ಲೋಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ!

| Published : Apr 02 2024, 02:23 AM IST / Updated: Apr 02 2024, 05:11 AM IST

ಸಾರಾಂಶ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ. 26ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

 ಬೆಂಗಳೂರು :  ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಭಾರಾಟೆ ಶುರುವಾಗಿದೆ. ಸೋಮವಾರ ಒಟ್ಟು 10 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ. 26ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಏ. 4ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಹೆಚ್ಚುತ್ತಿದೆ. ಸೋಮವಾರ ಮೂರು ಕ್ಷೇತ್ರಗಳಿಂದ ಒಟ್ಟು 10 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅದರಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಸೇರಿದಂತೆ 5 ಮಂದಿ, ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಪಿ.ಸಿ. ಮೋಹನ್‌ ಸೇರಿದಂತೆ ನಾಲ್ಕು ಹಾಗೂ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಒಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಲ್ಕನೇ ಅವಧಿಗೆ ನಾಮಪತ್ರ ಸಲ್ಲಿಸಿದ ಪಿ.ಸಿ.ಮೋಹನ್‌

ಬೆಂಗಳೂರು: ರಾಜಧಾನಿಯಲ್ಲಿ ಚುನಾವಣಾ ಕಾವು ನಿಧಾನವಾಗಿ ಏರಿಕೆಯಾಗುತ್ತಿದ್ದು, ಸೋಮವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ. ಮೋಹನ್ ಅವರು ಪಕ್ಷದ ಹಿರಿಯ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.

ಶಿವಾಜಿನಗರದಲ್ಲಿನ ಮುತ್ಯಾಲಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರ ಜತೆಗೆ ರೋಡ್‌ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ತೋರಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಜನಾರ್ದನರೆಡ್ಡಿ, ಸುರೇಶ್‌ ಕುಮಾರ್‌ ಅವರೊಂದಿಗೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಇದೇ ವೇಳೆ ನಾಮಪತ್ರ ಸಲ್ಲಿಕೆಯ ಕೇಂದ್ರದ ಬಳಿಕ ಶಾಸಕ ಎಸ್‌.ರಘು ಮತ್ತು ಕೆಲವು ಮುಖಂಡರನ್ನು ಒಳಬಿಡದ ಕಾರಣ ಭದ್ರತಾ ಸಿಬ್ಬಂದಿ ಜತೆ ಜಟಾಪಟಿ ನಡೆದ ಪ್ರಸಂಗವೂ ನಡೆಯಿತು. ಅಭ್ಯರ್ಥಿ ಜತೆ ಐವರು ಸೂಚಕರಿಗೆ ಮಾತ್ರ ಪ್ರವೇಶ ಇದೆ. ಆದರೆ, ಶಾಸಕ ರಘು ಅವರು ತಾವು ಸೂಚಕರಾಗಿದ್ದು, ಅವರನ್ನು ಒಳಬಿಡದ ಕಾರಣಕ್ಕಾಗಿ ಕೋಪಗೊಂಡರು. ನಂತರ ಚುನಾವಣಾ ಆಯೋಗದ ನಿಯಮಕ್ಕೆ ಕಾನೂನಿಗೆ ತಲೆ ಬಾಗುತ್ತೇನೆ ಎಂದು ಸುಮ್ಮನಾದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಂಸದ ಪಿ.ಸಿ.ಮೋಹನ್‌, ಕಳೆದ ಮೂರು ಬಾರಿ, 15 ವರ್ಷದಿಂದ ಬೆಂಗಳೂರು ಕೇಂದ್ರ ಪ್ರತಿನಿಧಿಸುತ್ತಿದ್ದೇನೆ. ನಾಲ್ಕನೇ ಬಾರಿ ಅವಕಾಶ ನೀಡಿರುವುದಕ್ಕೆ ವರಿಷ್ಠರಿಗೆ ಧನ್ಯವಾದಗಳು. ಕ್ಷೇತ್ರಕ್ಕೆ ಸಾಕಷ್ಟುಅನುದಾನ ತಂದಿದ್ದು, ಮೆಟ್ರೋ ಅಭಿವೃದ್ಧಿಗೆ 20 ಸಾವಿರ ಕೋಟಿ ರು.ತಂದಿದ್ದೇನೆ. ನಗರಾಭಿವೃದ್ಧಿಗೆ ಅನುದಾನ ತರಲಾಗಿದ್ದು, ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ ಮತ್ತಷ್ಟು ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‌ಗೆ 11-14 ಸ್ಥಾನ ಗೆಲ್ಲುತ್ತದೆ ಎಂದು ತಿಳಿಸಲಾಗಿದೆ. ಆದರೆ, ಕಳೆದ ಬಾರಿಯೂ 20 ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ವರದಿ ನೀಡಲಾಗಿತ್ತು. ಆದರೆ, ಕೇವಲ ಒಂದು ಸ್ಥಾನ ಗೆಲುವು ಸಾಧಿಸಿದ್ದರು ಎಂದು ಹೇಳಿದರು.

ಮೂರು ತಿಂಗಳಲ್ಲಿ ಅಧಃಪತನ:

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಮುಂದಿನ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಃಪತನವಾಗುತ್ತದೆ. ನಂತರ ಜನಪರವಾದ ಆಡಳಿತ ಇರುವ ಸರ್ಕಾರ ಬರುತ್ತದೆ. ಕಾಂಗ್ರೆಸ್ ಮಿತ್ರರು ಗ್ಯಾರಂಟಿ ಕೊಟ್ಟು ಜನರ ತಲೆ ಕೆಡಿಸುವ ಕೆಲಸ ಮಾಡಿದ್ದಾರೆ. ಮೋದಿ ಗ್ಯಾರಂಟಿ ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಬರೀ ಚುನಾವಣೆಗೆ ಬಂದಿರುವ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.

ಬೆಂ.ದಕ್ಷಿಣಕ್ಕೆ ಸೌಮ್ಯಾರೆಡ್ಡಿ ಉಮೇದುವಾರಿಕೆ; ಡಿಕೆಶಿ ಭಾಗಿ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರು ಜಯನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಸೌಮ್ಯಾರೆಡ್ಡಿ ನಮ್ಮ ಮನೆ ಮಗಳು. ನನಗೆ ಐಶ್ವರ್ಯ ಬೇರೆಯಲ್ಲ, ಸೌಮ್ಯಾ ಬೇರೆಯಲ್ಲ. ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬಂಟ, ರೆಡ್ಡಿ ಸೇರಿ ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ. ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡಲಿಲ್ಲವಲ್ಲ ಎಂಬ ಟೀಕೆಗೆ ನಾವು ಈ ರೀತಿ ಉತ್ತರಿಸಿದ್ದೇವೆ. ಜತೆಗೆ ಆರು ಮಹಿಳೆಯರಿಗೆ ಟಿಕೆಟ್‌ ನೀಡಿದ್ದೇವೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯಾರೆಡ್ಡಿ ಅವರು ಸೋತಿರಲಿಲ್ಲ. ಅಧಿಕಾರಿಗಳ ತಪ್ಪಿನಿಂದಾಗಿ ಅವರು ಸೋಲಬೇಕಾಯಿತು. ಅವರನ್ನು ಸೋಲಿಸಿದ ಅಧಿಕಾರಿಗಳು ರಾಮಲಿಂಗಾರೆಡ್ಡಿ ಅವರ ಬಳಿ ಒತ್ತಡದಿಂದ ಆ ರೀತಿ ಮಾಡಬೇಕಾಯಿತು ಎಂದು ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಬಿಜೆಪಿ ಮುಖಂಡನ ವಿರುದ್ಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರೂಪೇಶ್‌ ನೀಡಿದ ದೂರಿನ ಮೇರೆಗೆ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಕೋರಮಂಗಲದ ಶ್ರೀನಿವಾಗಿಲು ಶಾಂತಿನಗರ ಕೋ ಆಪರೇಟೀವ್‌ ಸೊಸೈಟಿ ಲೇಔಟ್‌ನಲ್ಲಿರುವ ಬಿಜೆಪಿ ಕಚೇರಿಯ ನಾಮಫಲಕ, ಕಾಂಪೌಂಡ್‌ ಗೋಡೆ ಮೇಲೆ ಬಿಜೆಪಿ ಪಕ್ಷದ ಚಿಹ್ನೆ, ಪ್ರಧಾನಿ ಮೋದಿ ಅವರ ಭಾವಚಿತ್ರ ಸೇರಿದಂತೆ ಪಕ್ಷದ ಇತರರ ಭಾವಚಿತ್ರಗಳನ್ನು ಅಂಟಿಸಲಾಗಿತ್ತು. ಈ ಬಗ್ಗೆ ಸ್ಥಳೀಯರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ ಯಾವುದೇ ಅನುಮತಿ ಪಡೆಯದೆ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಅಂಟಿಸಿರುವುದು ಬೆಳಕಿಗೆ ಬಂದಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಹಾಗೂ ಭಾವಚಿತ್ರಕ್ಕೆ ಪೇಂಟಿಂಗ್‌ ಬಳಿಯುವಾಗ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದಡಿ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ನಾಮಪತ್ರ ಸಲ್ಲಿಕೆ

ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರನ್ನು ಗೆಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಒಂದುಗೂಡಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತಕ್ಕಾಗಿ ಒಂದಾಗಿ ಕೈ ಜೋಡಿಸಿದ್ದಾರೆ. ಅದೇ ರೀತಿ ವಿಕಸಿತ ಚಿಕ್ಕಬಳ್ಳಾಪುರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂಬ ಸಂದೇಶ ರವಾನೆಯಾಗಿದೆ. ಅದರಂತೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಸಮನ್ವಯ ಸಭೆಗಳು ನಡೆಯುತ್ತಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಪಣ ತೊಟ್ಟಿದ್ದಾರೆ.

ಸೋಮವಾರ ಡಾ.ಕೆ.ಸುಧಾಕರ್‌ ಅವರು ಚುನಾವಣಾ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಎಂಟಿಬಿ ನಾಗರಾಜ್‌, ಶಾಸಕ ಧೀರಜ್‌ ಮುನಿರಾಜು, ಜೆಡಿಎಸ್‌ ಮುಖಂಡರಾದ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ಅವರೊಂದಿಗೆ ನಾಮಪತ್ರ ಸಲ್ಲಿಸಿದ ಅವರು ಎಲ್ಲರ ಸಹಕಾರವನ್ನು ಕೋರಿದರು. ಇದಕ್ಕೂ ಮುನ್ನ ಮನೆ ದೇವರಾದ ಚನ್ನಕೇಶವಸ್ವಾಮಿ ಹಾಗೂ ಭೋಗನಂದೀಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು.ಸಮನ್ವಯ ಸಭೆ: ಬಳಿಕ ದೇವನಹಳ್ಳಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಡಾ.ಕೆ.ಸುಧಾಕರ್‌ ಮಾತನಾಡಿದರು.

ನೆಲ, ಜಲ, ಭಾಷೆಯ ವಿಚಾರದಲ್ಲಿ ಸದಾ ಜನರ ಪರವಾಗಿ ಕೆಲಸ ಮಾಡುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನರೇಂದ್ರ ಮೋದಿಯವರೊಂದಿಗೆ ಕೈ ಜೋಡಿಸಲು ತೀರ್ಮಾನಿಸಿದ್ದಾರೆ. ಮೋದಿಯವರಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅರಿತಿರುವ ಈ ನಾಯಕರು ಬಿಜೆಪಿ ಜೊತೆ ಶಾಶ್ವತ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದ್ದೇವೆ. ಬಿಜೆಪಿ-ಜೆಡಿಎಸ್‌ ಗುರುತಾದ ಕೇಸರಿ ಮತ್ತು ಹಸಿರು ದೇಶದ ಮತ್ತು ರಾಜ್ಯದ ಉಸಿರಾಗಿದೆ ಎಂದರು.

ರಾಜ್ಯದ ಕಾಂಗ್ರೆಸ್‌ ನೀಡುವ ಗ್ಯಾರಂಟಿಗೂ ಕೇಂದ್ರ ಸರ್ಕಾರ ನೀಡುವ ಗ್ಯಾರಂಟಿಗೂ ವ್ಯತ್ಯಾಸವಿದೆ. ಕಾಂಗ್ರೆಸ್‌ ಎಂದರೆ ಕಿತ್ತುಕೊಳ್ಳುವ ಸರ್ಕಾರ. ಬಿಜೆಪಿ ಸರ್ಕಾರ ನೀಡಿದ ಕಿಸಾನ್‌ ಸಮ್ಮಾನ್‌, ರೈತ ವಿದ್ಯಾನಿಧಿ, ದಲಿತರ 11 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್‌ ಕಿತ್ತುಕೊಂಡಿದೆ. ಪ್ರಧಾನಿ ಮೋದಿಯವರು ಮಹಿಳೆಯರಿಗೆ 11 ಕೋಟಿ ಶೌಚಾಲಯ, ಉಚಿತ ಅನಿಲ ಸಿಲಿಂಡರ್‌, ರೈತರಿಗಾಗಿ ಫಸಲ್‌ ಬಿಮಾ ಯೋಜನೆ ನೀಡಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಎಂದರೆ ಹಬ್ಬಕ್ಕೆ ಮಾತ್ರ ಊಟ ನೀಡುವ ಗ್ಯಾರಂಟಿ. ಆದರೆ ಮೋದಿಯವರ ಗ್ಯಾರಂಟಿ ಎಂದರೆ ಬದುಕನ್ನು ಕಟ್ಟಿಕೊಡುವ ಗ್ಯಾರಂಟಿ ಎಂದರು.ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಹಾಲು ಜೇನಿನಂತೆ ಕೆಲಸ ಮಾಡಬೇಕು. ನಾನು ಬಿಜೆಪಿ ಕಾರ್ಯಕರ್ತರಿಗೆ ಕೊಡುವ ಗೌರವವನ್ನೇ ಜೆಡಿಎಸ್‌ ಕಾರ್ಯಕರ್ತರಿಗೂ ನೀಡುತ್ತೇನೆ. ಎರಡೂ ಪಕ್ಷಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಗಳನ್ನು ನಡೆಸಬೇಕು. ಕಾಂಗ್ರೆಸ್‌ಗೆ ವಿರೋಧವಾಗಿಯೇ ಜನತಾದಳ ಸೃಷ್ಟಿಯಾಗಿತ್ತು. ಆದ್ದರಿಂದ ಒಂದೇ ಕುಟುಂಬದ ಸದಸ್ಯರಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಸ್ವಾಮಿ, ಜಿ.ಚಂದ್ರಣ್ಣ, ನಾಗರಾಜು, ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ, ದೇವನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಅಪ್ಪಯ್ಯಣ್ಣ, ನಾಗೇಶ್, ನಾರಾಯಣಸ್ವಾಮಿ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.