ಸಾರಾಂಶ
ಕೇವಲ ವೃತ್ತಿಯಲ್ಲಿ ತೊಡಗಿದರೆ ಸಾಲದು, ವೃತ್ತಿ ಕೌಶಲ್ಯ ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಟ್ಟೀಹಳ್ಳಿ: ಕೇವಲ ವೃತ್ತಿಯಲ್ಲಿ ತೊಡಗಿದರೆ ಸಾಲದು, ವೃತ್ತಿ ಕೌಶಲ್ಯ ಅಳವಡಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದ ಆವರಣದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಬಡಿಗೇರ ವೃತ್ತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ಸಬಲೀಕರಣವನ್ನು ಉತ್ತೇಜಿಸುವುದು ಕಾರ್ಯಕ್ರಮದ ಮೂಲಭೂತ ಉದ್ದೇಶವಾಗಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ವೈಯಕ್ತಿಕ ಕುಶಲಕರ್ಮಿಗಳು ಮತ್ತು ಕರಕುಶಲ ಸಮುದಾಯಗಳನ್ನು ಅಗತ್ಯ ಸಂಪನ್ಮೂಲಗಳು ಮತ್ತು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಸ್ವಾವಲಂಬನೆಯನ್ನು ಸಕ್ರಿಯಗೊಳಿಸಲು ಮತ್ತು ಆರ್ಥಿಕ ಸಮೃದ್ಧಿ ಹೊಂದಲು ಇಂತಹ ಶಿಬಿರಗಳು ಸಹಾಯಕಾರಿಯಾಗಿವೆ ಎಂದು ಹೇಳಿದರು.ಮ.ನಿ.ಪ್ರ. ಮಹಾಂತಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಜೀವನದ ಸಾರ್ಥಕತೆ ಪಡೆಯಲು ಒಂದಿಲ್ಲೊಂದು ವೃತ್ತಿಯಲ್ಲಿ ತೊಡಗಬೇಕು. ಆ ಮೂಲಕ ಮನುಷ್ಯನ ಹುಟ್ಟಿಗೊಂದು ಸಾರ್ಥಕತೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ಶ್ರೀ ಮಠದಲ್ಲಿ ಹಮ್ಮಿಕೊಂಡಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಶಿಬಿರದ ಸಾರ್ಥಕತೆ ಉಂಟಾಗಬೇಕಾದರೆ ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ವೃತ್ತಿ ಕೌಶಲ್ಯ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕೌಶಲ್ಯ ಅಧಿಕಾರಿ ಸಂಜಯ ಕೋರೆ, ಎಸ್.ಪಿ. ಗೌಡರ, ಜಿಪಂ ಮಾಜಿ ಸದಸ್ಯ ಮಹಾಂತೇಶ ಸೊಪ್ಪಿನ, ಮುಖ್ಯ ತರಬೇತುದಾರರಾದ ಗೀತಾ ಕರಿಗಾರ, ಸುಜಾತಾ ಬಳೂಲ ಮುಂತಾದವರು ಇದ್ದರು.