ನಕಲಿ ಎಂಫಿಲ್ ಪದವಿ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ..!

| Published : Feb 14 2024, 02:18 AM IST

ಸಾರಾಂಶ

ಡಾ.ಎಂ.ಎಸ್.ಚಲುವರಾಜು ನಕಲಿ ಎಂಫಿಲ್ ಪದವಿ ಪಡೆದು ಆ ಮೂಲಕ ಸಂವಿಧಾನ ಬದ್ಧ ಉದ್ಯೋಗದ ಹಕ್ಕನ್ನು ಬೇರೊಬ್ಬರಿಂದ ಕಸಿದುಕೊಂಡಿರುವುದು ಮುಂದಿನ ದಿನಗಳಲ್ಲಿ ಸಾಬೀತಾದಲ್ಲಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು. ಶಾಶ್ವತವಾಗಿ ಯಾವುದೇ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗದಂತೆ ಅನರ್ಹಗೊಳಿಸುವುದು. ಕಾಲೇಜು ಶಿಕ್ಷಣ ಇಲಾಖೆಯಿಂದ ಪಡೆದಿರುವ ಗೌರವಧನದ ಮೊತ್ತವನ್ನು ಹಿಂಪಡೆದು ಇವರ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯನಕಲಿ ಪದವಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಉದ್ಯೋಗ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಅಂತಹ ಪ್ರಕರಣಗಳ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಮಂಡ್ಯ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರೊಬ್ಬರು ನಕಲಿ ಎಂಫಿಲ್ ಪದವಿ ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಎಂ.ಎಸ್.ಚಲುವರಾಜು ವಿರುದ್ಧ ಡಾ.ಬಿ.ಆರ್. ಅಂಬೇಡ್ಕರ್ ವಾರಿಯರ್ಸ್‌ ಸಂಘಟನೆ ಮುಖಂಡ ಎಚ್.ಜಿ.ಗಂಗರಾಜು ಅವರು ಮಂಡ್ಯ ವಿಶ್ವವಿದ್ಯಾಲಯ ಮತ್ತು ಜಿಲ್ಲಾಧಿಕಾರಿಗೆ ದಾಖಲೆಗಳ ಸಹಿತ ದೂರು ನೀಡಿದ್ದಾರೆ.

ಪ್ರಕರಣವೇನು?

ಡಾ.ಎಂ.ಎಸ್. ಚಲುವರಾಜು ಹಲವು ವರ್ಷಗಳಿಂದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗಮಂಗಲ ಪ್ರಥಮ ದರ್ಜೆ ಕಾಲೇಜಿನಲ್ಲೂ ಹಲವು ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವಾಗ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ವಿವಿಧ ವರ್ಷಗಳಲ್ಲಿ ಎಂಫಿಲ್ ಪದವಿಯನ್ನು ತುಂಬಾ ಅನುಮಾನಾಸ್ಪದವಾಗಿ ನಮೂದಿಸಿರುವುದು ಸಂಶಯಗಳಿಗೆ ಕಾರಣವಾಗಿದೆ.

ಅನುಮಾನಾಸ್ಪದ ದಾಖಲು:

ಎಂಫಿಲ್ ಪದವಿ ಪಡೆದಿರುವ ಬಗ್ಗೆ ೨೦೧೭, ೨೦೧೯, ೨೦೨೨-ಫೆಬ್ರವರಿಯಲ್ಲಿ ಹೌದು ಎಂತಲೂ ೨೦೧೮, ೨೦೨೩-ಫೆಬ್ರವರಿ, ೨೦೨೩ ಸೆಪ್ಟೆಂಬರ್‌ನಲ್ಲಿ ಇಲ್ಲ ಎಂತಲೂ ದಾಖಲಿಸಿದ್ದಾರೆ. ನಾಗಮಂಗಲ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವಾಗ ಛತ್ತೀಸ್‌ಗಡದ ಬಿಲಾಸ್‌ಪುರ್‌ನ ಡಾ.ಸಿ.ವಿ.ರಾಮನ್ ಯೂನಿವರ್ಸಿಟಿ ಎಂಬ ಹೆಸರಿನ ವಿವಿಯಲ್ಲಿ ನೋಂದಣಿ ಸಂಖ್ಯೆ ಬಿ-೨೦೭೧೨೩೦೩೦೨೧ರ ಪ್ರಕಾರ ೨೦೧೩ರಲ್ಲಿ ಎಂಫಿಲ್ ಪದವಿ ಪಡೆದಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ.

ಕಾನೂನಿನ ಪ್ರಕಾರ ಎಂಫಿಲ್ ಪದವಿ ಪಡೆದಿದ್ದರೆ ಯಾವ ದಿನಾಂಕದಂದು ಪ್ರವೇಶ ಪಡೆಯಲಾಯಿತು. ಯಾವ ಬ್ಯಾಂಕ್‌ನಿಂದ ಪ್ರವೇಶ ಶುಲ್ಕ ಪಾವತಿಸಲಾಗಿದೆ. ಯಾವ ದಿನಾಂಕದಂದು ಪರೀಕ್ಷೆಗಳು ಯಾವ ಪರೀಕ್ಷಾ ಕೇಂದ್ರದಲ್ಲಿ ನಡೆದಿವೆ. ಈತ ಎಂಫಿಲ್ ಪದವಿ ಪಡೆಯಲು ಗೈಡ್ ಮಾಡಿದ ಮಾರ್ಗದರ್ಶಕರು ಯಾರು, ಇವರು ಯಾವ ವಿವಿಯ ಪ್ರೊಫೆಸರ್, ಅವರ ಹುದ್ದೆ ಏನು ಹಾಗೂ ಯಾವ ದಿನಾಂಕದಂದು ಪ್ರಾಕ್ಟಿಕಲ್ ಪರೀಕ್ಷೆ ನಡೆದಿದೆ ಎಂಬ ಅಂಶಗಳನ್ನು ಕಾನೂನು ರೀತ್ಯಾ ವಿಚಾರಣೆಗೆ ಒಳಪಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಲಿಖಿತ ವಿವರಣೆ ನೀಡಿಲ್ಲ:

ಈ ದೂರಿಗೆ ಸಂಬಂಧಿಸಿದಂತೆ ಸರ್ಕಾರಿ ಕಾಲೇಜು ಪ್ರಾಂಶುಪಾಲರು ದಾಖಲೆಗಳೊಂದಿಗೆ ಲಿಖಿತ ವಿವರಣೆ ನೀಡುವಂತೆ ಡಾ.ಎಂ.ಎಸ್.ಚಲುವರಾಜು ಸೂಚಿಸಲಾಗಿದ್ದರೂ ಇದುವರೆಗೆ ಯಾವುದೇ ಮಾಹಿತಿ ಸಲ್ಲಿಸಿರುವುದಿಲ್ಲ ಎಂದು ಮಂಡ್ಯ ವಿಶ್ವ ವಿದ್ಯಾಲಯದ ಕುಲಸಚಿವರು ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿದೆ ಎಂದು ಆರೋಪಿಸಿದ್ದಾರೆ.

ಡಾ.ಎಂ.ಎಸ್.ಚಲುವರಾಜು ನಕಲಿ ಎಂಫಿಲ್ ಪದವಿ ಪಡೆದು ಆ ಮೂಲಕ ಸಂವಿಧಾನ ಬದ್ಧ ಉದ್ಯೋಗದ ಹಕ್ಕನ್ನು ಬೇರೊಬ್ಬರಿಂದ ಕಸಿದುಕೊಂಡಿರುವುದು ಮುಂದಿನ ದಿನಗಳಲ್ಲಿ ಸಾಬೀತಾದಲ್ಲಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು. ಶಾಶ್ವತವಾಗಿ ಯಾವುದೇ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗದಂತೆ ಅನರ್ಹಗೊಳಿಸುವುದು. ಕಾಲೇಜು ಶಿಕ್ಷಣ ಇಲಾಖೆಯಿಂದ ಪಡೆದಿರುವ ಗೌರವಧನದ ಮೊತ್ತವನ್ನು ಹಿಂಪಡೆದು ಇವರ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಿಎಂ ಅವರಿಂದ ರಾಜ್ಯ ಪ್ರಶಸ್ತಿ:

ನಕಲಿ ಎಂಫಿಲ್ ಪದವಿ ಪ್ರಮಾಣಪತ್ರ ಸಲ್ಲಿಸಿ ಅತಿಥಿ ಉಪನ್ಯಾಸಕ ಹುದ್ದೆ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಡಾ.ಎಂ.ಎಸ್. ಚಲುವರಾಜು ಸಾಮಾಜಿಕ ಕ್ಷೇತ್ರದ ಸೇವಾ ಸಾಧನೆಗೆ ಮುಖ್ಯಮಂತ್ರಿಗಳಿಂದ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರಲ್ಲದೇ, ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಸ್ವೀಪ್ ಸಮಿತಿ ೨೦೨೩ರ ವಿಧಾನಸಭೆ ಚುನಾವಣೆಗೆ ಜಿಲ್ಲಾ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

ಮಂಡ್ಯ ವಿಶ್ವವಿದ್ಯಾಲಯದಲ್ಲಿರುವ ಅತಿಥಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆ ಆಯ್ಕೆ ಮಾಡಿ ಕಳುಹಿಸಿರುವಂತಹದ್ದು. ಉಪನ್ಯಾಸಕರ ದಾಖಲೆಗಳನ್ನೆಲ್ಲಾ ಅವರೇ ಪರಿಶೀಲಿಸಿ ಮಂಡ್ಯ ವಿವಿಗೆ ಕಳುಹಿಸಿದ್ದಾರೆ. ಅವರ ಹಾಜರಾತಿ ಮತ್ತು ವೇತನ ನೀಡುವುದಷ್ಟೇ ನಮ್ಮ ಕೆಲಸ. ಎಚ್.ಡಿ.ಗಂಗರಾಜು ನೀಡಿರುವ ದೂರಿನ ಬಗ್ಗೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತಂದಿದ್ದೇವೆ. ಅವರೂ ಕೂಡ ಡಾ.ಎಂ.ಎಸ್.ಚಲುವರಾಜುಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದ್ದರೂ ಕೊಟ್ಟಿಲ್ಲ. ಈ ವಿಚಾರವನ್ನು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೇ ವಿನಃ ನಮಗೆ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ.

- ಡಾ.ಪುಟ್ಟರಾಜು, ಕುಲಸಚಿವರು, ಮಂಡ್ಯ ವಿಶ್ವವಿದ್ಯಾಲಯ