ಸಾರಾಂಶ
ನನ್ನ ವಿದ್ಯಾರ್ಥಿಯಾಗಿ, ಅಪ್ರತಿಮ ಸಾಧಕರಾಗಿ ಯಕ್ಷಗಾನಕ್ಕೆ ಹೊಸ ಶೈಲಿ ರೂಪಿಸಿದ ನಿರ್ಮಾತೃರಾಗಿದ್ದರು ಎಂದು ನಿವೃತ್ತ ಶಿಕ್ಷಕ ವಿ.ಕೆ. ಭಟ್ ತಿಳಿಸಿದರು.
ಕುಮಟಾ: ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಸುಬ್ರಹ್ಮಣ್ಯ ಧಾರೇಶ್ವರ ಬದುಕಿನಲ್ಲಿ ಕಂಡುಂಡ ಅನುಭವವೇ ಅವರ ಕಲಾಶಕ್ತಿಗೆ ಪ್ರೇರಣೆಯಾಗಿತ್ತು ಎಂದು ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಕಲಿಸಿದ ಗುರು, ನಿವೃತ್ತ ಶಿಕ್ಷಕ ವಿ.ಕೆ. ಭಟ್ ತಿಳಿಸಿದರು.
ತಾಲೂಕಿನ ಧಾರೇಶ್ವರದ ಸಭಾಭವನದಲ್ಲಿ ಭಾಗವತ ದಿ. ಸುಬ್ರಹ್ಮಣ್ಯ ಧಾರೇಶ್ವರ ಅಭಿಮಾನಿ ಬಳಗ ಶುಕ್ರವಾರ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಬದುಕಿನಲ್ಲಿ ಇನ್ನಷ್ಟು ಸಾಧಿಸಿ ತೋರಿಸುವ ಅವಕಾಶವಿದ್ದರೂ ವಿಧಿ ಅವರನ್ನು ಬಿಡಲಿಲ್ಲ. ನನ್ನ ವಿದ್ಯಾರ್ಥಿಯಾಗಿ, ಅಪ್ರತಿಮ ಸಾಧಕರಾಗಿ ಯಕ್ಷಗಾನಕ್ಕೆ ಹೊಸ ಶೈಲಿ ರೂಪಿಸಿದ ನಿರ್ಮಾತೃರಾಗಿದ್ದರು ಎಂದರು.ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಯಕ್ಷಗಾನದ ಪ್ರಯೋಗಶೀಲ ಭಾಗವತರಾಗಿ ನಾಡು ಕಂಡ ಶ್ರೇಷ್ಠ ಕಲಾವಿದರಲ್ಲಿ ಓರ್ವರಾದ ಸುಬ್ರಹ್ಮಣ್ಯ ಧಾರೇಶ್ವರ ಎಲ್ಲ ಭಾವಗಳ ಬೇರಿನಂತೆ ಪಾತ್ರಕ್ಕೆ ತಕ್ಕ ಭಾಗವತಿಕೆಯ ಮೂಲಕ ಕಲಾರಸಿಕರ ಮನ ಗೆದ್ದ ಅಪರೂಪದ ಸಾಧಕರು. ಅವರು ನಾಡಿಗೆ ಮಾದರಿ ಎಂದರು.
ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಮು ಅಡಿ, ಪ್ರಭಾಕರ ಭಂಡಾರಿ, ಸುಬ್ರಹ್ಮಣ್ಯ ಭಟ್ಟ, ಆರ್.ಕೆ. ಭಟ್ಟ ಮಾತನಾಡಿದರು. ದೇವಗಿರಿ ಯುವ ಬಳಗದ ಅಧ್ಯಕ್ಷ ಸಚಿನ ನಾಯ್ಕ, ಧಾರಾನಾಥ ದೇವಸ್ಥಾನದ ಮೊಕ್ತೇಸರ ಲಕ್ಷ್ಮಣ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ನಾಯ್ಕ, ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಮಾರ ಭಟ್ಟ, ಉದ್ಯಮಿ ಸುಬ್ಬು ಭಟ್ಟ, ನಾಗರಾಜ ಜೋಷಿ, ಕೇಶವ ಮಡಿವಾಳ, ಕೃಷ್ಣ ನಾಯ್ಕ, ಕಲಾವಿದ ಪಿ.ಎನ್. ಹೆಗಡೆ, ನಾಗರಾಜ ಶೇಟ್, ಶ್ರೀಕಾಂತ ಭಟ್ಟ, ಉದಯಭಟ್ಟ ಇತರರು ಇದ್ದರು.