ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ಸಂತೆಮಾಳದಲ್ಲಿ ಆರೋಗ್ಯ ಉಪ ಕೇಂದ್ರ ತೆರೆಯಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ) ಕಾರ್ಯಕರ್ತರು ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.ಕರವೇ ತಾಲೂಕು ಘಟಕದ ಅಧ್ಯಕ್ಷ ಎಚ್.ಇ.ಅಪ್ಪೇಗೌಡ ಮಾತನಾಡಿ, ಮೈಸೂರು-ಮಳವಳ್ಳಿ ಮುಖ್ಯರಸ್ತೆಗೆ ಹೊಂದುಕೊಂಡಂತೆ ಕಿರುಗಾವಲು ಸಂತೆ ಮೈದಾನವಿದೆ. ಗ್ರಾಮದಿಂದ ಹೊರಭಾಗದಲ್ಲಿದ್ದರೂ ಕೂಡ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಸಾವಿರಾರು ಮಂದಿ ಪ್ರತಿನಿತ್ಯ ಸಂಚರಿಸುವುದರಿಂದ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿದರೆ ಕಲ್ಕುಣಿ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಂತೆಮಾಳದಲ್ಲಿ ಆರೋಗ್ಯ ಉಪಕೇಂದ್ರ ತೆರೆಯುವುದರಿಂದ ಸಾರ್ವಸನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಕಿರುಗಾವಲು ಆರೋಗ್ಯ ಕೇಂದ್ರದಲ್ಲಿ 3-4 ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ ವೈದ್ಯರಲ್ಲಿ ಒಬ್ಬರನ್ನು ಸಂತೆ ಮಾಳದಲ್ಲಿ ಆರೋಗ್ಯ ಉಪಕೇಂದ್ರ ತೆರೆದು ನೇಮಕ ಮಾಡಬೇಕೆಂದು ಒತ್ತಾಯಿಸಿದರು.ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಮುಖಂಡರಾದ ಮಲ್ಲಿಕಾರ್ಜುನಸ್ವಾಮಿ, ಮಧು, ಮಹೇಶ್, ಸಿದ್ದರಾಜು, ಪ್ರತಾಪ್, ಎಸ್.ಮಲ್ಲಿಕಾರ್ಜುನ್, ಚನ್ನೇಗೌಡ, ಮಹದೇವ, ಎಸ್.ನಾಗರಾಜು, ಜೆ.ನಾಗರಾಜು ಭಾಗವಹಿಸಿದರು.ಮಾ.10ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದ ಬೌದ್ಧ ವಿಹಾರದಲ್ಲಿ ಮಾ.10ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜು ಹೇಳಿದರು.ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ವಹಿಸುವರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಉಪಸ್ಥಿತರಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನ್‌ಯಾದವ್, ವೈದ್ಯರಾದ ಡಾ.ಆಶಾಲತಾ, ಡಾ.ತಿಬ್ಬೇಗೌಡ, ಡಾ.ಯೋಗೇಂದ್ರ ಕುಮಾರ್, ಡಾ.ಸುದರ್ಶನ್, ಡಾ.ಮನೋಹರ್, ಡಾ.ಸಂಜಯ್, ಡಾ.ಮುರಳೀಧರ್, ಡಾ.ಯಶವಂತ್ ಅವರು ಶಿಬಿರ ನಡೆಸಿಕೊಡುವರು ಎಂದರು.ರಕ್ತದ ಒತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇನ್ನಿತರ ರೋಗಗಳಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುವರು. ನೇರಲಕೆರೆ, ಗಾಮನಳ್ಳಿ, ಅರಕೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಉಪಯೋಗ ಪಡೆಯುವಂತೆ ಕೋರಿದರು. ಗೋಷ್ಠಿಯಲ್ಲಿ ಮೋಹನ್‌ಕುಮಾರ್, ಜೆ.ರಾಮಯ್ಯ, ನಿರಂಜನ್, ಸಿದ್ದರಾಮು ಇತರರಿದ್ದರು.