ಯಳಂದೂರು: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿದ್ದು, ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಹಾಗಾಗಿ ಈ ವರದಿಯನ್ನು ರಾಜ್ಯ ಸರ್ಕಾರ ಅನುಮೋದಿಸಿ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ನಿಗದಿತ ಮೀಸಲಾತಿ ನೀಡಲು ಸಚಿವರು ಹಾಗೂ ಶಾಸಕರು ಪ್ರಯತ್ನಿಸಬೇಕೆಂದು ಹೊಸದುರ್ಗ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಕರೆ ನೀಡಿದರು
ಯಳಂದೂರು: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿದ್ದು, ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಹಾಗಾಗಿ ಈ ವರದಿಯನ್ನು ರಾಜ್ಯ ಸರ್ಕಾರ ಅನುಮೋದಿಸಿ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ನಿಗದಿತ ಮೀಸಲಾತಿ ನೀಡಲು ಸಚಿವರು ಹಾಗೂ ಶಾಸಕರು ಪ್ರಯತ್ನಿಸಬೇಕೆಂದು ಹೊಸದುರ್ಗ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಕರೆ ನೀಡಿದರು.
ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಭಾನುವಾರ ಶ್ರೀ ಭಗೀರಥ ಮಹರ್ಷಿ ಪುತ್ಥಳಿ ಹಾಗೂ ಭಗೀರಥ ಭವನ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಉಪ್ಪಾರ ಜನಾಂಗವು ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದೆ. ಜಾತಿಗಣತಿಯನ್ನು ಮಾಡಲಾಗಿದ್ದು ಇದರಿಂದ ನಮ್ಮ ಜನಸಂಖ್ಯೆ ನಿಖರವಾಗಿ ಸಿಗಲಿದೆ. ನಮಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಹಾಗಾಗಿ ವರದಿ ಆಧಾರದ ಮೇಲೆ ಇದನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಚಿವರು, ಶಾಸಕರು, ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದರು.ನಮ್ಮ ಜನಾಂಗ ಶೈಕ್ಷಣಿಕವಾಗಿ ಮುಂದುವರೆಯಬೇಕು. ನಮ್ಮ ಅಭಿವೃದ್ಧಿ ನಮ್ಮಿಂದಲೇ ಎಂಬ ಅಂಶವನ್ನು ಅಳವಡಿಸಿಕೊಳ್ಳಬೇಕು. ಪರಸ್ಪರ ದೋಷಣೆಯನ್ನು ಮಾಡಿ ಕಾಲಹರಣ ಮಾಡಬಾರದು. ನಮಗೆ ದೇವರು ನೀಡಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಜಿಲ್ಲಾ ಉಸ್ತುವಾರಿ, ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಉಪ್ಪಾರ ಜನಾಂಗ ಶಿಕ್ಷಿತರಾಗಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕು. ಹೊನ್ನೂರು ಗ್ರಾಮ ನಮ್ಮ ಹಿರಿಯರ ಗ್ರಾಮವಾಗಿದೆ. ಈ ಗ್ರಾಮಕ್ಕೂ ನನಗೂ ತುಂಬಾ ನಂಟಿದೆ. ಈ ಗ್ರಾಮ ನನ್ನ ರಾಜಕೀಯ ಜನ್ಮಕ್ಕೂ ಕಾರಣವಾದ ಗ್ರಾಮಗಳಲ್ಲಿ ಒಂದಾಗಿದೆ. ಈ ಗ್ರಾಮದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿದ್ದು. ಇದು ಮಾದರಿ ಗ್ರಾಮವಾಗಿದೆ. ಪ್ರತಿ ಸಮುದಾಯ ಯಾವುದೇ ಧಾರ್ಮಿಕ ಕಾರ್ಯನಡೆದರೂ ಕೂಡ ಎಲ್ಲರೂ ಭಾಗವಹಿಸುವ ಪರಿಪಾಠವಿದ್ದು ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಮುದಾಯ ಭವನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಉಪ್ಪಾರ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನವನ್ನು ನೀಡಿದ್ದೇನೆ. ಭಗೀರಥ ಭವನಗಳಿಗೆ 2.75 ಕೋಟಿ ರೂ. ವಿವಿಧ ಗ್ರಾಮಗಳ ಉಪ್ಪಾರ ಬೀದಿಯ ಚರಂಡಿ, ರಸ್ತೆ ಇತರೆ ಅಭಿವೃದ್ಧಿಗಾಗಿ 9 ಕೋಟಿ ರೂ.ಗಳನ್ನು ಇದುವರೆವಿಗೆ ನೀಡಿದ್ದೇನೆ. ಈ ಬಾರಿಯ ನನ್ನ ಗೆಲುವಿನಲ್ಲಿ ಈ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ನಾನು ಇದನ್ನು ಮರೆಯುವುದಿಲ್ಲ. ಯಳಂದೂರು ಪಟ್ಟಣದಲ್ಲಿ ಭಗೀರಥ ಭವನಕ್ಕೆ 50 ಲಕ್ಷ ರೂ. ನೀಡಿದ್ದು ಶೀಘ್ರದಲ್ಲೇ ಸಚಿವ ಪುಟ್ಟರಂಗಶೆಟ್ಟಿ ಹಾಗೂ ಶ್ರೀಗಳ ಸಮ್ಮುಖದಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುಂಚೆ ಇಲ್ಲಿರುವ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳನ್ನು ಬೆಳ್ಳಿ ರಥದ ಮೇಲೆ ಕುಳ್ಳಿರಿಸಿ, ವಿವಿಧ ಕಲಾತಂಡಗಳೊಂದಿಗೆ ಕಳಶ ಹೊತ್ತ ಹೆಂಗಸರು, ಸತ್ತಿಗೆ, ಸೂರಿಪಾನಿಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಾವಿರಾರು ಮಂದಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಈ ಸಂದರ್ಭದಲ್ಲಿ ಮಂಗಲ 88 ಗಡಿ ಮನೆ ಅಧಿಕಾರ ಪೀಠದ ಮಂಜುನಾಥಸ್ವಾಮಿ, ಅಯ್ಯನ ಸರಗೂರು ಮಠದ ಶ್ರೀಮಹಾದೇವಸ್ವಾಮಿ, ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಎಸ್.ಬಾಲರಾಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಸಿದ್ದರಾಜು, ಯಜಮಾನರಾದ ಗುರುಪ್ರಸಾದ್, ಮಹದೇವಶೆಟ್ಟಿ, ಸಿದ್ದಪ್ಪಸ್ವಾಮಿ, ರಾಜೇಂದ್ರ, ಶ್ರೀಕಂಠ, ಸಿದ್ದು, ಮುಖಂಡರಾದ ಹೊನ್ನೂರು ಮಹದೇವಸ್ವಾಮಿ, ಮಹೇಂದ್ರ, ಅರ್ಜುನ್, ಕಂದಹಳ್ಳಿ ನಂಜುಂಡಸ್ವಾಮಿ, ಡಿ.ಪಿ.ಪ್ರಭುಸ್ವಾಮಿ ಹಾಗೂ ಉಪ್ಪಾರ ಜನಾಂಗದ ಯುವಕ ಸಂಘದವರು, ಎಲ್ಲಾ ಸಮುದಾಯದ ಮುಖಂಡರು ಹಾಜರಿದ್ದರು.
23ವೈಎಲ್ಡಿಪಿ01ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಭಗೀರಥ ಪುತ್ಥಳಿ ಹಾಗೂ ಭವನವನ್ನು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಜಿ ಪುಷ್ಪಾರ್ಚನೆ ಮಾಡಿದರು. ಶಾಸಕ ಕೃಷ್ಣಮೂರ್ತಿ, ಮಾಜಿ ಶಾಸಕ ನಂಜುಂಡಸ್ವಾಮಿ ಇತರರಿದ್ದರು.