ಸಾರಾಂಶ
ವಿದ್ಯಾರ್ಥಿ ದೆಸೆಯಲ್ಲಿ ಶ್ರಮವಹಿಸಿ ಅಧ್ಯಯನ ನಡೆಸಿ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಎಂದು ನಿವೃತ್ತ ನ್ಯಾಯಾಧೀಶ ಎಚ್.ಎಸ್. ರುದ್ರಪ್ಪ ಕಿವಿಮಾತು ಹೇಳಿದರು.
ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ವಿದ್ಯಾರ್ಥಿ ದೆಸೆಯಲ್ಲಿ ಶ್ರಮವಹಿಸಿ ಅಧ್ಯಯನ ನಡೆಸಿ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಎಂದು ನಿವೃತ್ತ ನ್ಯಾಯಾಧೀಶ ಎಚ್.ಎಸ್. ರುದ್ರಪ್ಪ ಕಿವಿಮಾತು ಹೇಳಿದರು.ನಗರದ ಸಹ್ಯಾದ್ರಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಜನೆಗೆ ಹಿಂದಿನ ಕಾಲದಲ್ಲಿ ಇಂದಿನಷ್ಟು ಸೌಲಭ್ಯಗಳು ಇರಲಿಲ್ಲ, ಶಿಕ್ಷಣಕ್ಕೆ ಸರ್ಕಾರ ಇಂದು ಅನೇಕ ಸೌಲಭ್ಯ ನೀಡುತ್ತಿದೆ. ಸೌಲಭ್ಯ ಸದುಪಯೋಗಪಡಿಸಿಕೊಂಡು ಶ್ರಮವಹಿಸಿ ವಿದ್ಯಾರ್ಜನೆ ಮಾಡಿ ಗುರಿ ಮುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಕಷ್ಟಪಡುತ್ತಾರೆ. ಆದರೆ, ಕೆಲ ವಿದ್ಯಾರ್ಥಿಗಳು ದುಶ್ಚಟ ಹಾಗೂ ಮೊಬೈಲ್ ಗೀಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಗೆ ದಾಸರಾಗದೆ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಪೋಷಕರ ಕನಸು ಈಡೇರಿಸುವಂತೆ ಕರೆ ನೀಡಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಸಹ್ಯಾದ್ರಿ ಪ್ಯಾರಾಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ನಳಿನಾ ಡಿ’ಸಾ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕು. ತಂದೆ-ತಾಯಿ ಪರಿಶ್ರಮಕ್ಕೆ ಗೌರವ ನೀಡಿ ಸಮಯ ವ್ಯರ್ಥ ಮಾಡದೆ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಉಲ್ಲಾಸ್‌ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿದರು. ಉಪನ್ಯಾಸಕಿ ವಜೀದಾ ನಿರೂಪಿಸಿದರು. ಪ್ರಗತಿ ವಂದಿಸಿದರು.