ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಯಬೇಕಾದರೆ ಹಳಗನ್ನಡ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇಂದು ನಮ್ಮ ನಿರ್ಲಕ್ಷ್ಯದಿಂದ ಹಳಗನ್ನಡ ಅಳಿವಿನ ಅಂಚಿನಲ್ಲಿದ್ದು, ಅದನ್ನು ಸಂರಕ್ಷಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಹಿರಿಯ ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಭವನದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಯುಜಿಸಿಯೇತರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಅನುಸಂಧಾನ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಕನ್ನಡ ಶಾಲು, ಕನ್ನಡ ಪುಸ್ತಕ ನೀಡಿ ಅವರು ಮಾತನಾಡಿದರು.
ಸುಮಾರು 400ಕ್ಕೂ ಹೆಚ್ಚು ಹಳಗನ್ನಡ ಕಾವ್ಯಗಳು ಲಭ್ಯವಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದ ಮಹತ್ವದ ಪ್ರಯೋಗಗಳ ಅರಿವು ಇಂದಿನ ಹೊಸ ತಲೆಮಾರಿಗೆ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಸಾಹಿತ್ಯದ ಪ್ರಸಾರ ಮತ್ತು ಕನ್ನಡದ ಬೆಳವಣಿಗೆಗೆ ಬಳಸಿಕೊಳ್ಳುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಅರುಣಕುಮಾರ ಗಾಳಿ ಅವರು ಮಾತನಾಡಿ, ಹಳಗನ್ನಡ ಕನ್ನಡಿಗರ ಭಾಷಾ ಅಸ್ಮಿತೆಯ ಪ್ರತೀಕವಾಗಿದೆ. ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಗೆ ಹಳಗನ್ನಡದ ಅರಿವು ಕೂಡ ಅಗತ್ಯವಾಗಿದ್ದು, ಕುಮಾರವ್ಯಾಸನ ಪದ್ಯವನ್ನು ಹೇಳುವ ಮೂಲಕ ಅದರ ಅಧ್ಯಯನ ನಮ್ಮಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆರಂಭಗೊಂಡಿರುವ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಆಶಯ ನುಡಿಯನ್ನಾಡಿದ ಬಾ.ವಿ.ವಿ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಯುಜಿಸಿಯೇತರ ಸಂಘದ ನೂತನ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಾಳನ್ನವರ ಅವರು ಇಂದಿನ ಪದವಿ ವಿದ್ಯಾರ್ಥಿಗಳಿಗೆ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾಲಘಟ್ಟದ ಸಾಹಿತ್ಯ ಕೃತಿಗಳ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸದುದ್ದೇಶ ಹೊಂದಿದೆ ಎಂದರು.
ಕನ್ನಡ ವಿಷಯದ ಮೌಲ್ಯಮಾಪನ ಕೇಂದ್ರ ಚೇರಮನ್ ಡಾ.ಎ.ಎಂ.ಸತ್ಯನಾಯಕ, ನವನಗರ ಸ.ಪ್ರ.ದ.ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಪರಸಪ್ಪ ತಳವಾರ, ನವನಗರ ಸ.ಪ್ರ.ದ.ಕಾಲೇಜಿನ ಬಾಗಲಕೋಟೆ ವಿಶ್ವವಿದ್ಯಾಲಯ ಮೌಲ್ಯಮಾಪನ ಕೇಂದ್ರ ಸಂಚಾಲಕ ಡಾ.ಸಂಪತ್ತ ಲಮಾಣಿ, ಡಾ.ಬಸವರಾಜ ಬೀಳಗಿ, ಪ್ರಧಾನ ಕಾರ್ಯದರ್ಶಿ ಎಸ್.ಸಿ.ಗದ್ಯಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರಿಕಾಂತ ಕೆಂಧೂಳಿ ಪ್ರಾರ್ಥನೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಎಸ್.ಸಿ.ಗದ್ಯಾಳ ಸ್ವಾಗತಿಸಿದರು, ಕೋಶಾಧ್ಯಕ್ಷ ಡಾ.ಬಸವರಾಜ ಖೋತ ಅತಿಥಿಗಳ ಪರಿಚಯಿಸಿದರು, ಡಾ.ಪುಂಡಲೀಕ ಹುನ್ನಳ್ಳಿ ನಿರೂಪಿಸಿದರು, ಡಾ.ಶಂಕರ ಕೋಳಿ ವಂದಿಸಿದರು. ಎಲ್ಲಾ ಅಧ್ಯಾಪಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕನ್ನಡವನ್ನು ಸರಿಯಾಗಿ ಓದುವ ಹಾಗೂ ಹಳಗನ್ನಡವನ್ನು ಅರ್ಥೈಸುವ ಸಾಮರ್ಥ್ಯ ಬೆಳೆಸುವ ಕಾರ್ಯಗಳು ಕಡಿಮೆಯಾಗುತ್ತಿವೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಳಗನ್ನಡ ಇಂದು ಪುಸ್ತಕಗಳಲ್ಲಿ ಉಳಿದಿದ್ದು, ಹಳಗನ್ನಡದ ಬಗ್ಗೆ ನಿರ್ಲಕ್ಷ್ಯ ಮುಂದುವರಿದರೆ ಸಂಸ್ಕೃತದಂತೆ ಮೃತಭಾಷೆಯಾಗುವ ಅಪಾಯವಿದೆ.-ಡಾ.ವೈ.ಎಂ.ಯಾಕೊಳ್ಳಿ, ಹಿರಿಯ ಸಾಹಿತಿ