ಭಗವದ್ಗೀತೆ ಅಧ್ಯಯನ ಮಾಡಿ ಬದುಕು ಸುಂದರವಾಗಿಸಿಕೊಳ್ಳಿ

| Published : Oct 30 2025, 01:45 AM IST

ಸಾರಾಂಶ

ಭಗವದ್ಗೀತೆಯು ವ್ಯಕ್ತಿಯ ಪರಿಪೂರ್ಣ ಜೀವನಕ್ಕೆ ಅಗತ್ಯವಾದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಅಧ್ಯಯನದ ಮೂಲಕ ಬದುಕನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವಂತೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಶಿಕಾರಿಪುರ: ಭಗವದ್ಗೀತೆಯು ವ್ಯಕ್ತಿಯ ಪರಿಪೂರ್ಣ ಜೀವನಕ್ಕೆ ಅಗತ್ಯವಾದ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಅಧ್ಯಯನದ ಮೂಲಕ ಬದುಕನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವಂತೆ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದರು.ಮಂಗಳವಾರ ಸಂಜೆ ಪಟ್ಟಣದ ಶ್ರೀ ದತ್ತ ಕೇವಲಾನಂದಾಶ್ರಮದ ಸಮುದಾಯ ಭವನದಲ್ಲಿ ನಡೆದ ಭಗವದ್ಗೀತಾ ಅಭಿಯಾನ-2025ಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.ಮನುಷ್ಯ ಇಂದು ಹಲವು ರೀತಿಯ ವಿಕಾರಗಳಿಗೆ ಬಲಿಯಾಗುತ್ತಿದ್ದು, ವಿಕೃತವಾಗಿರುವ ಮನಸ್ಸು ಅಡ್ಡದಾರಿಯನ್ನು ಹಿಡಿಯಲು ಹೆಚ್ಚು ಹೆಚ್ಚು ಪ್ರೇರೇಪಿಸುತ್ತದೆ. ಇದರಿಂದಾಗಿ ಸಮಾಜದಲ್ಲಿ ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ, ಮಾದಕ ದ್ರವ್ಯ ಸೇವನೆ, ಕೌಟುಂಬಿಕ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಎಲ್ಲ ಸಮಸ್ಯೆಗಳಿಗೆ ವಿಕೃತ ಮನಸ್ಸು ಮುಖ್ಯ ಕಾರಣವಾಗಿದ್ದು, ಅಪಕ್ವ ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರವಾಗಿದೆ ಎಂದು ತಿಳಿಸಿದರು. ಆಧ್ಯಾತ್ಮ ವಿದ್ಯೆಯ ಆಕಾರ ಗ್ರಂಥವಾಗಿರುವ ಭಗವದ್ಗೀತೆಯು ಸಮಾಜದಲ್ಲಿ ಸುಖಃ ಶಾಂತಿ ನೆಮ್ಮದಿ ನೆಲೆಸುವಂತೆ ಹಾಗೂ ಪ್ರತಿಯೊಬ್ಬರನ್ನು ಸುಸಂಸ್ಕೃತರಾಗಿ ರೂಪಿಸಲಿದೆ ಎಂದ ಅವರು, ವ್ಯಕ್ತಿಯ ಪರಿಪೂರ್ಣ ಬದುಕಿಗೆ ಅಗತ್ಯವಾದ ಎಲ್ಲ ಅಂಶಗಳನ್ನು ಭಗವದ್ಗೀತೆ ಒಳಗೊಂಡಿದ್ದು, ಪ್ರತಿಯೊಬ್ಬರೂ ಅಧ್ಯಯನದ ಮೂಲಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಈಗಾಗಲೇ ಮಹಾಸಂಸ್ಥಾನದಿಂದ ಭಗವದ್ಗೀತಾ ಅಭಿಯಾನವನ್ನು ನಾಡಿನಾದ್ಯಂತ ಆರಂಭಿಸಲಾಗಿದ್ದು, ರಾಜ್ಯಾದ್ಯಂತ ಯಶಸ್ವಿಯಾಗಿದೆ. ಗೀತೆಯ ಮೂಲಕ ವ್ಯಕ್ತಿ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯಬೇಕು ಎಂಬ ಸಂಕಲ್ಪದ ಮೇರೆಗೆ ಅಭಿಯಾನ ಸದಾಕಾಲ ನಡೆಸುವ ಉದ್ದೇಶವನ್ನು ಹೊಂದಲಾಗಿದೆ. ಭಗವದ್ಗೀತೆಯ 11ನೇ ಅಧ್ಯಾಯವನ್ನು (ವಿಶ್ವರೂಪ ದರ್ಶನ) ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಗೀತಾ ಕಂಠಪಾಠ ಸ್ಪರ್ಧೆಯನ್ನು ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು, ಕಂಠಪಾಠ ಸ್ಪರ್ಧೆಯಲ್ಲಿ 11ನೇ ಅಧ್ಯಾಯದಲ್ಲಿ ನಿರ್ಣಾಯಕರು ಸೂಚಿಸುವ ಶ್ಲೋಕಗಳನ್ನು ಅನುಕ್ರಮವಾಗಿ ಪಠಿಸಬೇಕು, ಭಾಷಣ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಷಯ ನೀಡಲಾಗುವುದು ಎಂದು ತಿಳಿಸಿದರು.ನ್ಯಾಯವಾದಿ, ತಾ.ವಿಪ್ರ ಸಮಾಜದ ಮುಖಂಡ ಕೆ.ಎಸ್.ವಸಂತಮಾಧವ ಮಾತನಾಡಿದರು. ಆರಂಭದಲ್ಲಿ ಶ್ರೀಗಳಿಗೆ ಫಲ ಸಮರ್ಪಣೆ ಮೂಲಕ ಗೌರವಿಸಲಾಯಿತು. ನಂತರದಲ್ಲಿ ವಿವಿಧ ಸಮಿತಿ ರಚಿಸಲಾಯಿತು. ಈ ವೇಳೆ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಅಪರ್ಣಾ, ತಾ.ವಿಪ್ರ ಸಮಾಜದ ಮುಖಂಡ ವೆಂಕಟೇಶ್, ರೂಪ, ಸತೀಶ್, ಶಾಲಾಸ್ತ್ರಿ ತಮ್ಮಯ್ಯ, ಜಯಲಕ್ಷ್ಮಿ, ಲಕ್ಷ್ಮಿನಾರಾಯಣ, ದಿವಾಕರ ದೀಕ್ಷಿತ್, ರಾಘವೇಂದ್ರ ಕುಲಕರ್ಣಿ, ಶೇಷಾದ್ರಿ ದೀಕ್ಷಿತ್, ಪದ್ಮಜಾ, ಪುರೋಹಿತ್ ಗಣಪತಿ ಭಟ್, ಹರೀಶ್ ಜೋಯ್ಸ್, ಶಿವರಾಂ ಭಟ್, ಅಂಜನಾರಾವ್, ಶ್ರೀಪತಿ, ಗೌರಿಭಟ್, ಸುಕನ್ಯಾ, ವಸಂತಿ, ಪಲ್ಲವಿ, ನಿರ್ಮಲಾ ಪೈ,ಎಸ್.ಬಿ ಮಠದ್, ಸಾವಿತ್ರಿ ಹೆಗಡೆ, ಅಭಿಯಾನ ಸಮಿತಿ ಸಂಚಾಲಕ ನಿವೃತ್ತ ಪ್ರಾಚಾರ್ಯ ಆರ್.ಡಿ.ಹೆಗಡೆ, ಜಿ.ವಿ.ಹೆಗಡೆ, ಪಿ.ಪಿ.ಹೆಗಡೆ ಇತರರಿದ್ದರು.