ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಡಿಸಿಸಿ ಬ್ಯಾಂಕ್ ನ ಶತಮಾನೋತ್ಸವ ಭವನದ ಲೋಕಾರ್ಪಣೆಯ ಹಿಂದೆ ಬ್ಯಾಂಕಿನ ಹಲವಾರು ಸಹಕಾರಿಗಳ ಶ್ರಮವಿದೆ. ಕೊಡಗು, ಸಣ್ಣ ಜಿಲ್ಲೆಯಾದರೂ ಕೂಡ ಕೊಡಗಿನ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ. ಈ ಬಗ್ಗೆ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಬ್ಯಾಂಕಿನ ಶತಮಾನೋತ್ಸವ ‘ಉನ್ನತಿ’ ಭವನ ಲೋಕಾರ್ಪಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ದೂರ ಇಟ್ಟು ಕೆಲಸ ಮಾಡಬೇಕು. ಕೊಡಗಿನ ಸಹಕಾರಿ ಕ್ಷೇತ್ರದ ಬಗ್ಗೆ ರಾಜ್ಯದಲ್ಲಿ ಉತ್ತಮ ಹೆಸರಿದೆ. ಸರ್ಕಾರ ಮಾಡದ ಕೆಲಸವನ್ನು ಸಹಕಾರಿ ಕ್ಷೇತ್ರದಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಪೂರೈಸಿ ಉನ್ನತಿ ಹೆಸರಿನಲ್ಲಿ ಭವನ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಪಾತ್ರ ದೊಡ್ಡದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಕೆಲವು ನ್ಯೂನತೆಯಿಂದ ಕೂಡಿವೆ. ಆದರೆ ಜನರೊಂದಿಗೆ ಸಹಕಾರ ಸಂಘಗಳು ಗಟ್ಟಿಗೊಳಿಸಲು ಸಹಕಾರಿ ಕ್ಷೇತ್ರ ಮುಖ್ಯವಾಗಿದೆ ಎಂದು ಹೇಳಿದರು.ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕೊಡಗಿನ ಡಿಸಿಸಿ ಬ್ಯಾಂಕ್ ಗೆ ಸುಮಾರು 102 ವರ್ಷಗಳ ಇತಿಹಾಸವಿದೆ. ಜನಪ್ರತಿನಿಧಿಗಳು ಜನರಿಗೆ ನೇರವಾಗಿ ಜನರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಸಹಕಾರಿ ಸಂಘಗಳ ಮೂಲಕ ಸಾರ್ವಜನಿಕರಿಗೆ ಸೇವೆ ಮಾಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಯುವಕರನ್ನು ಸದಸ್ಯರಾಗಿ ಮಾಡಿಕೊಳ್ಳಬೇಕು. ಡಿಸಿಸಿ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಮಾಡಬೇಕು ಹೇಳಿದರು.
ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ ಡಿಸಿಸಿ ಬ್ಯಾಂಕ್ ಮೂಲಕ 1974ರಲ್ಲಿ ರು.3 ಕೋಟಿ ಸಾಲ ನೀಡುತ್ತಿದ್ದೇವೆ. ಆದರೆ ಈಗ ಸುಮಾರು ಸಾವಿರಾರು ಕೋಟಿ ರೂಪಾಯಿ ಸಾಲ ನೀಡುತ್ತಿದ್ದೇವೆ. ಇದು ಡಿಸಿಸಿ ಬ್ಯಾಂಕ್ ನ ಬೆಳವಣಿಗೆ. ಸಹಕಾರಿ ಸಂಘದಲ್ಲಿ ಯಾವುದೇ ರಾಜಕೀಯ ನುಸುಳಬಾರದು. ಕೊಡಗು ಡಿಸಿಸಿ ಬ್ಯಾಂಕ್ ಇಂದಿಗೂ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ನೋಂದಣಿಯಾದ ಸಹಕಾರ ಸಂಘಗಳಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಮಾಡುವುದು ಸರಿಯಲ್ಲ ಹೇಳಿದರು.ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಬಾಂಡ್ ಗಣಪತಿ ಪ್ರಸ್ತಾವಿಕವಾಗಿ ಮಾತನಾಡಿ ಕೊಡಗು ಡಿಸಿಸಿ ಬ್ಯಾಂಕ್ ನಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಸೌಲಭ್ಯ ಮಾಡಲಾಗಿದೆ. ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭ ಹಲವರಿಗೆ ಆರ್ಥಿಕ ಸಹಾಯವನ್ನು ಬ್ಯಾಂಕ್ ನಿಂದ ನೀಡಲಾಗಿದೆ. ಕಳೆದ ಎರಡು ದಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಲ ಮೇಳದಲ್ಲಿ 577 ವಾಹನಗಳಿಗೆ ಸುಮಾರು ರು.40 ಕೋಟಿ ಸಾಲ ನೀಡಲಾಗಿರುವುದು ಈ ಮೇಳದ ವಿಶೇಷ ಎಂದು ತಿಳಿಸಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಡಿಸಿಸಿ ಬ್ಯಾಂಕ್ ನ ಕಾವೇರಿ ಸಿರಿಯಲ್ಲಿ ಯೋಜನೆಯಲ್ಲಿ ಶೇ.8.5 ಬಡ್ಡಿ ನೀಡಲಾಗುತ್ತಿದೆ. ಆದ್ದರಿಂದ ಹಿರಿಯರು ಠೇವಣಿ ಇಡಬೇಕು. ದೇಶ ಆರ್ಥಿಕವಾಗಿ ಸಬಲವಾಗಬೇಕಾದರೆ ಸಣ್ಣ ಪ್ರಮಾಣದಲ್ಲಿ ಸಾಲ ನೀಡಬೇಕೆಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಸಹಕಾರ ಸಂಘಗಳ ಹಿರಿಯ ಅಧಿಕಾರಿ ಎಸ್.ಸಿ. ದಿವಾಕರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಮನವಟ್ಟಿರ ಬೆಳ್ಯಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ ಮತ್ತಿತರರು ಹಾಜರಿದ್ದರು. ಉನ್ನತಿ ಭವನ ಉದ್ಘಾಟನೆ ನಗರದ ರಾಜಾಸೀಟ್ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿ ಭವನವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಕಾವೇರಿ ಪ್ರತಿಮೆಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಭದ್ರತಾ ಕೊಠಡಿಯನ್ನು ಸಂಸದ ಪ್ರತಾಪ್ ಸಿಂಹ, ಆಡಳಿತ ಮಂಡಳಿ ಸಭಾಂಗಣವನ್ನು ಮಾಜಿ ಸಚಿವ ಎಂ.ಸಿ. ನಾಣಯ್ಯ, ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಸಭಾಂಗಣವನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ ಪ್ರತಿಮೆಯನ್ನು ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ಮನೆಗಳಲ್ಲಿ ದೀಪ ಹಚ್ಚಿ...ಸೋಮವಾರ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗುತ್ತಿದೆ. 400 ವರ್ಷಗಳ ಕಾಲ ನ್ಯಾಯಯುತ ಹೋರಾಟದ ಮೂಲಕ ಲಕ್ಷಾಂತರ ಮಂದಿಯ ತ್ಯಾಗದ ಮೂಲಕ ದೇವಾಲಯ ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠೆಯಾಗುತ್ತಿದೆ. ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಸಂಸದ ಪ್ರತಾಪ ಸಿಂಹ ಡಿಸಿಸಿ ಬ್ಯಾಂಕ್ ಉನ್ನತಿ ಭವನ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮೈಸೂರು-ಕುಶಾಲನಗರ ಚತುಷ್ಪತ ರಸ್ತೆ ಮುಂದಿನ 15 ತಿಂಗಳೊಳಗೆ ಲೋಕಾರ್ಪಣೆಯಾಗಲಿದೆ. ಸಂಪಾಜೆಯಿಂದ - ಮಾಣಿ ವರೆಗೆ ಕೂಡ 4 ಲೈನ್ ರಸ್ತೆ ಆಗಲಿದೆ ಎಂದು ಇದೇ ಸಂದರ್ಭ ತಿಳಿಸಿದರು.