ಮಂಗಳಮುಖಿಯರ ಪುನರ್ವಸತಿ ವ್ಯವಸ್ಥೆಗೆ ವರದಿ ಸಲ್ಲಿಕೆ

| Published : Jun 24 2024, 01:36 AM IST

ಮಂಗಳಮುಖಿಯರ ಪುನರ್ವಸತಿ ವ್ಯವಸ್ಥೆಗೆ ವರದಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳಮುಖಿಯರು ಸಾರ್ವಜನಿಕರಿಗೆ ತೊಂದರೆ ಕೊಡದಂತೆ, ಅವರ ಜೀವನೋಪಾಯಕ್ಕಾಗಿ ಪುನರ್ವಸತಿ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಭಾನುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾದ ದೂರುಗಳಿಗೆ ಅವರು ಪ್ರತಿಕ್ರಿಯಿಸಿದರು.

ಮಂಗಳಮುಖಿಯರಿಗೆ ವಸತಿ, ಉದ್ಯೋಗ ಸೇರಿದಂತೆ ಅವರ ಬದುಕಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ಹೀಗೆ ಮಾಡಿದರೆ ಸಾರ್ವಜನಿಕರಿಗೆ ಅವರು ತೊಂದರೆ ನೀಡುವುದು ತಪ್ಪಲಿದೆ ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಸದಾಶಿವ ಉರ್ವಸ್ಟೋರ್‌ ಮಾತನಾಡಿ, ಕದ್ರಿ ಪಾರ್ಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಂಗಳಮುಖಿಯರು ರಾತ್ರಿ ವೇಳೆ ವಾಹನ ನಿಲ್ಲಿಸಿ ಸಮಸ್ಯೆಗೀಡುಮಾಡುತ್ತಿದ್ದಾರೆ. ಅವರ ಮನಃಪರಿವರ್ತನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರೆ, ಕೆಲವರು ಮಂಗಳಮುಖಿಯರಂತೆ ವೇಷ ಹಾಕಿ ಲೂಟಿ ಮಾಡುತ್ತಿದ್ದಾರೆ. ಈ ಹಿಂದೆ ಮಂಗಳಮುಖಿಯರಿಗೆ ಜಿಲ್ಲಾಡಳಿತದಿಂದ ನೀಡಲಾದ ಗುರುತಿನ ಕಾರ್ಡ್‌ ಪರಿಶೀಲನೆ ನಡೆಸಬೇಕು ಎಂದು ದಲಿತ ಮುಂದಾಳು ಎಸ್‌.ಪಿ.ಆನಂದ ಒತ್ತಾಯಿಸಿದರು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಬೇಕಿದೆ. ಪೊಲೀಸ್‌, ಸಮಾಜ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುನರ್ವಸತಿಗೆ ಸೂಕ್ತ ಯೋಜನೆ ರೂಪಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್‌ ಕುಮಾರ್‌, ಕದ್ರಿ ಪಾರ್ಕ್ ಬಳಿ ಪೊಲೀಸ್‌ ಪಾಯಿಂಟ್‌ ವ್ಯವಸ್ಥೆ, ಮಂಗಳಮುಖಿಯರಿಗೆ ಸೂಕ್ತ ಎಚ್ಚರಿಕೆ, ಬೀದಿದೀಪ ಅಳವಡಿಕೆ ಮಾಡಲಾಗಿದೆ. ಸಮಸ್ಯೆ ಶಾಶ್ವತವಾಗಿ ಪರಿಹಾರ ಕಾಣಲು ಮಂಗಳಮುಖಿಯರಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು ಎಂದು ಹೇಳಿದರು.

ತಿಂಗಳಿಗೊಮ್ಮೆ ಸಭೆ:

ನಾಗೇಶ್‌ ಕೈರಂಗಳ ಮಾತನಾಡಿ, ದಲಿತರ ಕಾಲನಿಗಳಲ್ಲಿ ತಿಂಗಳಿಗೊಮ್ಮೆ ಪೊಲೀಸರು ಸಭೆ ನಡೆಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಡಿಸಿಪಿ ಸಿದ್ದಾರ್ಥ್‌ ಗೋಯಲ್‌, ಈ ಹಿಂದೆ ನಡೆಯುತ್ತಿದ್ದಂತೆ ಪ್ರತಿ ತಿಂಗಳು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ನಗರದಲ್ಲೇ ಇದ್ದರೂ ಎಸ್ಸಿ ಎಸ್ಟಿ ಸಮುದಾಯಕ್ಕೆ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ ಎಂಬ ದೂರು ಸಭೆಯಲ್ಲಿ ಕೇಳಿಬಂತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣದ ಎರಡೂ ಕಡೆಯ ಸಮಕ್ಷಮ ವಿಚಾರಣೆ ನಡೆಸಬೇಕು. ಅಗತ್ಯವಿದ್ದರೆ ಎಫ್‌ಐಆರ್‌ ದಾಖಲಿಸಬೇಕು ಎಂದು ಡಿಸಿಪಿ ಸೂಚನೆ ನೀಡಿದರು.

ಕಿನ್ನಿಗೋಳಿ ಪರಿಸರ ಸೇರಿದಂತೆ ಅನೇಕ ಕಡೆ ಬಿಳಿ ಬಣ್ಣ ಬಳಿಯದೆ ಹಂಪ್ಸ್‌ ನಿರ್ಮಿಸಿದ್ದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವಂತೆ ಅನೇಕರು ಮನವಿ ಮಾಡಿದರು. ಎಎಸ್‌ಪಿ ಜಗದೀಶ್‌ ಇದ್ದರು. ಎಸಿಪಿ ಮನೋಜ್‌ ನಾಯಕ್‌ ನಿರ್ವಹಿಸಿದರು.