿ ತಮ್ಮ ವೃತ್ತಿಪರ ಪಾರಂಗತತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಂಕರ ಪಂಡಿತ ಮಾತನಾಡಿ, ನ್ಯಾಯವಾದಿಗಳ ಭವನ ಎನ್ನುವುದು ವಕೀಲ ಸಮುದಾಯದ ಜ್ಜಾನ ಪರಂಪರೆಯ ವೃದ್ಧಿಯ ಸ್ಥಳವಾಗಬೇಕು. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಕಾರ್ಯ ನ್ಯಾಯವಾದಿಗಳಿಂದ ಆಗಬೇಕಿದೆ.

ಹಾಗೆ ಒಳ್ಳೆಯ ವಾಚನಾಲಯವಿಲ್ಲದೆ ನ್ಯಾಯವಾದಿಗಳ ಭವನ ಕೂಡ ಪೂರ್ಣಗೊಳ್ಳಲಾರದು. ಹಾಗೆ ಯಾವ ನ್ಯಾಯವಾದಿಯೂ ಸದೃಢವಾಗಿ ವಾದ ಮಾಡಲು ಸಾಧ್ಯವಾಗಲಾರ. ನ್ಯಾಯವಾದಿ ಹಾಗೂ ನ್ಯಾಯಾಧೀಶ ಒಂದೇ ನಾಣ್ಯದ ಎರಡು ಮುಖಗಳಂತೆ. ಇರ್ವರಿಗೂ ಪರಸ್ಪರ ಸಹಕಾರ ಮುಖ್ಯವಾದದು ಎಂದರು.

ಉಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಮಾಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯವಾದಿಗಳ ಧೀರ್ಘಕಾಲದ ಕನಸಿನ ರೂಪಕ್ಕೆ ನೂತನ ಭವ್ಯ ಕಟ್ಟಡ ಸಾಕ್ಷಿಯಾಗಿ ನಿಂತಿದೆ. ಈ ಕಟ್ಟಡವನ್ನು ಕೇವಲ ಸಿಮೆಂಟ್‌ ಜಲ್ಲಿ ಬಳಸಿ ನಿರ್ಮಿಸಿಲ್ಲ. ಇದರಲ್ಲಿ ನಿಮ್ಮೆಲ್ಲರ ಪರಿಶ್ರಮದ ಬೆವರು ಬೆನ್ನೆಲೆಬಾಗಿ ನಿಂತಿರುವದು ಕಟ್ಟಡದ ನಿರ್ಮಾಣದ ಹಿಂದಿದ ಇತಿಹಾಸವೆ ಸ್ಪಷ್ಟಪಡಿಸುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷೆ ಪ್ರತಿಭಾ ನಾಯ್ಕ ಮಾತನಾಡಿದರು. ಕಾರ್ಯದರ್ಶಿ ಮಮತಾ ಕೆರೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಿಯಾ ಜೋಗಳೇಕರ, ಪ್ರಧಾನ ಸಿವಿಲ್ ಜಡ್ಜ್ ನ್ಯಾಯಾಧೀಶೆ, ಅರ್ಪಿತಾ ಬೆಲ್ಲದ, ಉಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ, ಪೊಲೀಸ್ ವರಿಷ್ಠಾದಿಕಾರಿ ಎಂ.ಎನ್. ದೀಪನ್, ಕುಮಟಾ ಉಪ ವಿಭಾಗಾಧಿಕಾರಿ ಜುಲ್ಪಿಯಾ ಹಕ್, ತಹಸೀಲ್ದಾರ ಚಿಕ್ಕಪ್ಪ ನಾಯ್ಕ, ಲೋಕೊಪಯೋಗಿ ಇಲಾಖೆಯ ಅಭಿಯಂತರರಾದ ರಾಮು ಅರ್ಗೆಕರ, ಮರ್ಲಿಕಾರ್ಜುನ ಉಪಸ್ಥಿತರಿದ್ದರು.ನ್ಯಾಯವಾದಿ ನಾಗಾನಂದ ಬಂಟ ಸ್ವಾಗತಿಸಿದರು. ನ್ಯಾಯವಾದಿ ಎಂ.ಪಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳಾದ ವಿನೋದ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿಗಳಾದ ಶಾಂತಾ ಹೆಗಡೆ, ಗುರು ನಾಯ್ಕ ಪರಿಚಯಿಸಿದರು. ನ್ಯಾಯವಾದಿ ಉಮೇಶ ನಾಯ್ಕ ವಂದಿಸಿದರು.