ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುತೊಂಭತ್ತನೇ ವಯಸ್ಸಿನಲ್ಲೂ ಪಾಠ ಮಾಡುವ ಶಿಕ್ಷಕರನ್ನು ಎಲ್ಲಾದರೂ ನೋಡಿದ್ದೀರಾ? ಅದರಲ್ಲೂ ಕನ್ನಡದ ಮೇಲೆ ಮಮಕಾರವಿಟ್ಟು, ಕನ್ನಡ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿಸ್ವಾರ್ಥವಾಗಿ ದುಡಿಯುತ್ತಿರುವ ಶಿಕ್ಷಕರೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದ್ದಾರೆ.
ಅವರು ಕೆ.ಸುಬ್ರಾಯ ಭಟ್. ನಿವೃತ್ತ ಶಿಕ್ಷಕರು. ಬಂಟ್ವಾಳದ ಮುರ ಎಂಬಲ್ಲಿ ವೃದ್ಧಾಶ್ರಮದಲ್ಲಿ ವಾಸವಾಗಿರುವ ಇವರು ಅದೇ ತಾಲೂಕಿನ ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಪ್ರತಿನಿತ್ಯವೂ ರಿಕ್ಷಾದಲ್ಲಿ ತೆರಳಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಕನ್ನಡ ಮತ್ತು ಗಣಿತ ಪಾಠ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಯಾವ ಗೌರವಧನವನ್ನೂ ಪಡೆಯುವುದಿಲ್ಲ, ಬದಲಾಗಿ ತಮ್ಮದೇ ಖರ್ಚಿನಿಂದ ಮಕ್ಕಳ ಓದಿಗೆ, ಶಾಲೆಯ ಏಳಿಗೆಗೆ ನೆರವಾಗುತ್ತಿದ್ದಾರೆ.ಸುಬ್ರಾಯ ಭಟ್ ಕಲಿತದ್ದು ಇದೇ ಕೆದಿಲ ಶಾಲೆಯಲ್ಲಿ. 1956ರಲ್ಲಿ ಶಿಕ್ಷಕರಾಗಿ ಸೇರಿಕೊಂಡ ಅವರು, ಸುದೀರ್ಘ 37 ವರ್ಷ ಕಾರ್ಯ ನಿರ್ವಹಿಸಿ, ಮುಖ್ಯೋಪಾಧ್ಯಾಯರಾಗಿ 1993ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡು ಅಲ್ಲಿ ಕೆಲ ವರ್ಷ ವಾಸವಾಗಿದ್ದರು. ಮಕ್ಕಳಿಬ್ಬರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿಯ ನಿಧನಾನಂತರ ಊರಿಗೆ ಹಿಂತಿರುಗಿ, ಮರಳಿ ಶಿಕ್ಷಣ ಸೇವೆ ಮುಂದುವರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತಾವು ಕಲಿತ, ಶಿಕ್ಷಕರಾಗಿ ಬೋಧಿಸಿದ್ದ ಶಾಲೆಯಲ್ಲೇ ಮರಳಿ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳ ಒಡನಾಟದಲ್ಲಿ ಜೀವನ ಸಂತೃಪ್ತಿಯನ್ನು ಕಾಣುತ್ತಿದ್ದಾರೆ.
ಕನ್ನಡ ಕಲಿಕೆಗೆ ಆದ್ಯತೆ:ಮಕ್ಕಳು ತಪ್ಪಿಲ್ಲದೆ ಕನ್ನಡ ಓದಲು-ಬರೆಯಲು ಕಲಿಯಬೇಕು, ಸ್ಪಷ್ಟವಾದ ಉಚ್ಚಾರ, ಅಂದದ ಕೈಬರಹ ಅಳವಡಿಸಿಕೊಳ್ಳಬೇಕು ಎನ್ನುವುದು ಸುಬ್ರಾಯ ಮೇಷ್ಟ್ರ ಆಸೆ. ಹಾಗಾಗಿ, ಮೂಲದಲ್ಲೇ ಕನ್ನಡವನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಅವರು ನಿರತರಾಗಿದ್ದಾರೆ. ಆಯಾ ತರಗತಿಯ ಮೇಷ್ಟ್ರು ಮಾಡಿದ ಪಾಠವನ್ನು ರಿವಿಜನ್ ಮಾಡುವುದರ ಜತೆಗೆ ಕನ್ನಡದೊಂದಿಗೆ ಗಣಿತ, ಮಗ್ಗಿಯನ್ನೂ ಪ್ರೀತಿಯಿಂದ ಮಕ್ಕಳಿಗೆ ಮನದಟ್ಟು ಮಾಡಿಸುತ್ತಾರೆ.
ತಪ್ಪಿಲ್ಲದೆ ಬರೆಯುವ, ಅಂದದ ಕೈಬರಹ ರೂಢಿಸಿಕೊಂಡಿರುವ, ಸ್ಪಷ್ಟ ಉಚ್ಚಾರ ಹೇಳುವ, ತಪ್ಪಿಲ್ಲದೆ ಮಗ್ಗಿ ಹೇಳುವ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮಕ್ಕಳಿಗೆ ಪೆನ್ನು, ಪುಸ್ತಕ, ಪಾತ್ರೆ ಇತ್ಯಾದಿ ಬಹುಮಾನ ನೀಡಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಹೀಗಾಗಿ, ಇವರು ಮಕ್ಕಳ ಪಾಲಿಗೆ ಪ್ರೀತಿಯ ಮೇಷ್ಟ್ರೂ ಹೌದು. ಇದಲ್ಲದೆ ನೀತಿ ಕತೆಯ ಪುಸ್ತಕಗಳು, ರಾಮಾಯಣ, ಮಹಾಭಾರತ ಇತ್ಯಾದಿ ಪುಸ್ತಕಗಳನ್ನು ನೀಡಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನೂ ತುಂಬುತ್ತಿದ್ದಾರೆ.ಶಾಲೆಗೆ ಮರುಜೀವ:
1907ರಲ್ಲಿ ಸ್ಥಾಪನೆಯಾದ ಕೆದಿಲ ಶಾಲೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದೆ. ಆದರೆ, ಕಾಲಕ್ರಮೇಣ ಈ ಶಾಲೆಯ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ತಾವು ಕಲಿತ ಶಾಲೆ ಮುಚ್ಚುವ ಹಂತಕ್ಕೆ ಬರುವುದನ್ನು ತಪ್ಪಿಸಲು ಮುಂದಾದ ಸುಬ್ರಾಯ ಭಟ್, ಶಾಲೆಯ ಅಭಿವೃದ್ಧಿಗಾಗಿ ತಮ್ಮ ಉಳಿತಾಯದ ₹15 ಲಕ್ಷ ದೇಣಿಗೆ ನೀಡಿ ಕಾಯಕಲ್ಪಕ್ಕೆ ಮುಂದಾದರು. ಮಾತ್ರವಲ್ಲದೆ, ಅತಿಥಿ ಶಿಕ್ಷಕರ ಗೌರವ ಧನಕ್ಕಾಗಿ ಸಾರ್ವಜನಿಕರಿಂದ ₹3 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಈಗ ಕನ್ನಡದೊಂದಿಗೆ ಇಂಗ್ಲಿಷ್ ಕಲಿಕೆಯನ್ನೂ ಆರಂಭಿಸಿ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ನೀಡುವ ಪ್ರಯತ್ನ ನಡೆದಿದೆ. ಮುಚ್ಚುವ ಹಂತದಲ್ಲಿದ್ದ ಶಾಲೆಯಲ್ಲೀಗ ಮಕ್ಕಳ ಸಂಖ್ಯೆ 2-3 ಪಟ್ಟು ಹೆಚ್ಚಾಗಿದೆ.ಕಳೆದೆರಡು ವರ್ಷ ಬೆಳಗಿನಿಂದ ಸಂಜೆವರೆಗೂ ಮಕ್ಕಳ ಕಲಿಕೆಯಲ್ಲೇ ಸಮಯ ಕಳೆಯುತ್ತಿದ್ದರು. ಈಗ ವೃದ್ಧಾಪ್ಯದ ಕಾರಣದಿಂದ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಾತ್ರ ಕಲಿಸುತ್ತಿದ್ದಾರೆ. ಇದರೊಂದಿಗೆ ಸಮಾಜದಲ್ಲಿನ ಬಡವರಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ.
ಇಳಿ ವಯಸ್ಸಿನಲ್ಲೂ ಮಕ್ಕಳ ಶಿಕ್ಷಣಕ್ಕಾಗಿ, ಕನ್ನಡದ ಉಳಿವಿಗಾಗಿ, ಶಾಲೆಯ ಏಳಿಗೆಗಾಗಿ ದುಡಿಯುತ್ತಿರುವ ಸುಬ್ರಾಯ ಭಟ್ ಅವರು ಶಿಕ್ಷಕ ಸಮೂಹಕ್ಕೊಂದು ಮಾದರಿ.;Resize=(128,128))
;Resize=(128,128))
;Resize=(128,128))