ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಳೆಯಾಶ್ರಿತ ಕಲಬುರಗಿ ಜಿಲ್ಲೆಯಲ್ಲಿ ಅನ್ನದಾತನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಜಿಲ್ಲೆಯಲ್ಲಿ ನವೀನ ತಂತ್ರಜ್ಞಾನ ಬಳಸಿ ರೈತರ ಆದಾಯ ದ್ವಿಗುಣಗೊಳಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಿ ಸಲ್ಲಿಸುವಂತೆ ಕೃಷಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.ಇತ್ತೀಚೆಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಕಲಬುರಗಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳು ಜೊತೆಗೆ ಸಭೆ ನಡೆಸಿ ಅವರು ಮಾತನಾಡಿದರು.
ಕೃಷಿ ಸಂಬಂಧಿತ ವಿಚಾರಗಳಲ್ಲಿ ನವೀನ ಕಲ್ಪನೆಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಓರ್ವ ತಜ್ಞರನ್ನು ಸಮಾಲೋಚಕರನ್ನಾಗಿ ನೇಮಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.ತಗ್ಗುತ್ತಿದೆ ಜೋಳದ ಬಿತ್ತನೆ
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಜೋಳದ ಬಿತ್ತನೆ ಕಡಿಮೆಯಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸಭೆಯ ಗಮನಕ್ಕೆ ತಂದಾಗ ಕಲಬುರಗಿ ರೊಟ್ಟಿಗೆ ಈಗಾಗಲೆ ಬ್ರ್ಯಾಂಡ್ ನೀಡಿದ್ದು, ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಬೇಕು. ಜೊತೆಗೆ ಜೋಳದಿಂದ ತಯಾರಿಸಲಾಗುವ ಕಡುಬು, ಮುಟ್ಟಿಗೆ, ಅಳ್ಳಿಗೆ ಮಾರುಕಟ್ಟೆಕಲ್ಪಿಸುವ ಅಗತ್ಯತ್ಯೆ ಇದೆ ಎಂದ ಅವರು ಕೃಷಿ ಇಲಾಖೆಗೆ ಈಗಾಗಲೆ ಕೆಕೆಆರ್‌ಡಿಬಿ ಮಂಡಳಿಯಿಂದ ಮ್ಯಾಕ್ರೋ ನಿಧಿಯಡಿ 27 ಕೋಟಿ ರು. ಅನುದಾನ ನೀಡಿರುವುದರಿಂದ ಕ್ರಿಯಾ ಯೋಜನೆಯಂತೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಬೀಜ ಸಂಸ್ಕರಣ ಕೇಂದ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಕೆ.ವಿ.ಕೆ. ಮುಖ್ಯಸ್ಥ ರಾಜು ತೆಗ್ಗಳ್ಳಿ ಅವರ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಸಚಿವರು, ಕಲಬುರಗಿ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿಯ ಕವರ್ಡ್ ಪ್ಲಾಟ್ ಫಾರಂ ಮೇಲೆ 3 ಕೋಟಿ ರು. ಮೊತ್ತದಲ್ಲಿ ಸೋಲಾರ್ ಮೈಕ್ರೋ ಗ್ರಿಡ್ ಹಾಗೂ ಜೇವರ್ಗಿ, ಚಿತ್ತಾಪೂರ, ಆಳಂದ, ಸೇಡಂ ಎಪಿಎಂಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಡಿಪಿಆರ್ ತಯಾರಿಸಿ ಸಲ್ಲಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜೇವರ್ಗಿಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಡಿಪಿಆರ್ ಸಲ್ಲಿಸಿ:
ತೋಟಗಾರಿಕೆ ಇಲಾಖೆ ಚರ್ಚೆ ಸಂದರ್ಭದಲ್ಲಿ ಒಣ ಮೆಣಸಿನಕಾಯಿ ಮಾರಾಟಕ್ಕೆ ದೂರದ ಹಾವೇರಿ, ಗುಂಟೂರಿನತ್ತ ಜಿಲ್ಲೆಯ ರೈತರು ಮುಖ ಮಾಡುವ ಪರಿಸ್ಥಿತಿ ಇದ್ದು, ಮೆನಸಿಣಕಾಯಿ ಶೇಖರಣೆಗೆ ಜೇವರ್ಗಿಯಲ್ಲಿ 3 ಸಾವಿರ ಮೆ.ಟನ್ ಮತ್ತು ಸಂಯೋಜಿತ ಬಹು ತರಕಾರಿ ಉತ್ಪನ್ನಗಳು, ಒಣದ್ರಾಕ್ಷಿ ಹಾಗೂ ಹಣ್ಣುಗಳ ಶೇಖರಣೆಗೆ ಚಿತ್ರಾಪುರ ಅಥವಾ ಅಫಜಲಪೂರದಲ್ಲಿಯೂ ಸಹ 3,000 ಮೆ.ಟನ್ ಸಾಮರ್ಥ್ಯದ ಶೀಥಲ ಘಟಕ ಸ್ಥಾಪನೆಗೆ ಕೂಡಲೆ ಡಿ.ಪಿ.ಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.ಕಲಬುರಗಿ ನಗರದಲ್ಲಿ ಐದು ಕಡೆ ಮತ್ತು ತಾಲೂಕು ಕೇಂದ್ರಸ್ಥಾನದಲ್ಲಿ ಒಂದೆರಡು ಕಡೆ ಹಾಪಕಾಮ್ಸ್ ನಿಂದ ಜನನಿಬಿಡಿತ ಪ್ರದೇಶದಲ್ಲಿ ಕಿಯೋಸ್ಕ್ ಮಾದರಿಯಲ್ಲಿ ಹಣ್ಣು/ತರಕಾರಿ ಮಳಿಗೆ ಸ್ಥಾಪಿಸುವಂತೆ ಹಾಪಕಾಮ್ಸ್ ಎಂ.ಡಿ.ಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ರೇಷ್ಮೆ ಗೂಡು ನಂತರ ಚಟುವಟಿಕೆಗೆ 2 ಸ್ವಯಂ ನೂಲು ಬಿಚ್ಚಣಿಕೆ ಘಟಕ ಮಂಜೂರಾಗಿದೆ. ಇದಲ್ಲದೆ ಎಂ.ಇ.ಆರ್.ಎಂ ಯಂತ್ರ ವಿತರಣೆಗೆ ಫಲಾನುಭವಿಗಳ ಆಯ್ಕೆ ಅಂತಿಮಗೊಂಡಿದೆ ಎಂದು ರೇಷ್ಮೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.ಕಲಬುರಗಿ ನಗರಕ್ಕೆ ಹೊಂದಿಕೊಂಡ ಜಾಫರಾಬಾದ ಬಳಿ 4 ಎಕರೆ ಪ್ರದೇಶದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ, ಕೃಷಿ ಇಲಾಖೆಯ ಅಪರ ನಿರ್ದೇಶಕ ಬಾಲರೆಡ್ಡಿ, ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕ ನಜಿಬುಲ್ಲಾ ಖಾನ್, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಪರ್ವೇಜ್ ಬಂತನಾಳ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಧನರಾಜ ಮತ್ತು ಹೇಮಾ, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಅಣ್ಣಾಜಿರಾವ್, ರೇಷ್ಮೆ ಯೋಜನಾ ಉಪನಿರ್ದೇಶಕಿ ವಿಜಯಲಕ್ಷ್ಮೀ, ಕೃಷಿ ಉಪನಿರ್ದೇಶಕರಾದ ಅನುಸುಯಾ, ಸೋಮಶೇಖರ ಬಿರಾದಾರ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ರೇಷ್ಮೆ ಉಪನಿರ್ದೇಶಕ ಪ್ರಕಾಶ ಬಾಬು, ಎಪಿಎಂಸಿ ಸಹಾಯಕ ನಿರ್ದೇಶಕಿ ಸವಿತಾ ನಾಯ್ಕ್ ಸೇರಿದಂತೆ ಇತರರು ಇದ್ದರು.