ಚುನಾವಣೆಗೆ 3ರಂದು ನಾಮಪತ್ರ ಸಲ್ಲಿಕೆ: ಕೋಟಾ ಶ್ರೀನಿವಾಸ ಪೂಜಾರಿ

| Published : Apr 01 2024, 12:45 AM IST

ಚುನಾವಣೆಗೆ 3ರಂದು ನಾಮಪತ್ರ ಸಲ್ಲಿಕೆ: ಕೋಟಾ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಏಪ್ರಿಲ್ 3 ರಂದು ತಾವು ಚಿಕ್ಕಮಗಳೂರು- ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಖರಾಯಪಟ್ಟಣದಲ್ಲಿ ನಡೆದ ಬಿಜೆಪಿ -ಜೆಡಿಎಸ್ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ, ಕಡೂರು

ಏಪ್ರಿಲ್ 3 ರಂದು ತಾವು ಚಿಕ್ಕಮಗಳೂರು- ಉಡುಪಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಲೂಕಿನ ಸಖರಾಯಪಟ್ಟಣ ಹೋಬಳಿ ದೇವನೂರು, ನಾಗರಾಳು ಬೋಳನಹಳ್ಳಿ ಮತ್ತಿತರ ಕಡೆ ಚುನಾವಣಾ ಪ್ರಚಾರ ನಡೆಸಿ ಸಖರಾಯಪಟ್ಟಣದಲ್ಲಿ ನಡೆದ ಬಿಜೆಪಿ -ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾನು ಮುಜರಾಯಿ ಸಚಿವನಾಗಿದ್ದಾಗ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದೆ ಅವರು ಧಾರ್ಮಿಕ ದತ್ತಿ ಇಲಾಖೆಯಿಂದ ಏನು ಮಾಡುತ್ತೀಯಾ ಎಂದಿದ್ದರು. ಅದಾಗಲೇ ಈ ಇಲಾಖೆಯಿಂದ ದೇವಾಲಯಗಳಲ್ಲಿ ಮದುವೆ ಆಗಬಯಸುವ ಜೋಡಿಗಳಿಗೆ ತಾಳಿ, ಬಟ್ಟೆ,ಊಟ ಎಲ್ಲವನ್ನು ಉಚಿತವಾಗಿ ನೀಡುವ ಸಪ್ತಪದಿ ಯೋಜನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ ಒಳ್ಳೆ ಮಾತುಗಳನ್ನು ಹೇಳಿದ್ದರು ತಮಗೆ ಅದು ಸಂತೋಷ ತಂದಿತು ಎಂದು ಸ್ಮರಿಸಿದರು.ಆದರೆ ಸಿ.ಟಿ. ರವಿಯವರು ರಾಜೀನಾಮೆ ನೀಡಿ ಪಕ್ಷ ಸೇವೆಗೆ ಹೋಗಿದ್ದನ್ನು ಮರೆಯವಂತಿಲ್ಲ. ಇದು ದೇಶದ ಭವಿಷ್ಯ ಬರೆಯುವ ಚುನಾವಣೆ. ಭಾರತ ದೇಶದ ಗಡಿ ಭದ್ರತೆ ಮಾಡಿ 146 ಕೋಟಿ ಜನರನ್ನು ರಕ್ಷಿಸಬೇಕಾದ ಅಗತ್ಯವಿದೆ. ರಷ್ಯಾ ಮತ್ತು ಉಕ್ರೇನ್ ಸ್ಥಿತಿಗತಿ ನೋಡಿದರೆ ಭಾರತ ದೇಶದ ನಾಗರಿಕರಿಗೆ ನೆಮ್ಮದಿ ಕೊಡುವವರಿಗೆ ಅಧಿಕಾರ ನೀಡುವುದು ಈ ಚುನಾವಣೆ ಪ್ರಮುಖ ಉದ್ದೇಶ ಎಂದರು.ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸವನ್ನು ಸವಾಲಾಗಿ ಸ್ವೀಕರಿಸಿ ಕಲಂ 307 ರದ್ದು ಮಾಡಿ ಎಲ್ಲೆಡೆ ಬೆಳಗಿನಿಂದ ಸಂಜೆ 5 ಗಂಟೆವರೆಗೆ ಧ್ವಜ ಹಾರಿಸಿದ್ದು ಭಾರತದ ತಾಕತ್ತು ಅಲ್ಲವೇ ಎಂದು ಪ್ರಶ್ನಿಸಿದರು.ಒಂದು ಕಾಲದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವೊಂದು ಆರ್ಥಿಕ ಸ್ಥಿತಿ ಸರಿದೂಗಿಸಲಾಗದೆ ಚಿನ್ನ ಅಡವಿಟ್ಟು ಆಡಳಿತ ನಡೆಸಿದ್ದು ತಿಳಿದಿದೆ. ಆದರೆ ಮೋದಿ ಸರ್ಕಾರದ ಭಾರತ 70 ದೇಶಗಳಿಗೆ ಸಾಲ ನೀಡಿರುವುದು ನಮ್ಮ ಸಾಮರ್ಥ್ಯ. ಕರ್ನಾಟಕ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವರಿಗೆ ವಿಪಕ್ಷದ ನಾಯಕನಾಗಿ ನಾನು ಸಿದ್ದರಾಮಯ್ಯನವರಿಗೆ ಏನು ಕ್ರಮ ವಹಿಸುತ್ತೀರಾ ಎಂದರೆ ಸದನದ ದಿಕ್ಕನ್ನೇ ಬದಲಾಯಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಹೋದರೆ ರಕ್ತದ ಓಕಳಿ ಹರಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಒಂದು ಹನಿ ರಕ್ತ ಕೂಡ ಬರಲಿಲ್ಲ ಎಂದು ಚಟಾಕಿ ಹಾರಿಸಿದರು.ರಾಮ ಎಂಬುದು ಕಾಲ್ಪನಿಕ ಎಂದು ಸುಪ್ರೀಂಕೋರ್ಟಿಗೆ ಆರ್ಜಿ ಸಲ್ಲಿಸಿದ್ದು ಅಂದಿನ ಕಾಂಗ್ರೆಸ್ ಈಗ ಸಿದ್ದರಾಮಯ್ಯ ಜೈ ಸೀತಾ ರಾಮ್ ಎಂದು ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ಸ್ಥಿತಿಗೆ ಬಂದಿದೆ ಎಂದರೆ ಬಿರುಗಾಳಿ ಬೀಸಿದರೂ ಕೂಡ ಕೇಂದ್ರ ಸರ್ಕಾರ ಎಂದು ಸಿದ್ದರಾಮಯ್ಯ ಆರೋಪಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಮತದಾರರು ನನಗೆ ಮತ ನೀಡಿದಲ್ಲಿ ಮೋದಿಯನ್ನು ಮತ್ತೆ ಪ್ರಧಾನಿ ಮಾಡುವ ಸಾಲಿನಲ್ಲಿ ನಾನಿರುತ್ತೇನೆ ಎಂದರು.ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಮಾತನಾಡಿ, ಸರಳ ವ್ಯಕ್ತಿತ್ವದ ಕೋಟ ಶ್ರೀನಿವಾಸ್ ಪೂಜಾರಿ ಯವರನ್ನು 2 ಪಕ್ಷಗಳ ವರಿಷ್ಠರು ಗುರುತಿಸಿ ತೀರ್ಮಾನ ಕೈಗೊಂಡು ಕಣಕ್ಕಿಳಿಸಿದ್ದಾರೆ. ತಮ್ಮ ಜ್ಞಾನಶಕ್ತಿಯಿಂದ ಮೇಲೆ ಬಂದಿದ್ದು, ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಗೆ ಕೋಟಾ ಶ್ರೀನಿವಾಸ್ ಮಾದರಿ. ಮಾಜಿ ಪ್ರಧಾನಿ ದೇವೇಗೌಡರು ದೇಶಕ್ಕಾಗಿ ಮೋದಿ ಬೇಕು ಎಂದು ಸಂದೇಶ ನೀಡಿದ್ದಾರೆ. ನಾವು ಮತ್ತು ಸಿಟಿ ರವಿ ಭಾಗವಹಿಸಿದ್ದ ಸಮನ್ವಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿ, ಇದು ಭಾರತ ದೇಶ ಮತ್ತು ಭಾರತದೊಳಗಿರುವ ಭಾರತದ ವಿರೋಧಿಗಳ ನಡುವೆ ನಡೆಯುತ್ತಿರುವ ಮಹಾ ಚುನಾವಣೆ ಭಾರತದ ಗೌರವವನ್ನು ಪ್ರಪಂಚದಾದ್ಯಂತ ಹೆಚ್ಚಿಸಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕೋಟಾ ಶ್ರೀನಿವಾಸ ಪೂಜಾರಿಯವರು ಪರಿಷತ್ತಿನ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದಾರೆ.ಕಾಂಗ್ರೆಸ್ ನ ಗೋಸುಂಬೆ ವ್ಯಕ್ತಿತ್ವದ ಜಯಪ್ರಕಾಶ ಹೆಗ್ಡೆ ಸ್ವಾರ್ಥಕ್ಕಾಗಿ ಜೆಡಿಎಸ್ ನಲ್ಲಿದ್ದು ಮತ್ತೆ ಜೆಡಿಎಸ್‌ ನಿಂದ, ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸಂಸದ ಸ್ಥಾನದ ಬಳಿಕ ಬಿಜೆಪಿಗೆ ಬಂದಾಗ ಕ್ಯಾಬಿನೆಟ್ ಸ್ಥಾನಮಾನ ನೀಡಿದರೂ ಕಾಂಗ್ರೆಸ್‌ಗೆ ಹೋಗಿ ಅಭ್ಯರ್ಥಿಯಾಗಿದ್ದಾರೆ. ಜಂಪಿಂಗ್ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಬೇಕು ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡ ಜಗನ್ನಾಥ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ರು, ಕಲ್ಮರುಡಪ್ಪ, ಜಿಲ್ಲಾ ಉಪಾಧ್ಯಕ್ಷ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಟಿ ಆರ್ ಲಕ್ಕಪ್ಪ, ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಕೆ.ಪಿ ವೆಂಕಟೇಶ್, ಸಿ.ಜೆ. ಲೋಕೇಶ್, ಪ್ರದೀಪ್ ನಾಯ್ಕ, ಆನಂದ ನಾಯ್ಕ, ಕೋಟೆ ರಂಗನಾಥ್, ಈಶ್ವರಹಳ್ಳಿ ಮಹೇಶ್, ನಂದೀಶ್, ರಾಜಣ್ಣ, ಕೊಲ್ಲಾ ಭೋವಿ,ರಮೇಶ್, ಉಮೇಶ್ , ಸತೀಶ್ ಎಸ್ ಬಿ ಗ್ರೇಡ್ ನಾಗೇಂದ್ರ ನಾಗೇಂದ್ರ ರಮೇಶ್ ಎಸ್ ಎನ್ ಬಸವರಾಜ್, ರಾಜೀವ್, ಪ್ರಕಾಶ್ ಕಾರ್ಯಕರ್ತರು ಇದ್ದರು.

31ಕೆಕೆಡಿಯು1.