ಸಾರಾಂಶ
ಪ್ರಗತಿ ಪರಿಶೀಲನೆ ಸಭೆ । ಕೊಳ್ಳೇಗಾಲ ವ್ಯಾಪ್ತಿಯ ಅಧಿಕಾರಿಗಳ ಜತೆ ಚರ್ಚೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಕೊಳ್ಳೇಗಾಲ ಕ್ಷೇತ್ರದ ವ್ಯಾಪ್ತಿಯ ಕೊಳ್ಳೇಗಾಲ, ಯಳಂದೂರು ಹಾಗೂ ಸಂತೇಮರಹಳ್ಳಿ ಉಪ ವಿಭಾಗಗಳ ಕಬಿನಿ ನಾಲೆಗಳ ದುರಸ್ತಿ ಈ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಹೂಳು ತೆಗೆಸಿ, ಸಂಪೂರ್ಣವಾಗಿ ಕೆರೆಗಳಿಗೆ ತುಂಬಿ, ನಾಲೆಗಳಲ್ಲಿ ನೀರು ಹರಿದು ಕಟ್ಟ ಕಡೆಯ ಜಮೀನಿಗೂ ಸಹ ನೀರು ತಲುಪುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳು ವಿಸ್ಕೃತವಾದ ಕ್ರಿಯಾ ಯೋಜನೆಯನ್ನು(ಡಿಪಿಆರ್) ಸಲ್ಲಿಸಿದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ, ಅಭಿವೃದ್ಧಿ ಪಡಿಸಲು ಬದ್ಧನಾಗಿರುವುದಾಗಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಜಿಲ್ಲೆಯ ಕೊಳ್ಳೇಗಾಲ, ಸಂತೇಮರಹಳ್ಳಿ ಹಾಗೂ ಯಳಂದೂರು ಉಪ ವಿಭಾಗದ ಅಧಿಕಾರಿಗಳು ಮತ್ತು ಅಧೀಕ್ಷಕ ಎಂಜಿನಿಯರ್ ಮಹೇಶ್ ಅವರನ್ನು ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿ, ಈ ವ್ಯಾಪ್ತಿಯ ನಾಲೆಗಳ ಸ್ಥಿತಿಗತಿ ಹಾಗೂ ಕೆರೆಗಳಲ್ಲಿ ನೀರಿನ ಶೇಖರಣೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿದರು.ಸುಮಾರು ೫೦ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವಿತರಣೆ ನಾಲೆಗಳು ಹಾಗೂ ಕೆರೆಗಳು ನಮ್ಮ ಭಾಗದಲ್ಲಿವೆ. ಈ ಕೆರೆಗಳನ್ನು ನಿರ್ಮಾಣ ಹಾಗೂ ವಿತರಣೆ ನಾಲೆಗಳನ್ನು ನಿರ್ಮಾಣ ಮಾಡಿದ್ದು ಬಿಟ್ಟರೆ ಇದುವರೆಗೆ ಇವುಗಳನ್ನು ದುರಸ್ತಿ ಪಡಿಸುವ ಹಾಗೂ ಹೂಳು ತೆಗೆಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ ಕೆರೆ ಅಂಗಳಲ್ಲಿ ಗಿಡ ಗಂಟೆಗಳು ಬೆಳದು ಹೂಳು ತುಂಬಿಕೊಂಡು ನೀರು ಶೇಖರಣೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ಶೇ.೩೦ ರಷ್ಟು ನೀರು ಶೇಖರಣೆಯಾಗುತ್ತಿಲ್ಲ. ಜೊತೆಗೆ ಕಬಿನಿಯಿಂದ ವಿತರಣೆ ನಾಲೆಗಳ ಮೂಲಕ ನೀರು ಬಿಟ್ಟರೂ ನಾಲೆಗಳ ಸಂಪರ್ಕ ಕಡಿದುಕೊಂಡು ಸರಿಯಾಗಿ ನೀರು ಹರಿಯುತ್ತಿಲ್ಲ. ಕಾರಣ ಈ ನಾಲೆಗಳು ಕಾಲ ಕಾಲಕ್ಕೆ ದುರಸ್ತಿಯಾಗುತ್ತಿಲ್ಲ. ಜಂಗಲ್ ಬೆಳೆದು ಕೊಂಡು ನಾಲೆಗಳೇ ಕಾಣದಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.ಅಧೀಕ್ಷಕ ಎಂಜಿನಿಯರ್ ಮಹೇಶ್ ಮಾತನಾಡಿ, ಸುವರ್ಣವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಣ್ಣೇಗಾಲ ಪಿಕ್‌ಆಪ್ ಮತ್ತು ಗಣಗನೂರು ಪಿಕ್‌ಆಪ್‌ಗಳನ್ನು ಉನ್ನತೀಕರಿಸಿ, ಅಭಿವೃದ್ಧಿಪಡಿಸಿದರೆ, ನೀರು ಪೋಲಾಗುವುದು ತಪ್ಪುತ್ತದೆ. ಹೆಚ್ಚುವರಿ ನೀರನ್ನು ಕೆರೆಗಳಿಗೆ ತಲುಪವಂತೆ ಕಾಲುವೆಗಳನ್ನು ದುರಸ್ತಿಗೊಳಿಸುವುದರ ಮೂಲಕ ನೀರು ಸರಾಗವಾಗಿ ಕೆರೆಗಳಿಗೆ ತುಲಪುವಂತೆ ಮಾಡಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೊಂಗನೂರು ಚಂದ್ರು, ಮುಖಂಡರಾದ ತೋಟೇಶ್, ರಾಘವೇಂದ್ರ, ಹೊಂಗನೂರು ಚೇತನ್, ಹಾಗೂ ಉಪ ವಿಭಾಗಗಳ ಎಂಜಿನಿಯರ್‌ಗಳು ಭಾಗವಹಿಸಿದ್ದರು.