ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನಸ್ಸನ್ನು ನಿಯಂತ್ರಣ ಮಾಡಲು ಬಸವಾದಿ ಶರಣರ ವಚನಗಳು ಬೇಕು. ವಚನಗಳ ಅಧ್ಯಯನ ಮಾಡಿ ಅದರಂತೆ ನಡೆದರೆ ಮಾನವನ ಮನಸ್ಸನ್ನು ನಿಯಂತ್ರಿಸಲು ಸಾಧ್ಯ, ಬದುಕು ಅಪಘಾತವಾಗುವುದಿಲ್ಲ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.ನಗರದ ದೊಡ್ಡಪೇಟೆ ವಿರಕ್ತಮಠದಲ್ಲಿ ಬಸವಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ನಡೆದ ಶ್ರಾವಣ ಮಾಸದ ಕಲ್ಯಾಣದಿಂದ ಉಳವಿಯಡೆಗೆ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ವಚನಗಳು ಜೀವನದ ಎಡರು ತೊಡರು, ಕಷ್ಟ ನೋವು, ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವ, ನೋವು ನಲಿವನ್ನು, ಹೊಗಳಿಕೆ ತೆಗಳಿಕೆಯನ್ನು ಸಮದೃಷ್ಠಿಯಿಂದ ಕಾಣುವ ಕಲೆ ಕಲಿಸುತ್ತದೆ ಎಂದರು.
ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು. ಆ ಕಾಯಕ ಯಾವುದಾದರೂ ಆಗಲಿ ಅದರೊಳಗೆ ಆನಂದವನ್ನು ಕಂಡರೆ ಅದಕ್ಕಿಂತ ಬೇರೆ ಕೈಲಾಸವಿಲ್ಲ. ಜೀವನದಲ್ಲಿ ಖಿನ್ನತೆಗೆ ಒಳಗಾಗಿ, ಅತಿಯಾದ ಹೊಯ್ದಾಟಕ್ಕೆ ಒಳಗಾದ ಇಂದಿನ ಯುವ ಸಮುದಾಯದವರು, ದುಡಿಯುವ ಜನರು, ವ್ಯಾಪಾರಸ್ಥರು, ಗೃಹಿಣಿಯರು, ವೃತ್ತಿಪರರು, ವಿದ್ಯಾರ್ಥಿಗಳು ಹೀಗೆ ವಿವಿಧ ಸ್ತರದಲ್ಲಿರುವವರಿಗೂ ನಿರಾಳದ ಬದುಕಿಗೆ ಅಡಿಪಾಯವನ್ನು ಒದಗಿಸುತ್ತದೆ. ಶಾರೀರಿಕ ಆರೋಗ್ಯ ಪಡೆಯುವುದರೊಂದಿಗೆ ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯ ಸಾಧಿಸಿ ನೆಮ್ಮದಿ ಸಂತೃಪ್ತಿ ಜೀವನವನ್ನು ನಡೆಸಲು ನಮಗೆ ಬಸವಾದಿ ಶರಣರ ವಚನಗಳು ಬೇಕು ಎಂದು ಹೇಳಿದರು.ಮನುಷ್ಯನ ಬದುಕಿಗೆ ಒಂದು ದಿನ ಸಾವಿದೆ ಸಾವನ್ನು ಗೆಲ್ಲಬೇಕಾದರೆ ಬಸವಾದಿ ಶರಣರ ಜೀವನ ಚರಿತ್ರೆಯನ್ನು ಯಾರು ಕೇಳುತ್ತಾರೋ ಅವರು ಸಾವನ್ನು ಗೆಲ್ಲುತ್ತಾರೆ ಸಾವನ್ನು ಗೆದ್ದು ಇಂದಿಗೂ ಬಸವಾದಿ ಶರಣರು ಬದುಕಿದ್ದಾರೆ ಹಾಗಾಗಿ ಬಸವಾದಿ ಶರಣರು ಅಳಿದು ಹೋದ ಜೀವಗಳು ಅಲ್ಲ. ಉಳಿದ ಜೀವಗಳು ಅರ್ಥಾತ್ ಸಾವಿಲ್ಲದ ಜೀವಗಳು ಅವರು ಸೂರ್ಯ ಚಂದ್ರರಿರವರೆಗೂ ಶಾಶ್ವತ ಚೇತನವಾಗಿದ್ದಾರೆ ಎಂದು ನುಡಿದರು.
ಸಮಾರಂಭದಲ್ಲಿ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಪ್ರವಚನ ಮಾಡುತ್ತಾ, ಚೆನ್ನಬಸವಣ್ಣನವರ ಜೀವನ ಚರಿತ್ರೆಯನ್ನು ನಾವು ಒಂದು ತಿಂಗಳ ಕಾಲ ಹೇಳಿದ್ದೇವೆ. ಕಲ್ಯಾಣ ಕ್ರಾಂತಿ ನಂತರ ಉಳವಿಗೆ ಬಂದ ಸಂದರ್ಭವನ್ನು ಪ್ರವಚನದಲ್ಲಿ ಹೇಳಿದ್ದೇವೆ. ಶ್ರೀಮಠದಲ್ಲಿ ಇದು 114 ನೇ ವರ್ಷದ ಪ್ರವಚನವಾಗಿದೆ ಎಂದರು.ಸಮಾರಂಭದಲ್ಲಿ ಚಿತ್ರದುರ್ಗ ಬೃಹನ್ಮಠದ ಉತ್ತರಾಧಿಕಾರಿ ಬಸವಾಧಿತ್ಯ ದೇವರು, ಶ್ರೀಮಠದ ಹಾಸಬಾವಿ ಕರಿಬಸಪ್ಪ, ಚಿಗಟೇರಿ ಜಯದೇವ, ಉಳುವಯ್ಯ, ಕುಂಟೋಜಿ ಚನ್ನಪ್ಪ, ಚಿತ್ರದುರ್ಗದ ಜಿತೇಂದ್ರ ಹುಲಿಕುಂಟೆ, ಚಿಂದೋಡಿ ವೀರಣ್ಣ, ಎಸ್.ಜಿ.ಸಂಗಪ್ಪ, ಶೋಭಾ ಪಲ್ಲಾಗಟ್ಟೆ, ಕುಂಟೋಜಿ ಚನ್ನಪ್ಪ, ಲಂಬಿ ಮುರುಗೇಶ, ಉಳುವಯ್ಯ, ಕುದರಿ ಉಮೇಶ, ಬೆಳ್ಳೂಡಿ ಮಂಜುನಾಥ, ಮಹಾದೇವಮ್ಮ ಇತರರು ಭಾಗವಹಿಸಿದ್ದರು.