ಸಂಸ್ಕೃತ ಅಧ್ಯಯನದಿಂದ ಮಾನಸಿಕ ಸದೃಢತೆ ವೃದ್ಧಿ

| Published : Aug 12 2025, 12:30 AM IST

ಸಂಸ್ಕೃತ ಅಧ್ಯಯನದಿಂದ ಮಾನಸಿಕ ಸದೃಢತೆ ವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದಲ್ಲಿಯೇ ಮಕ್ಕಳು ಸಂಸ್ಕೃತ ಅಧ್ಯಯನ ಮಾಡಿದರೆ, ಆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತದೆ. ಅಂತಹ ಶಕ್ತಿ ಸಂಸ್ಕೃತಕ್ಕಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.

ಶಿವಮೊಗ್ಗ: ಬಾಲ್ಯದಲ್ಲಿಯೇ ಮಕ್ಕಳು ಸಂಸ್ಕೃತ ಅಧ್ಯಯನ ಮಾಡಿದರೆ, ಆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುತ್ತದೆ. ಅಂತಹ ಶಕ್ತಿ ಸಂಸ್ಕೃತಕ್ಕಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಟರಾಜ್ ಭಾಗವತ್ ತಿಳಿಸಿದರು.

ನಗರದ ಬಿ.ಎಚ್.ರಸ್ತೆಯಲ್ಲಿರುವ ಹೋಟೆಲ್ ಜೈ ಮಾತಾ ಗ್ರ್ಯಾಂಡೂರ್‌ನಲ್ಲಿ ಸಂಸ್ಕೃತ ಭಾರತೀ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರು ಆಯೋಜಿಸಿದ್ದ ಸಂಸ್ಕೃತೋತ್ಸವ ಪ್ರಯುಕ್ತ ಜೈ ಮಾತಾ ಸಂಸ್ಕೃತ ಬಾಲಕೇಂದ್ರದಿಂದ ಹಮ್ಮಿಕೊಂಡಿದ್ದ ಭಗವದ್ಗೀತಾ ಪಠಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗೀತೆ, ಸುಭಾಷಿತ, ನಿತ್ಯ ಪಠಣ ಶ್ಲೋಕಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕಲಿತರೆ ಅದು ಅವರ ಜೀವನದ ಕಡೆಯವರೆಗೂ ಆ ಸಂಸ್ಕಾರ ಉಳಿಯುತ್ತದೆ. ಇದರಿಂದ ಅವರ ಮಾನಸಿಕತೆಯು ದೃಢವಾಗುತ್ತದೆ ಎಂದರು.

ಇಂದು ಸಂಸ್ಕೃತ ದಿನ. ಎಲ್ಲಾ ಕಡೆ ಸಂಸ್ಕೃತ ದಿನದ ಆಚರಣೆ ನಡೆಯುತ್ತಿದೆ. ಜಗತ್ತಿನ ಅತ್ಯಂತ ವೈಜ್ಞಾನಿಕ ಭಾಷೆ ಸಂಸ್ಕೃತ. ಇದು ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಬಹಳ ಕಷ್ಟ. ಅತಿ ಪ್ರಾಚೀನ ಭಾಷೆ ಎಂದು ಜಗತ್ತಿನಲ್ಲಿ ಗುರುತಿಸಲ್ಪಟ್ಟಿದೆ. ಇತ್ತೀಚಿನ ಕಾಲದಲ್ಲಿ ಕಾಲಗಣನೆಯನ್ನು ಕ್ರಿಸ್ತನ ಹುಟ್ಟುವಿನ ಜೊತೆಗೆ ಜೋಡಿಸುತ್ತಾರೆ. ನಾವು ಯುಗದ ಪರಿಕಲ್ಪನೆಯನ್ನು ಹೊಂದಿರುವಂತಹ ಜನ. ನಮ್ಮ ಪರಂಪರೆ, ಸಂಸ್ಕೃತಿಯ ಕಾಲ ಯುಗದ ಲೆಕ್ಕದಲ್ಲಿಯೇ ಇದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಸಂಸ್ಕೃತ ಕೇವಲ ಮೇಲ್ವರ್ಗದ ಜನರ ಭಾಷೆ ಎಂದು ತಿರುಚುವ ಮಂದಿಯೂ ಇದ್ದಾರೆ. ಆದರೆ ರಾಮಾಯಣ ಬರೆದ ವಾಲ್ಮೀಕಿ ಕೂಡ ಸಂಸ್ಕೃತದಲ್ಲಿಯೇ ಕಾವ್ಯ ರಚಿಸಿದ್ದು. ಇದೇ ರೀತಿ ಎಲ್ಲ ವರ್ಗಕ್ಕೆ ಸೇರಿದ ಕವಿಗಳು ಕೂಡ ಸಂಸ್ಕೃತದಲ್ಲಿಯೇ ಕಾವ್ಯ ರಚಿಸಿದ್ದರು ಎಂದು ತಿಳಿಸಿದರು.

ಇತ್ತೀಚಿಗೆ ಕೇಂದ್ರ ಸರ್ಕಾರ ಗುರುಕುಲದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಐಐಟಿಯಲ್ಲಿ ನೇರ ಪ್ರವೇಶ ಸಿಗುವಂತೆ ಮಾಡಿದೆಯಲ್ಲದೆ, ಅವರಿಗೆ ಪ್ರತಿ ತಿಂಗಳ ಶಿಷ್ಯ ವೇತನ ಕೂಡ ನಿಗದಿಪಡಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಸಂಸ್ಕೃತಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಿಂದೆ ಕೇವಲ ಮತ್ತೂರು ಗ್ರಾಮ ಮಾತ್ರ ಸಂಸ್ಕೃತ ಗ್ರಾಮ ಎಂದು ಘೋಷಣೆಯಾಗಿತ್ತು. ಆದರೆ ಇಂದು ದೇಶದಲ್ಲಿ ಎಂಟು ಗ್ರಾಮಗಳಲ್ಲಿ ಸಂಸ್ಕೃತ ಮನೆ ಮಾತಾಗಿದೆ. ಜರ್ಮನಿ ದೇಶದಲ್ಲಿ ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತೀ ಹಿರಿಯ ಕಾರ್ಯಕರ್ತ ರಾಮಕೃಷ್ಣ ಮಾತನಾಡಿದರು.

ಸಂಸ್ಕೃತ ಭಾರತಿಯ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಉಪಾಧ್ಯಕ್ಷ ಮತ್ತೂರು ಶ್ರೀನಿಧಿ ಉಪಸ್ಥಿತರಿದ್ದರು.

ಸಂಸ್ಕೃತ ಭಾರತಿಯ ನಗರ ಅಧ್ಯಕ್ಷ ಎಮ್.ಎಸ್.ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಮತ್ತು ಭಾಗ್ಯ ಪ್ರಾರ್ಥನೆ ಮಾಡಿದರು, ಮನು ಚವ್ಹಾಣ್ ಸ್ವಾಗತಿಸಿದರು, ಪದ್ಮಿನಿ ವಂದಿಸಿದರು.