ಸಾರಾಂಶ
ಆತ್ಮಬಲ ಮತ್ತು ಉತ್ತಮ ಕನಸುಗಳಿಂದ ಮಾತ್ರ ಯಶಸ್ಸು ಗಳಿಸಬಹುದು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಆತ್ಮಬಲ ಮತ್ತು ಉತ್ತಮ ಕನಸುಗಳಿಂದ ಮಾತ್ರ ಯಶಸ್ಸು ಗಳಿಸಬಹುದು. ತನ್ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುವಂತಾಗಬೇಕು ಎಂದು ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ ಹೇಳಿದರು.ಪಟ್ಟಣದ ವಿಶ್ವದರ್ಶನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ) ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಯಲ್ಲಾಪುರ ಬಹು ಸಂಸ್ಕೃತಿ ಹೊಂದಿರುವ ಪ್ರದೇಶ. ಇಂದಿನ ದಿನದಲ್ಲಿ ಬಿಇಡಿ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಾದ ಪಾಠಪ್ರವಚನ, ತಯಾರು ಮಾಡಲು ಬೇಕಾದ ಸೌಲಭ್ಯ ಕಲ್ಪಿಸಬೇಕಾಗಿದೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ. ಶಿಕ್ಷಣ ನೀಡುವುದು ನೆಪಮಾತ್ರಕ್ಕೆ ಆಗದೆ ವಿದ್ಯಾರ್ಥಿಗಳ ಜೀವನ ರೂಪಿಸುವಂತೆ ತರಬೇತಿ ನೀಡಲಾಗುತ್ತಿದೆ. ಕನಸು ರಾತ್ರಿ ನಿದ್ದೆಯಲ್ಲಿ ಕಾಣುವುದಲ್ಲ. ನಮಗೆಲ್ಲ ಜೀವನದ ಉದ್ದೇಶಗಳ ಸಫಲಗೊಳಿಸಿಕೊಳ್ಳುವ ಕನಸುಗಳು ಬೇಕು.ಜೀವನದಲ್ಲಿ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸುಕೊಳ್ಳುವುದಕ್ಕಿಂತ ಬಹುಮುಖ ವ್ಯಕ್ತಿತ್ವದಿಂದ ಗುರುತಿಸಲ್ಪಡ ಬೇಕು. ಜೀವನದಲ್ಲಿ ಶ್ರೇಷ್ಠತೆ ಬೆಳೆಸಿಕೊಂಡು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಪ್ರಶಿಕ್ಷಣಾರ್ಥಿಗಳ ಮೇಲಿದೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ಬಾಂಧವ್ಯ ದೀರ್ಘಕಾಲ ನೆನಪಿರುತ್ತದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರಿ ಶಿಕ್ಷಕ ವೃತ್ತಿ ನಿಭಾಯಿಸುವುದು ಅತ್ಯಂತ ಕಠಿಣ ಸವಾಲಾಗಿದೆ. ಇಂದಿನ ಶಿಕ್ಷಣದ ವ್ಯವಸ್ಥೆ ಬದಲಾಗಬೇಕಾಗಿದೆ. ಸರಿಯಾದ ಶಿಕ್ಷಣ ನೀಡುವ ಶಿಕ್ಷಕನಿಗೆ ಎಲ್ಲೆಡೆ ಅವಕಾಶವಿದೆ. ಶಿಕ್ಷಕರು ಅಧ್ಯಯನಶೀಲರಾಗಬೇಕು. ಆಗ ಭಾಷೆಯ ಮೇಲೆ ಹಿಡಿತ ದೊರೆಯುತ್ತದೆ ಎಂದರು.ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೌಜನ್ಯ ಸಂಗಡಿಗರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ. ಎಸ್.ಎಲ್. ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ಬಿ.ಎನ್. ಭಟ್ಟ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ವೀಣಾ ಭಟ್ಟ ನಿರ್ವಹಿಸಿದರು.