ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ರೈತರಿಗೆ ಸರ್ಕಾರದಿಂದ ಸಬ್ಸಿಡಿ ಮೂಲಕ ಲಭ್ಯವಾಗುವ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ನಕಲಿ ಚೀಲಗಳಲ್ಲಿ ತುಂಬಿಸಿ ಕೇರಳಕ್ಕೆ ಸಾಗಾಟ ಮಾಡುವ ದಂಧೆಯನ್ನು ಪತ್ತೆ ಹಚ್ಚಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ ಪ್ರಕರಣ ಕುಶಾಲನಗರ ಸಮೀಪದ ಕೊಪ್ಪದಲ್ಲಿ ನಡೆದಿದೆ.ಸರ್ಕಾರದಿಂದ ನೀಡಲಾಗುವ ರು. 3 ಸಾವಿರ ಮೌಲ್ಯದ ಯೂರಿಯಾ ಸರ್ಕಾರದ ಸಬ್ಸಿಡಿ ಮೂಲಕ ರೈತರಿಗೆ ಕೇವಲ ರು. 265 ಕ್ಕೆ ದೊರಕುತ್ತಿದೆ. ಇದನ್ನು ಕೆಲವು ಗೊಬ್ಬರದ ಅಂಗಡಿಯ ಮಾಲೀಕರು ಹಾಗೂ ದಂಧೆಕೋರರು ಶಾಮಿಲಾಗಿ ರೈತರ ಹೆಸರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಗೊಬ್ಬರವನ್ನು ಅಸಲಿ ಚೀಲದಿಂದ ನಕಲಿ ಚೀಲಗಳಿಗೆ ತುಂಬಿ ಲಾರಿಗಳ ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದಾರೆ. ಈ ಮೂಲಕ ಬ್ಯಾಗ್ ಒಂದಕ್ಕೆ ರು. 4 ಸಾವಿರ ಗಳಿಸುವ ದಂಧೆ ಇದಾಗಿದೆ.
ಈ ದಂಧೆಯನ್ನು ಸ್ಥಳೀಯ ಯುವಕರು ಪತ್ತೆ ಹಚ್ಚಿ ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಪಟ್ಟಣ ಸೇರಿದಂತೆ ಹೆಬ್ಬಾಲೆ, ಆವರ್ತಿ ,ಕೊಪ್ಪ ಗ್ರಾಮಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಯೂರಿಯಾ ಗೊಬ್ಬರಕ್ಕೆ ಕೇರಳದಲ್ಲಿ ಭಾರಿ ಪ್ರಮಾಣದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಬ್ಯಾಗ್ ಒಂದಕ್ಕೆ ರು. 4 ಸಾವಿರದಂತೆ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೊಬ್ಬರ ಅಭಾವ ಆರೋಪ:ಕುಶಾಲನಗರದ ಕೈಗಾರಿಕಾ ಬಡಾವಣೆ, ಕೊಪ್ಪ ಗ್ರಾಮದ ಆವರ್ತಿ ವಿರಾಜಪೇಟೆ ಮತ್ತಿತರ ಕಡೆಗಳಲ್ಲಿ ಈ ದಂಧೆಗಳು ಮಿತಿಮೀರಿದ್ದು ರೈತಾಪಿ ವರ್ಗಕ್ಕೆ ಅಗತ್ಯವಾಗಿ ಲಭ್ಯವಾಗಬೇಕಾದ ಯೂರಿಯಾ ಗೊಬ್ಬರ ಅಭಾವ ಎದುರಾಗಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.
ಎರಡು ಜಿಲ್ಲೆಗಳಲ್ಲಿ ರೈತರು ಕೃಷಿ ಕಾಫಿ ಕರಿಮೆಣಸು ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ಯೂರಿಯಾ ಗೊಬ್ಬರ ಬಳಸುತ್ತಿದ್ದು ಪ್ರತಿ ರೈತರು ತಮ್ಮ ದಾಖಲೆ ನೀಡುವ ಮೂಲಕ ಗರಿಷ್ಠ 49 ಬ್ಯಾಗ್ ಯೂರಿಯಾ ಗೊಬ್ಬರ ಪಡೆಯುವ ಅವಕಾಶ ಲಭ್ಯವಿದೆ.ಆದರೆ ರೈತರಿಗೆ ಸರ್ಕಾರ ಸಬ್ಸಿಡಿ ಮೂಲಕ ಒದಗಿಸಿರುವ ಯೂರಿಯಾ ಗೊಬ್ಬರ ಕುಶಾಲನಗರದ ಕೈಗಾರಿಕಾ ಬಡಾವಣೆಯ ಮತ್ತು ಸಮೀಪದ ಕೊಪ್ಪ ಗ್ರಾಮದ ಆವರ್ತಿ ಬಳಿ ಗೋಡೌನ್‌ಗಳಲ್ಲಿ ಸಂಗ್ರಹಿಸಿ ಅಸಲಿ ಚೀಲದಿಂದ ನಕಲಿ ಚೀಲಗಳಿಗೆ ತುಂಬಿಸಿ ನಂತರ ಬೃಹತ್ ಗಾತ್ರದ ಲಾರಿಗಳಲ್ಲಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಿದೆ ಎನ್ನುವ ಮಾಹಿತಿಗಳು ಹೊರ ಬಿದ್ದಿವೆ.
ಅಂಗಡಿ ಮಾಲೀಕರು ಭಾಗಿ ಶಂಕೆ:ಈ ದಂಧೆಯಲ್ಲಿ ಕುಶಾಲನಗರ ಮತ್ತು ನೆರೆಯ ಕೊಪ್ಪ ವ್ಯಾಪ್ತಿಯ ಗೊಬ್ಬರದ ಅಂಗಡಿಗಳ ಕೆಲವು ಮಾಲೀಕರು ಕೂಡ ಶಾಮಿಲು ಆಗಿರುವ ಶಂಕೆ ವ್ಯಕ್ತಗೊಂಡಿದೆ ಎಂದು ರೈತ ಮಹಾದೇವಪ್ಪ ತಿಳಿಸಿದ್ದಾರೆ.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಇಂತಹ ಮೂರು ಪ್ರಕರಣಗಳು ಪತ್ತೆಯಾಗಿದ್ದು ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ಕೆಲವು ವ್ಯಕ್ತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಹೆಬ್ಬಾಲೆ ಕುಶಾಲನಗರ ವಿರಾಜಪೇಟೆ ವ್ಯಾಪ್ತಿಯಲ್ಲಿ ದಂಧೆ ಬೆಳಕಿಗೆ ಬಂದಿತ್ತು ಎಂದು ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿ ರಿಯಾಜ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಲಾಖೆ ಅಧಿಕಾರಿಗಳ ಬಿಗಿ ನಿಲುವು ಹಿನ್ನೆಲೆಯಲ್ಲಿ ದಂಧೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಎರಡು ತಾಲೂಕುಗಳಿಗೆ ಬಿಡುಗಡೆಯಾಗುವ ಸಬ್ಸಿಡಿ ಯೂರಿಯಾ ಗೊಬ್ಬರ ಮೂಟೆಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿ ನಂತರ ಚೀಲಗಳನ್ನು ಬದಲಿಸಿ ಕೇರಳಕ್ಕೆ ಸಾಗಾಟ ಮಾಡಿ ಲಕ್ಷಾಂತರ ರು.ಗಳನ್ನು ಲೂಟಿ ಮಾಡುತ್ತಿರುವುದು ಪ್ರಸಕ್ತ ಬೆಳವಣಿಗೆಯಾಗಿದೆ.ಕುಶಾಲನಗರ ಸಮೀಪದ ಆವರ್ತಿ ಅಕ್ಕಿ ಗಿರಣಿಯಲ್ಲಿ ಈ ದಂಧೆ ನಡೆಯುತ್ತಿದ್ದ ಸಂದರ್ಭ ಗಮನಿಸಿದ ಯುವಕರಾದ ಮ್ಯಾಥ್ಯೂ, ಪ್ರಜ್ಜು , ಮಹೇಶ್ ,ಪ್ರಕಾಶ, ದಯಾನಂದ ಮತ್ತಿತರರು ಈ ದಂಧೆಯ ಬಗ್ಗೆ ಸೂಕ್ಷ್ಮವಾಗಿ ಹಿಂಬಾಲಿಸಿದ್ದು ಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಹಿಂಬಾಲಿಸಿದ ಸಂದರ್ಭ ಲಾರಿ ಚಾಲಕ ಹೆದರಿ ಲಾರಿಯನ್ನು ಕುಶಾಲನಗರ ಸಮೀಪದ ಕೊಪ್ಪ ಪೆಟ್ರೋಲ್ ಪಂಪ್ ಒಂದರಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ.
ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿಗಳಾದ ಪ್ರಸಾದ್ , ಹಿತೇಶ್ ಮತ್ತು ಸಿಬ್ಬಂದಿ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಬೈಲುಕುಪ್ಪೆ ಪೊಲೀಸರ ಸಹಕಾರದೊಂದಿಗೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ ಪತ್ತೆ ಹಚ್ಚಬೇಕು. ಆ ಮೂಲಕ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕು ಮತ್ತು ದಂಧೆಕೋರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮ್ಯಾಥ್ಯೂ ಆಗ್ರಹಿಸಿದ್ದಾರೆ.-----------------ಲಾರಿಯಲ್ಲಿ ಅಂದಾಜು 500-600 ರಷ್ಟು ಗೊಬ್ಬರ ತುಂಬಿದ ನಕಲಿ ಚೀಲಗಳು ಪತ್ತೆಯಾಗಿದ್ದು ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
-ಪ್ರಸಾದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.