ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯ

| Published : Dec 07 2024, 12:32 AM IST

ಸಾರಾಂಶ

ಸಾಧಿಸಬೇಕೆಂಬ ಛಲ, ಆ ಸಾಧನೆಗೆ ಬೇಕಾದ ಪರಿಶ್ರಮ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದು ಸಾಹೇ ವಿವಿ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಾಧಿಸಬೇಕೆಂಬ ಛಲ, ಆ ಸಾಧನೆಗೆ ಬೇಕಾದ ಪರಿಶ್ರಮ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದು ಸಾಹೇ ವಿವಿ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಆ್ಯಂಡ್ ಟೆಲಿಕಮ್ಯುನಿಕೇಷನ್ ವಿಭಾಗದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ 4ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ‘ಮೊಬೈಲ್ ನೆಟ್‌ವರ್ಕ್ ಆ್ಯಂಡ್ ವೈರ್‌ಲೆಸ್ ಕಮ್ಯುನಿಕೇಶನ್ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಶೈಕ್ಷಣಿಕ ಸಂಸ್ಥೆಗಳು ನೀಡುತ್ತಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕೋರಿಯಾದ ಡಾಂಗ್‌ಝಿಯೋ ಯೂನಿವರ್ಸಿಟಿಯ ಡಾ. ಡೇ-ಕಿಕಾಂಗ್ ಮಾತನಾಡಿ, ನಾವು ತಂತ್ರಜ್ಞಾನದ ಸುತ್ತುವರಿದ ಪ್ರಪಂಚದಲ್ಲಿ ಬದುಕುತ್ತಿರುವುದರಿಂದ, ಹೊಸ ಅವಕಾಶಗಳು ದೊರೆಯುತ್ತಿವೆ. ಇದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. 5ಜಿ ಯುಗದಲ್ಲಿ ಇರುವುದರಿಂದ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ಳಬೇಕು ಎಂದರು.

ಸಾಹೇ ವಿವಿ ಕುಲಸಚಿವ ಡಾ. ಎಂಝಡ್ ಕುರಿಯನ್ ಮಾತನಾಡಿ, ನಿಮ್ಮಲ್ಲಿ ಉತ್ತಮವಾದ ಶಿಸ್ತು ಇದ್ದಾಗ ಮಾತ್ರ ವರ್ತನೆ ಸರಿಯಿರುತ್ತದೆ. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ. ಕೌಶಲಗಳನ್ನು ಬಳಸುವ ಜ್ಞಾನ ಇಲ್ಲದಿದ್ದರೆ ಆ ಕೌಶಲ್ಯಗಳು ವ್ಯರ್ಥವಾಗುತ್ತವೆ ಎಂದು ಹೇಳಿದರು.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ ಮಾತನಾಡಿ, ವಿಚಾರ ಸಂಕೀರಣಗಳಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತವೆ. ಪ್ರಸ್ತುತ ದಿನದಲ್ಲಿ ತಂತ್ರಜ್ಞಾನದಿಂದ ಆಗುತ್ತಿರುವ ಬದಲಾವಣೆಯ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡು ಅದನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಡಾ. ಶೋಬನ್ ಬಾಬು, ಬೆಂಗಳೂರಿನ ಎನ್‌ಎಎಲ್ ಹಿರಿಯ ಮುಖ್ಯ ವಿಜ್ಞಾನಿ ಡಾ.ಜಿ.ಶಿವಕುಮಾರ್, ಬೆಂಗಳೂರಿನ ಎನ್‌ಎಂಐಟಿಯ ಐಇಇಇ ವಿಭಾಗದ ಮುಖ್ಯಸ್ಥರಾದ ಡಾ. ಪರಮೇಶ್ವರಾಚಾರಿ ಬಿ.ಡಿ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಟೆಲಿಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ ಸವಿತಾ ಡಿ ತೊರವಿ ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.