ಕುಷ್ಟಗಿ: ಗಾರು ಮಳೆ ವೈಫಲ್ಯದಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಕಡತ ನಿರ್ವಹಣೆಗೆ ಸೀಮಿತರಾಗದೆ ನೇರವಾಗಿ ಗ್ರಾಮಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಸೂಚಿಸಿದರು.
ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಸಿಗಬೇಕಾದ ಸೌಲಭ್ಯ ತಲುಪಿಸಬೇಕು ಎಂದು ಸೂಚನೆ ನೀಡಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಮಾತನಾಡಿ, ಜೂನ್ ತಿಂಗಳಲ್ಲಿ ಶೇ. 21 ಹಾಗೂ ಜುಲೈ ತಿಂಗಳಲ್ಲಿ ಶೇ. 23 ಮಳೆ ಕೊರತೆ ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು 70845 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಮಳೆ ಕೊರತೆಯಿಂದ ಬಹುತೇಕ ಬೆಳೆ ಒಣಗುತ್ತಿವೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ, ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ತೆರಳಿ ಬೆಳೆ ಹಾನಿಯ ವಾಸ್ತವ ಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸಿ ರೈತರಿಗೆ ಸರ್ಕಾರದ ಪರಿಹಾರ ದೊರೆಯಲು ಅನುಕೂಲ ಮಾಡಿಕೊಡಬೇಕು. ಎಲ್ಲ ಅರ್ಹ ರೈತರಿಗೂ ಎಫ್ಐಡಿ ಮಾಡಿಸಬೇಕು. ಸರ್ಕಾರದ ಗಮನಕ್ಕೆ ವಾಸ್ತವ ಚಿತ್ರಣ ತಲುಪಬೇಕು ಎಂದರು.ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿ, ವಿಂಡ್ ಪವರ್ ಕಂಪನಿಗಳ ಸಿಬ್ಬಂದಿಯಿಂದ ರೈತರ ಮೇಲೆ ಹಲ್ಲೆ ನಡೆದಿರುವ ಪ್ರಕರಣ ದಾಖಲಾಗಿವೆ, ಯಾವುದೇ ವ್ಯಕ್ತಿ ಕಾನೂನನ್ನು ಕೈಗೆತ್ತಿಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಡಿಜಿಟಲ್ ಮಾನಿಟರಿಂಗ್ ವ್ಯವಸ್ಥೆಯ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ. ಈವರೆಗೆ ಎಂಟು ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಗಾಂಜಾ ಮಾರಾಟ ಹಾಗೂ ಬಳಕೆ ಸಂಪೂರ್ಣವಾಗಿ ನಿಯಂತ್ರಿಸಬೇಕು. ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ ನಡೆಯದಂತೆ ಕಾರ್ಯಾಚರಣೆ ನಡೆಸಬೇಕು. ವಿಂಡ್ ಪವರ್ ಕಂಪನಿ, ರೈತರ ನಡುವೆ ನಡೆಯುತ್ತಿರುವ ಸಂಘರ್ಷ ಕೂಡಲೇ ನಿಯಂತ್ರಿಸಿ ರೈತರ ಹಿತ ಕಾಪಾಡಬೇಕು ಎಂದು ನಿರ್ದೇಶನ ನೀಡಿದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಆನಂದ ದೇವರನಾವದಗಿ ಮಾಹಿತಿ ನೀಡಿ, ತಾಲೂಕಿನಲ್ಲಿ ಸುಮಾರು 62 ಸಾವಿರ ಜಾನುವಾರು ಹಾಗೂ ನಾಲ್ಕು ಲಕ್ಷ ಕುರಿ-ಮೇಕೆಗಳು ಇವೆ. ಇವುಗಳಿಗೆ 24 ವಾರಗಳಿಗೆ ಸಾಕಾಗುವಷ್ಟು ಸುಮಾರು ಒಂದು ಲಕ್ಷ ಟನ್ ಮೇವು ದಾಸ್ತಾನು ಮಾಡಲಾಗಿದೆ. ಮೇವಿನ ದಾಸ್ತಾನು ಕುರಿತು ಪಶುಸಖಿಗಳ ಮೂಲಕ ಜಾನುವಾರುಗಳ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೊಟೂರು ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕುಷ್ಟಗಿಯಲ್ಲಿ ನಿರ್ಮಾಣಗೊಂಡಿರುವ ಎಂಸಿಎಚ್ ಆಸ್ಪತ್ರೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೂ ವಿತರಣೆ ಕಾರ್ಯ ಪ್ರಕ್ರಿಯೆಯಲ್ಲಿದೆ, ನಿರ್ಮಿತಿ ಕೇಂದ್ರದ ಹಲವು ಕಾಮಗಾರಿಗಳು ಇನ್ನೂ ಬಾಕಿ ಇವೆ. ತಾಲೂಕಿನಲ್ಲಿ ಒಟ್ಟು 1,582 ಶಿಕ್ಷಕರ ಹುದ್ದೆಗಳ ಪೈಕಿ 849 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 733 ಹುದ್ದೆಗಳು ಖಾಲಿ ಇವೆ. ಈ ಕೊರತೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ಮೂಲಕ ನಿರ್ವಹಿಸಲಾಗುತ್ತಿದೆ. ಕೆಲವು ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದರು.ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಶೇ. 82ರಷ್ಟು ಪೂರ್ಣಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಸಹಕಾರ ದೊರೆತಿದೆ ಎಂದು ಮಾಹಿತಿ ನೀಡಿದರು.
ರೈತರಿಗೆ ನ್ಯಾಯ ಒದಗಿಸಿ: ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಬೆಳೆ ವಿಮೆ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ವಂಚನೆಗೆ ಒಳಗಾಗುತ್ತಿದ್ದಾರೆ. ವಿಮೆ ಪಡೆಯಲು ರೈತರು ಅನಗತ್ಯ ಹಣ ಖರ್ಚು ಮಾಡುವಂತಾಗಿದೆ. ಸಂಬಂಧಿಸಿದ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟೆಂಗುಂಟಿ, ತಾಪಂ ಇಒ ಅಮರೇಶ್, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಕುಲಕರ್ಣಿ, ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಶ್ಯಾಮರಾವ್ ಕುಲಕರ್ಣಿ, ಯಲ್ಲಪ್ಪ ಬಾಗಲಿ, ಹನಮಗೌಡ ಪಾಟೀಲ, ಸೈಯದ್ ಅನ್ವರ್ ಅತ್ತಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.