ಸಾರಾಂಶ
ಬಡ ಮತ್ತು ಮಧ್ಯಮ ವರ್ಗದ ಪೊಷಕರಿಗೆ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರಿ ಶಾಲೆಗಳೆ ನಿಜವಾದ ದೇವಾಲಯಗಳಾಗಿವೆ. ಉತ್ತಮ ಪ್ರತಿಭಾವಂತ ಶಿಕ್ಷಕರಿರುವ ಶಾಲೆಯಲ್ಲಿ ಆಟ, ಊಟ ಸಮಸವಸ್ತ್ರ ಎಲ್ಲವೂ ಉಚಿತವಾಗಿ ಸಿಗಲಿದೆ. ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಶ್ರೀನಿವಾಸ್ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.ಶಾಲೆ ಪರಿಸರದಲ್ಲಿ ಹಾಗೂ ಶೌಚಾಲಯದಲ್ಲಿ ಶುಚಿತ್ವ ಇಲ್ಲದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ ಆವರಣ, ಶೌಚಾಲಯದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಮುಖ್ಯೋಪಾಧ್ಯರಿಗೆ ತಾಕೀತು ಮಾಡಿದರು.
ಶೌಚಾಲಯಕ್ಕೆ ನೀರಿನ ಸಂಪರ್ಕ ಕಡಿತವಾಗಿರುವುದನ್ನು ಕಂಡು ತಕ್ಷಣ ಬಗೆಹರಿಸಲು ಸ್ಥಳದಲ್ಲೆ ಇದ್ದ ಗ್ರಾಪಂ ಪಿಡಿಒಗೆ ಸೂಚಿಸಿದರು. ಸರ್ಕಾರಿ ಶಾಲಾಭಿವೃದ್ಧಿ ಮತ್ತು ಮೂಲ ಸೌಕರ್ಯಗಳನ್ನು ಉತ್ತಮ ಪಡಿಸಲು ಗ್ರಾಪಂ ಶಾಲಾ ಮುಖ್ಯಶಿಕ್ಷಕರೊಂದಿಗೆ ಸಹಕಾರ ನೀಡಬೇಕು ಎಂದರು.ಮಕ್ಕಳೆಲ್ಲರಿಗೂ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಿದ ಎಸಿ ಶ್ರೀನಿವಾಸ್, ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದೀರಾ. ನೀವು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು ಕೆಎಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯುವಂತಾಗಬೇಕು ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸಿ ಕೆ.ಶ್ರೀನಿವಾಸ್, ಬಡ ಮತ್ತು ಮಧ್ಯಮ ವರ್ಗದ ಪೊಷಕರಿಗೆ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರಿ ಶಾಲೆಗಳೆ ನಿಜವಾದ ದೇವಾಲಯಗಳಾಗಿವೆ. ಉತ್ತಮ ಪ್ರತಿಭಾವಂತ ಶಿಕ್ಷಕರಿರುವ ಶಾಲೆಯಲ್ಲಿ ಆಟ, ಊಟ ಸಮಸವಸ್ತ್ರ ಎಲ್ಲವೂ ಉಚಿತವಾಗಿ ಸಿಗಲಿದೆ. ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕರೆಕೊಟ್ಟರು.ಸರ್ಕಾರ ಸರ್ಕಾರಿ ಶಾಲಾಭಿವೃದ್ಧಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡಿದರೂ ಅದನ್ನು ಸದ್ಬಳಕೆ ಮಾಡುವಲ್ಲಿ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಗ್ರಾಪಂ ಪಿಡಿಒ ರಾಜೇಶ್, ಮುಖ್ಯೋಪಾದ್ಯಾಯ ಮಂಜುನಾಥ್ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.