ಕನಕಗಿರಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು.
ಕನಕಗಿರಿ: ಡಿ. 8ರೊಳಗಾಗಿ ತಾಲೂಕು ಕೇಂದ್ರದಲ್ಲಿ ಉಪ ನೋಂದಣಿ ಕಚೇರಿ ಕಾರ್ಯರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾರಟಗಿ ಉಪ ನೋಂದಣಿ ಕಚೇರಿಯಲ್ಲಿ ನವಲಿ ಭಾಗದವರು ಹೋಗಿ ನೋಂದಣಿ ಮಾಡಿಕೊಂಡಿಸಿಕೊಂಡಿದ್ದರು. ಈಗ ಅದೆಲ್ಲವೂ ಸರಿ ಮಾಡಿಕೊಂಡಿದ್ದು, ನವಲಿ ಗ್ರಾಮವನ್ನು ಕನಕಗಿರಿ ನೊಂದಣಿ ಕಚೇರಿ ಸೇರ್ಪಡೆಗೊಳಿಸಲಾಗಿದೆ. ಕಚೇರಿ ಕಾರ್ಯಾರಂಭಕ್ಕೆ ಇರುವ ಕೆಲವು ತೊಡಕುಗಳನ್ನು ಸರಿಪಡಿಸಲಾಗಿದೆ. ನವಲಿ ಗ್ರಾಮದ ಭೂಮಿಗಳ ನೋಂದಣಿಯು ಇನ್ಮುಂದೆ ಕನಕಗಿರಿಯಲ್ಲಿಯೇ ಆಗಲಿದೆ. ಅಲ್ಲದೇ ಉಪ ನೋಂದಣಿ ಕಚೇರಿ ಕಾರ್ಯಾರಂಭಕ್ಕೆ ಬೇಕಾದ ಪೀಠೋಪಕರಣಗಳ ಖರೀದಿಸಲು ಸರ್ಕಾರದಿಂದ ಅನುದಾನ ನೀಡಲಾಗಿದ್ದು, ಡಿ. 8ರೊಳಗಾಗಿ ಉಪ ನೋಂದಣಿ ಕಚೇರಿ ತೆರೆಯಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.ಇನ್ನೂ ಕನಕಗಿರಿಯಿಂದ ಕೊಪ್ಪಳಕ್ಕೆ ಬಸ್ ಸಂಪರ್ಕದ ಸಮಸ್ಯೆಯನ್ನು ಕೆಎಸ್‌ಆರ್‌ಟಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುತ್ತೇನೆ. ಮುಂದಿನ ಎರಡು ವರ್ಷದಲ್ಲಿ ಕ್ಷೇತ್ರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಕನಕ ಭವನ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಂದಿದ್ದು, ಜಾಗ ಗುರುತಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ನೂರು ಬೆಡ್ ಆಸ್ಪತ್ರೆಗೆ ₹34 ಕೋಟಿ ಅನುದಾನ ದೊರೆತಿದ್ದು, ಈ ಕಟ್ಟಡಕ್ಕೂ ಶಂಕುಸ್ಥಾಪನೆ ಮಾಡುವುದಾಗಿ ತಿಳಿಸಿದರು.
ಅಲ್ಲದೇ ಲೋಕೋಪಯೋಗಿ ಇಲಾಖೆಯ 5054 ಯೋಜನೆಯಡಿ ನಿರ್ಲೂಟಿಯಿಂದ ಗುಡದೂರು ವರೆಗೆ 10 ಕಿಮೀ ರಸ್ತೆ ಅಭಿವೃದ್ಧಿಗೆ ₹10 ಕೋಟಿ ಅನುದಾನ ಹಾಗೂ ಕೆ. ಮಲ್ಲಾಪುರ ಮತ್ತು ನಿರ್ಲೂಟಿ ಬಳಿ ಸೇತುವೆ ನಿರ್ಮಾಣಕ್ಕೆ ತಲಾ ₹5 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಸೋಮಸಾಗರದ ಬಳಿ ಸೇತುವೆ ನಿರ್ಮಾಣಕ್ಕೆ ₹5 ಕೋಟಿ, ಚಿಕ್ಕಮಾದಿನಾಳದಿಂದ ಕನಕಗಿರಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣಕ್ಕೆ ₹5 ಕೋಟಿ ಮತ್ತು ನವಲಿಯಿಂದ ಸಂಕನಾಳ ಸೇತುವೆ ಕಾಮಗಾರಿಗೆ ₹5 ಕೋಟಿ ಮಂಜೂರಾಗಿದ್ದು, ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ, ಕರಡೋಣ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಂದಲಾರ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ರಮೇಶ ನಾಯಕ ಹುಲಿಹೈದರ, ಗಂಗಾಧರಸ್ವಾಮಿ, ಬಸವಂತಗೌಡ, ಮಲ್ಲಿಕಾರ್ಜುನಗೌಡ, ರಾಮನಗೌಡ ಬುನ್ನಟ್ಟಿ, ಶಿವರೆಡ್ಡಿ ಖ್ಯಾಡೇದ್, ನಾಗರಾಜ ತಳವಾರ, ನಾಗಪ್ಪ ಹುಗ್ಗಿ, ನಿರುಪಾದಿ ಸಿರಿವಾರ, ರಮೇಶ ಶ್ರೇಷ್ಠಿ, ಸಚಿವ ಆಪ್ತ ಸಹಾಯಕರಾದ ಇನಾಯತ್, ವೆಂಕಟೇಶ ಗೋಡಿನಾಳ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.