ಮಂಗಳವಾರ ಬೆಳಗ್ಗಿನಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗ ತತ್ತರಿಸಿದೆ. ಸುಬ್ರಹ್ಮಣ್ಯದ ಕಲ್ಲಪಣೆ ಸಮೀಪ ರಭಸವಾಗಿ ಹರಿದು ಬಂದ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯೊಂದರ ಗೋಡೆ ಕುಸಿದು, ಕಂಪೌಂಡ್ ಕುಸಿದು ಬಿದ್ದು ಭಾರಿ ನಷ್ಟ ಸಂಭವಿಸಿದೆ.
ಸುಬ್ರಹ್ಮಣ್ಯ: ಮಂಗಳವಾರ ಬೆಳಗ್ಗಿನಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗ ತತ್ತರಿಸಿದೆ. ಸುಬ್ರಹ್ಮಣ್ಯದ ಕಲ್ಲಪಣೆ ಸಮೀಪ ರಭಸವಾಗಿ ಹರಿದು ಬಂದ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯೊಂದರ ಗೋಡೆ ಕುಸಿದು, ಕಂಪೌಂಡ್ ಕುಸಿದು ಬಿದ್ದು ಭಾರಿ ನಷ್ಟ ಸಂಭವಿಸಿದೆ. ವಿಷಯ ತಿಳಿದು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ರವಿ ಕಕ್ಕೆಪದವು ಮತ್ತು ಸದಸ್ಯರು ಸ್ಥಳಕ್ಕೆ ಆಗಮಿಸಿ ಕುಸಿದ ಗೋಡೆಗಳ ದುರಸ್ತಿ ಕಾರ್ಯದಲ್ಲಿ ತೊಡಗಿದರು. ಸುಬ್ರಹ್ಮಣ್ಯ ಗ್ರಾಪಂ ಕಾರ್ಯದರ್ಶಿ ಮೋನಪ್ಪ ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಪಂ ಹಾಗೂ ಕಂದಾಯ ಇಲಾಖೆ ವತಿಯಿಂದ ಪ್ರಕೃತಿ ವಿಕೋಪದಡಿ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿದರು.
ರಸ್ತೆ ಕುಸಿತ: ಯೇನೆಕಲ್ಲಿನ ಬೂದಿಪಳ್ಳ-ಮಧುವನ-ದೇವರಹಳ್ಳಿ ರಸ್ತೆಯ ಮಧ್ಯೆ ಭೂ ಕುಸಿತ ಸಂಭವಿಸಿ ರಸ್ತೆ ಸಂಪೂರ್ಣ ಕುಸಿದಿದೆ. ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಗ್ರಾಪಂ ಕಾರ್ಯದರ್ಶಿ ಮೋನಪ್ಪ ಹಾಗೂ ಗ್ರಾಪಂ ನಿಕಟಪೂರ್ವ ಸದಸ್ಯ ದಿಲೀಪ್ ಉಪ್ಪಳಿಕೆ ಭೇಟಿ ನೀಡಿ ಪರಿಶೀಲಿಸಿದರು.ರಸ್ತೆ ಬದಿ ಗುಡ್ಡ ಕುಸಿತ; ಸುಬ್ರಹ್ಮಣ್ಯ-ಸುಳ್ಯ ರಸ್ತೆಯ ಮಲೆಯಾಳ ಎಂಬಲ್ಲಿ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆ ರಸ್ತೆಯಲ್ಲೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.ಬಿಸಿಲೆಘಾಟ್‌ನಲ್ಲಿ ಮರ ಬಿದ್ದು ಸಂಚಾರ ಸ್ಥಗಿತ: ಬಿಸಿಲೆಘಾಟ್ ಮಾರ್ಗದಲ್ಲಿ ಗಾಳಿ-ಮಳೆಗೆ ಮರಗಳು ಧರೆಗುರುಳಿದ್ದು, ರಸ್ತೆ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ದಾರಿ ಮಧ್ಯೆ ಸಿಲುಕಿರುವ ಪ್ರವಾಸಿಗರು ಪರದಾಡುವಂತಾಗಿದೆ. ಮಧ್ಯಾಹ್ನದಿಂದ ಸಾರಿಗೆ ಬಸ್‌ಗಳು ಸೇರಿದಂತೆ ಹಲವು ವಾಹನಗಳು ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ನಿರಂತರ ಮಳೆ ಹಾಗೂ ಹಲವೆಡೆ ಭೂ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.