ಏ.12ರಿಂದ ನಾಮಪತ್ರ ಸಲ್ಲಿಕೆ, ಮೇ 7ಕ್ಕೆ ಮತದಾನ

| Published : Mar 23 2024, 01:03 AM IST

ಸಾರಾಂಶ

18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಏ.12ರಿಂದ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ 18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಏ.12ರಿಂದ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಲು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೇಳಾಪಟ್ಟಿಯಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭ, ಶಂಕುಸ್ಥಾಪನೆ, ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ಸಭೆ, ರ‍್ಯಾಲಿಗಳನ್ನು ಆಯೋಜಿಸಲು, ಪೋಸ್ಟರ್, ಬ್ಯಾನರ್ ಅಳವಡಿಸಲು ಆಯಾ ಸಮಾರಂಭದ ಅವಧಿಗೆ ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವುದು ನಿಷಿದ್ಧ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು, ಇಲ್ಲಿಯವರೆಗೆ 16,79,746 ಮತದಾರರಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ನಾಮಪತ್ರ ಸಲ್ಲಿಕೆ ಕೊನೆಯ ದಿನದ ಹಿಂದಿನ 10 ದಿನಗಳವರೆಗೆ ತಿದ್ದುಪಡಿ, ಸೇರ್ಪಡೆಗೆ ಅವಕಾಶ ಇರುತ್ತದೆ. ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೊಸದಾಗಿ ನೋಂದಾಯಿಸಲಾಗಿದೆ. ನಾಮಪತ್ರ ಸಲ್ಲಿಕೆ ಏಪ್ರಿಲ್ 12ರಿಂದ 19, ಏ.20ರಂದು ಪರಿಶೀಲನೆ, ಏ.22ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ಮತ್ತು ಮತ ಎಣಿಕೆಯು ಜೂನ್ 4ರಂದು ನಡೆಯಲಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದ್‌ ಅಫ್ರೀನ್ ಭಾನು ಎಸ್. ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

- - -

ಬಾಕ್ಸ್‌ ಮೊದಲ ರ‍್ಯಾಂಡಮೈಜೇಷನ್ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡುತ್ತಿದ್ದು, ಕ್ಷೇತ್ರದಲ್ಲಿ ಎಂ.3 ಮೇಕ್ 2023 ಮಾದರಿಯ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ ಎಂದು ಡಿಸಿ ಹೇಳಿದರು. ಇವುಗಳಿಗೆ ಇವಿಎಂ ಟ್ರ್ಯಾಕಿಂಗ್‌ ಸಾಫ್ಟ್‌ವೇರ್‌ ಅಳವಡಿಸಲು ಮೊದಲ ರ‍್ಯಾಂಡಮೈಜೇಷನ್ ಮಾರ್ಚ್ 22ರಂದು ನಡೆಸಲಾಗುತ್ತಿದೆ. ಬೆಮೆಲ್ ಕಂಪನಿಯ 2826 ಬ್ಯಾಲೆಟ್ ಯುನಿಟ್, 2339 ಕಂಟ್ರೋಲ್ ಯುನಿಟ್, 2534 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಮೊದಲ ರ‍್ಯಾಂಡಮೈಜೇಷನ್ ನಡೆಸಲಾಯಿತು.

- - - -22ಕೆಡಿವಿಜಿ31, 3:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಯಿತು.