ಗೀತೆಯು ಭಕ್ತಿ, ಕರ್ಮ ಹಾಗೂ ತತ್ತ್ವಜ್ಞಾನದ ಮಾರ್ಗವನ್ನು ಬೋಧಿಸಿದರೆ, ವಿಷ್ಣು ಸಹಸ್ರನಾಮವು ಭಕ್ತಿಯ ಪ್ರಾಯೋಗಿಕ ಅನುಷ್ಠಾನಕ್ಕೆ ದಾರಿದೀಪವಾಗಿದೆ.

ಶಿರಸಿ: ಮನುಷ್ಯನ ಆಧ್ಯಾತ್ಮಿಕ ಅಭ್ಯುದಯದ ಜತೆಗೆ ದೈನಂದಿನ ಜೀವನಕ್ಕೆ ಧಾರ್ಮಿಕ ಚೌಕಟ್ಟನ್ನು ರೂಪಿಸಿಕೊಳ್ಳಲು ಭಗವದ್ಗೀತೆ ಹಾಗೂ ಸ್ತೋತ್ರಗಳಲ್ಲಿ ಶಂಕರಾಚಾರ್ಯರು ನಿರೂಪಿಸಿರುವ ನಾಲ್ಕು ಪ್ರಮುಖ ಹಿತವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಶ್ರೀಮಠದಲ್ಲಿ ಕರೂರು ಸೀಮೆಯ ಶಿಷ್ಯಭಕ್ತರು ಉಭಯ ಶ್ರೀಗಳ ಚಾತುರ್ಮಾಸ್ಯ ವೇಳೆ ಏರ್ಪಡಿಸಿದ್ದ ಪಾದಪೂಜೆ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.

ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮಗಳ ನಿರಂತರ ಪಠಣ, ಶ್ರೀಪತಿ ವಿಷ್ಣುವಿನ ರೂಪದ ಸತತ ಧ್ಯಾನ, ಸಜ್ಜನ- ಸಾತ್ವಿಕರ ಸಾಂಗತ್ಯ ಹಾಗೂ ದೀನ- ದುರ್ಬಲರು ಮತ್ತು ಆಪತ್ತಿನಲ್ಲಿರುವವರಿಗೆ ಶಕ್ತ್ಯಾನುಸಾರ ನೆರವು ನೀಡುವ ದಾನಧರ್ಮ- ಈ ನಾಲ್ಕು ತತ್ತ್ವಗಳು ಪ್ರತಿಯೊಬ್ಬ ಸಾಧಕನ ಆಧ್ಯಾತ್ಮಿಕ ಜೀವನದ ಅಡಿಪಾಯವಾಗಿವೆ ಎಂದರು.ಪ್ರತಿದಿನ ಭಗವದ್ಗೀತೆಯ ಅಧ್ಯಯನ ಮಾಡುವುದರಿಂದ ಮನುಷ್ಯನಿಗೆ ತನ್ನ ಕರ್ತವ್ಯದ ಅರಿವು ಮೂಡುವುದಲ್ಲದೆ, ಜೀವನದ ನೈಜ ಉದ್ದೇಶ ಹಾಗೂ ಸಾಗಬೇಕಾದ ದಾರಿ ಸ್ಪಷ್ಟವಾಗುತ್ತದೆ. ಸಾಧ್ಯವಾದವರು ಪ್ರತಿದಿನ ಕನಿಷ್ಠ ಒಂದು ಅಧ್ಯಾಯವನ್ನಾದರೂ ಅಭ್ಯಾಸ ಮಾಡಬೇಕು. ಸಮಯದ ಅಭಾವವಿದ್ದಲ್ಲಿ ಹದಿನೆಂಟು ಅಥವಾ ಇಪ್ಪತ್ತೆರಡು ದಿನಗಳಲ್ಲಿ ಇಡೀ ಗೀತೆಯನ್ನು ಪೂರ್ಣಗೊಳಿಸುವ ರೀತಿಯಲ್ಲಿ ಅಧ್ಯಯನವನ್ನು ವಿಂಗಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಗೀತೆಯು ಭಕ್ತಿ, ಕರ್ಮ ಹಾಗೂ ತತ್ತ್ವಜ್ಞಾನದ ಮಾರ್ಗವನ್ನು ಬೋಧಿಸಿದರೆ, ವಿಷ್ಣು ಸಹಸ್ರನಾಮವು ಭಕ್ತಿಯ ಪ್ರಾಯೋಗಿಕ ಅನುಷ್ಠಾನಕ್ಕೆ ದಾರಿದೀಪವಾಗಿದೆ. ಪ್ರಸ್ತುತ ಕಾಲದಲ್ಲಿ ಲೌಕಿಕ ಕಷ್ಟ- ಕಾರ್ಪಣ್ಯಗಳಿಂದ ಮುಕ್ತಿ ಪಡೆಯುವುದಕ್ಕೆ ಮಾತ್ರವಲ್ಲದೆ, ಭಗವಂತನಲ್ಲಿ ನಿಷ್ಕಾಮ ಭಕ್ತಿಯನ್ನು ಬೆಳೆಸಿಕೊಳ್ಳಲು ಗೀತೆ ಹಾಗೂ ಸಹಸ್ರನಾಮಗಳ ಪಠಣ ಅತ್ಯಂತ ಅಗತ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು. ಉಮಾಪತಿ ಭಟ್, ಮಂಜುನಾಥ ಹೆಗಡೆ ಕಬ್ನಳ್ಳಿ ಸುಬ್ರಾಯ ಹೆಗಡೆ, ಗಣಪತಿ ಹೆಗಡೆ, ಮಹಾಬಲೇಶ್ವರ ಹೆಗಡೆ, ಗಣಪತಿ ಭಟ್ ಇತರರು ಇದ್ದರು.