ತಾಲೂಕಿನ ಕೋರಾ ಹೋಬಳಿ ಹಿರೇಕೊಡತಕಲ್ಲು ಗ್ರಾಮದ ಲಕ್ಷ್ಮೀನರಸ್ವಾಮಿ ದೇವಸ್ಥಾನಕ್ಕೆ ಸೇರಿದ 2.13 ಎಕರೆ ಭೂಮಿಗೆ ಖಾಸಗಿ ವ್ಯಕ್ತಿ ಅಕ್ರಮವಾಗಿ ಹೊಂದಿದ್ದ ಜಂಟಿ ಖಾತೆಯನ್ನು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ರದ್ದುಗೊಳಿಸುವ ಮೂಲಕ ದೇಗುಲದ ಭೂಮಿಯನ್ನು ದೇವಾಲಯಕ್ಕೆ ಉಳಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ತಾಲೂಕಿನ ಕೋರಾ ಹೋಬಳಿ ಹಿರೇಕೊಡತಕಲ್ಲು ಗ್ರಾಮದ ಲಕ್ಷ್ಮೀನರಸ್ವಾಮಿ ದೇವಸ್ಥಾನಕ್ಕೆ ಸೇರಿದ 2.13 ಎಕರೆ ಭೂಮಿಗೆ ಖಾಸಗಿ ವ್ಯಕ್ತಿ ಅಕ್ರಮವಾಗಿ ಹೊಂದಿದ್ದ ಜಂಟಿ ಖಾತೆಯನ್ನು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ರದ್ದುಗೊಳಿಸುವ ಮೂಲಕ ದೇಗುಲದ ಭೂಮಿಯನ್ನು ದೇವಾಲಯಕ್ಕೆ ಉಳಿಸಿಕೊಟ್ಟಿದ್ದಾರೆ.ತಾಲೂಕಿನ ಕೋರಾ ಹೋಬಳಿ ಹಿರೇಕೊಡತಕಲ್ಲು ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮೀನರಸ್ವಾಮಿದೇವರಿಗೆ ಸರ್ಕಾರ 2.13 ಎಕರೆ ಭೂಮಿಯನ್ನು ದೇಗುಲ ನಿರ್ವಹಣೆಗಾಗಿ ಮಂಜೂರು ಮಾಡಿದ್ದು, ಈ ಭೂಮಿ ಮಾಲೀಕತ್ವಕ್ಕೆ ಅನಧಿಕೃತವಾಗಿ ಸಿ.ಗಂಗಯ್ಯ ಎಂಬುವರನ್ನು ಸೇರಿಸಿ ಜಂಟಿ ಖಾತೆಯನ್ನು ಮಾಡಲಾಗಿತ್ತು. ಈ ಬಗ್ಗೆ ಹಿರೇಕೊಡತಕಲ್ಲು ಗ್ರಾಮದ ಸಿದ್ದಗಂಗಯ್ಯ, ಸ್ವಪ್ನ, ಸುಭಾಷ್ ಚಂದ್ರ, ಕೃಷ್ಣಪ್ಪ, ಪುಟ್ಟಗಂಗಮ್ಮ ಎಂಬುವರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿ ಪಹಣಿಯನ್ನು ಸೇರ್ಪಡೆಯಾಗಿರುವ ಸಿ.ಗಂಗಯ್ಯ ಅವರನ್ನು ಹೆಸರು ಕೈಬಿಡುವಂತೆ 2022-23ರಲ್ಲಿ ಮನವಿ ಮಾಡಿದ್ದರು.

ಸದರಿ ಪ್ರಕರಣದ ವಿಚಾರಣೆಯನ್ನು ನಡೆಸಿದ ಉಪವಿಭಾಗಾಧಿಕಾರಿ ನಾಹೀದಾ ಜಮ್‌ ಜಮ್ ಅವರು, ಮೂಲತಃ ಶಿಕ್ಷಕರಾಗಿರುವ ಸಿ.ಗಂಗಯ್ಯ ಅವರು ಸೇವೆಯಲ್ಲಿರುವಾಗಲೇ ಮೃತರಾಗಿದ್ದು, ಅನುಕಂಪದ ಆಧಾರದ ಮೇಲೆ ಸಿ.ಗಂಗಯ್ಯ ಅವರ ಅಳಿಯ ಕೆಲಸವನ್ನು ಪಡೆದಿರುವುದನ್ನು ಮನಗಂಡು, ಸರ್ಕಾರಿ ನೌಕರರಿಗೆ ಭೂ ಮಂಜೂರಾತಿ ಮಾಡಲು ಅವಕಾಶವಿಲ್ಲವೆಂಬುದನ್ನು ಪರಿಗಣಿಸಿದ್ದಾರೆ. ಅದರೊಂದಿಗೆ ಭೂ ಮಾಲೀಕತ್ವಕ್ಕೆ ಸೇರ್ಪಡೆಯಾಗಬೇಕಾದರೆ ಕಂದಾಯ ಇಲಾಖೆಗೆ ಭೂ ಮಾಲೀಕತ್ವಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಒದಗಿಸದೇ ಇರುವುದು ಹಾಗೂ ತಹಸೀಲ್ದಾರ್ ಅವರು ಮಂಜೂರಾತಿಯ ಮೂಲ ಕಡತವನ್ನು ಸಲ್ಲಿಸದೇ, ಇದು ಧಾರ್ಮಿಕ ದತ್ತಿ ಇಲಾಖೆಯ ಭೂಮಿ ಎಂದು ಸ್ಪಷ್ಟಪಡಿಸಿರುವುದಿಲ್ಲ. ಅದಾಗ್ಯೂ ಉಪವಿಭಾಗಾಧಿಕಾರಿಗಳು ಸರ್ಕಾರಿ ಹುದ್ದೆಯಲ್ಲಿದ್ದವರಿಗೆ ಭೂಮಿ ಮಂಜೂರಾತಿ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಕರ್ನಾಟಕ ಕೆಲವು ಇನಾಂ ರದ್ಧತಿ ಕಾಯ್ದೆ 1977 ಕಲಂ 5(2)(2)ರಂತೆ ಹಿರೇಕೊಡತಕಲ್ಲು ಗ್ರಾಮದ ಸ.ನಂ.2ರಲ್ಲಿ 2-13 ಎ/ಗುಂಟೆ ಜಮೀನಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ರವರು ನೀಡಿರುವ ಐಎನ್‌ಎಓಎಲ್‌ಆರ್‌ಎಂ:6/81-82 ಆದೇಶವನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.