ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಗೋಪಾಲ ನಾಯರ್ ಅವರ ಪುತ್ರ ಹರಿಪ್ರಸಾದ್ (37) ಹಾಗೂ ಕೊಲ್ಲಮೊಗ್ರು ಗ್ರಾಮದ ಗೋಳ್ಯಾಡಿ ದಿ.ಮೋನಪ್ಪ ಗೌಡರ ಪುತ್ರ ಸುಜಿತ್ (26) ಸುಬ್ರಹ್ಮಣ್ಯ ಕುಮಾರಧಾರಾ ನದಿಯಲ್ಲಿ ಮುಳುಗಿ ಭಾನುವಾರ ಮೃತಪಟ್ಟರು.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಭಾನುವಾರ ಸಂಭವಿಸಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಗೋಪಾಲ ನಾಯರ್ ಅವರ ಪುತ್ರ ಹರಿಪ್ರಸಾದ್ (37) ಹಾಗೂ ಕೊಲ್ಲಮೊಗ್ರು ಗ್ರಾಮದ ಗೋಳ್ಯಾಡಿ ದಿ.ಮೋನಪ್ಪ ಗೌಡರ ಪುತ್ರ ಸುಜಿತ್ (26) ಮೃತರು. ಮೃತರು ಇಬ್ಬರೂ ಅವಿವಾಹಿತರು.
ಹರಿಪ್ರಸಾದ್ ಹಾಗೂ ಸುಜಿತ್ ಅವರು ಇನ್ನೂ ಹಲವರು ಯುವಕರೊಂದಿಗೆ ಭಾನುವಾರ ಸುಬ್ರಹ್ಮಣ್ಯದ ಕುಲ್ಕುಂದ ಬಳಿ ನದಿಗೆ ಸ್ನಾನಕ್ಕೆಂದು ತೆರಳಿದ್ದಾರೆ. ನದಿಗಿಳಿದ ಇಬ್ಬರಲ್ಲಿ ಒರ್ವ ಕಾಲುಜಾರಿ ನೀರಲ್ಲಿ ಮುಳುಗಿದರು. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ ಇನ್ನೋರ್ವರೂ ನೀರಲ್ಲಿ ಮುಳುಗಿದ್ದಾರೆ. ಕೂಡಲೇ ಇನ್ನಿತರರು ನೀರಲ್ಲಿ ಮುಳುಗಿದ ಇಬ್ಬರನ್ನೂ ನೀರಿನಿಂದ ಮೇಲಕ್ಕೆ ತಂದರಾದರೂ ಅದಾಗಲೇ ಇಬ್ಬರೂ ನೀರಲ್ಲಿ ಮುಳುಗಿ ಮೃತರಾಗಿದ್ದರು ಎಂದು ತಿಳಿದುಬಂದಿದೆ.ಸುಬ್ರಹ್ಮಣ್ಯ, ಕೊಲ್ಲಮೊಗ್ರು ಭಾಗದಲ್ಲಿ ಗುರುತಿಸಿಕೊಂಡಿದ್ದ ಈ ಇಬ್ಬರು ಯುವಕರ ನಿಧನ ಸುದ್ದಿ ತಿಳಿಯುತ್ತಲೇ ಹಲವರು ಘಟನಾ ಸ್ಥಳ ಹಾಗೂ ಮೃತರ ಮನೆಗಳಿಗೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ತಿಳಿಸಿದರು. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಗೆ ಆಧಾರಸ್ತಂಭ:ಹರಿಪ್ರಸಾದ್ ಅವರು ಸುಬ್ರಹ್ಮಣ್ಯದಲ್ಲಿ ಹಲವು ವರ್ಷಗಳಿಂದ ಖಾಸಗಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು/. ಕೆಲ ತಿಂಳ ಹಿಂದೆ ಹರಿಹರ ಪಳ್ಳತ್ತಡ್ಕದಲ್ಲೂ ಹೊಸ ಶಾಖೆ ತೆರೆದಿದ್ದರು. ಕಾರ್ಯಕ್ರಮ ನಿರೂಪಣೆ ಸೇರಿದಂತೆ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಮೃತರು ತಂದೆ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ದಿ.ಮೋನಪ್ಪ ಗೌಡರ ಪುತ್ರ ಸುಜಿತ್ ಅವರು ಹರಿಪ್ರಸಾದ್ ಅವರ ಹರಿಹರ ಪಳ್ಳತ್ತಡ್ಕದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು. ಮನೆಗೆ ಆಧಾರವಾಗಿದ್ದರು. ಮೃತರು ತಾಯಿ, ಸಹೋದರನನ್ನು ಅಗಲಿದ್ದಾರೆ.