ಕನ್ನಡಪ್ರಭ ವಾರ್ತೆ ರಾಯಚೂರು
ಕೇವಲ ಸಂಕಲ್ಪದಿಂದ ಮಾತ್ರ ಯಾವುದೇ ಯೋಜನೆ,ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಆಗುವುದಿಲ್ಲ. ಅದರೊಂದಿಗೆ ಸಂಬಂಧಿತ ವಿಭಾಗದ ತಜ್ಞರು, ಸಲಹೆಗಾರರು, ತಾಂತ್ರಿಕತೆ ಅನುಭವ ಹೊಂದಿದವರ ಸಂಪೂರ್ಣ ಸಹಕಾರ ಹಾಗೂ ಭಗವಂತನ ಸಂಪೂರ್ಣ ಅನುಗ್ರಹವೂ ಇರಬೇಕಾಗುತ್ತದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.ಸುಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸುಮಾರು 50 ಕೋಟಿ ರು. ವೆಚ್ಚದ ನೀರು ಸಂಗ್ರಹಣಾ ಜಲಾಶಯ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಗುರುವಾರ ಆಶೀರ್ವಚನ ನೀಡಿದ ಶ್ರೀಗಳು. ರಾಯರ ದರ್ಶನ ಪಡೆಯುವುದಕ್ಕಾಗಿ ದೇಶ-ವಿದೇಶಗಳಿಂದ ಅಸಂಖ್ಯಾತ ಭಕ್ತರು ಮಂತ್ರಾಲಯಕ್ಕೆ ಬರುತ್ತಿದ್ದು, ಅವರುಗಳಿಗೆ ನೀರಿನ ತೊಂದರೆ ಉಂಟಾಗುತ್ತಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಎದುರಾಗದಂತೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ನೀರು ಸಂಗ್ರಹಣಾ ಜಲಾಶಯ ನಿರ್ಮಾಣದ ಸಂಕಲ್ಪ ಮಾಡಿ, ಸುಮಾರು 30 ವರ್ಷದಗಳ ದೂರದೃಷ್ಠಿಯನ್ನಿಟ್ಟುಕೊಂಡು ಶ್ರೀಮಠಕ್ಕೆ ಸೇರಿದ 40 ಎಕರೆ ಪ್ರದೇಶದಲ್ಲಿ ಬೆಂಗಳೂರಿನ ಹಿಂದುಸ್ತಾನ್ ಏರೋನೆಟಿಕ್ಸ್ ಲಿಮಿಟೆಡ್ ಸಂಸ್ಥೆ(ಎಚ್‌ಎಎಲ್)ನ ಸಾಮಾಜಿಕ ಹೊಣೆಗಾರರಿಕೆ ಚಟುವಟಿಕೆಯ ಅನುದಾನದಡಿ (ಸಿಎಸ್‌ಆರ್) 50 ಕೋಟಿ ವೆಚ್ಚದಲ್ಲಿ ಈ ಜಲಾಶಯವನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದ್ದು, ಯೋಜನೆಯ ವೆಚ್ಚ ಹಾಗೂ ತಾಂತ್ರಿಕ ಸಲಹೆ, ವಿನ್ಯಾಸದ ಜವಾಬ್ದಾರಿಯನ್ನು ಬೆಂಗಳೂರಿನ ಇಐ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್ (ಇಐಟಿ) ಸಂಸ್ಥೆಗೆ ವಹಿಸಿಕೊಂಡಿದೆ. ಈ ಯೋಜನೆ ಅನುಷ್ಠಾನಗೊಳಿಸಲು 18 ತಿಂಗಳು ಕಾಲಾವಕಾಶ ಪಡೆಯಲಾಗಿದೆ. ಈ ಜಲಾಶಯನದಿಂದ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಪರಿಹಾರವಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೂ ಅನುಕೂಲವಾಗಲಿದೆ ಎಂದರು.
ಬೆಂಗಳೂರಿನ ಇಐ ಟೆಕ್ನಾಲಜಿಸ್ನ ಮುಖ್ಯಸ್ಥ ರಂಗನಾಥ ಮಾತನಾಡಿ, ಮಂತ್ರಾಲಯದಲ್ಲಿ ನೀರಿನ ಸಂಗ್ರಹಣಾ ಜಲಾಶಯದ ನಿರ್ಮಾಣದ ಯೋಜನೆಯು ಅತ್ಯಂತ ಮಹತ್ವದ್ದಾಗಿದ್ದು, ಯಾರೊಬ್ಬರ ಶ್ರಮದಿಂದ ಇದು ಸಾಧ್ಯವಾಗುವುದಿಲ್ಲ, ಇದಕ್ಕೆ ಶ್ರೀಗುರುರಾಯರ ಆರ್ಶೀವಾದ, ಪೀಠಾಧಿಪತಿಗಳ ಸಂಕಲ್ಪದಿಂದ ಇಂಥಹ ಯೋಜನೆಗಳು ಕಾರ್ಯಗತಗೊಳ್ಳಲಿದ್ದು, ಈ ಯೋಜನೆಗೆ ಎಚ್‌ಎಎಲ್ ಸಂಸ್ಥೆಯು ಮುಂದೆ ಬಂದಿರುವುದು ಮತ್ತೊಂದು ಸೌಭಾಗ್ಯವೇ ಸರಿ ಎಂದರು.ಇದಕ್ಕು ಮುನ್ನ ಎಚ್‌ಎಎಲ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ ಅವರು ನೀರು ಸಂಗ್ರಹಣಾ ಜಲಾಶಯ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಎಚ್‌ಎಎಲ್‌ನ ನಿರ್ದೇಶಕ ಎಂ.ಜಿ.ಬಾಲಸುಬ್ರಮಣ್ಯಂ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್‌ಎಎಲ್ನ ಅಧಿಕಾರಿಗಳಾದ ಮಂಜುನಾಥ, ರಮೇಶ, ರಂಗನಾಥ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀನಿವಾಸ ರಾವ್, ವೆಂಕಟೇಶ ಜೋಶಿ, ಪ್ರಾಚಾರ್ಯ ಎನ್.ವಾದಿರಾಜಾಚಾರ್, ಶ್ರೀಮಠದ ಪಂಡಿತರು, ಶ್ರೀಮಠದ ಅಧಿಕಾರಿ, ಸಿಬ್ಬಂದಿ, ಹಾಗೂ ಗ್ರಾಮಸ್ಥರು ಇದ್ದರು. ರಾಘವೇಂದ್ರ ಪ್ರಾರ್ಥಿಸಿದರು. ಶ್ರೀಮಠದ ಗುರು ಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು ವೇದ ಘೋಷ ಹಾಗೂ ಮಂತ್ರಗಳನ್ನು ಪಠಿಸಿದರು.
ವ್ಯಾಸ ತೀರ್ಥ ಜಲಾಶಯವೆಂದು ನಾಮಕರಣ:
ಶ್ರೀಗುರುರಾಯರು ನೆಲೆಸಿರುವ ಸುಕ್ಷೇತ್ರ ಮಂತ್ರಾಲಯದಲ್ಲಿ ನೀರು ಸಂಗ್ರಹಣಾ ಜಲಾಶಯದ ಯೋಜನೆಗೆ ಸುಮಾರು 40 ಎಕರೆ ಪ್ರದೇಶವಿವನ್ನು ಮೀಸಲಿಟ್ಟಿ ದ್ದು, ಅದರಲ್ಲಿ 25 ಎಕರೆ ಪ್ರದೇಶವನ್ನು ಜಲಾಶಯ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 32 ಅಡಿಗಳಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತವೆ. ಜಲಾಶಯದ ಸುತ್ತ ಬಂಡು (ಒಡ್ಡು) ನಿರ್ಮಾಣ ಮಾಡಲು ನೀಲನಕ್ಷೆ ರೂಪಿಸಿದ್ದು, ಸುಮಾರು ಅಂದಾಜು ವೆಚ್ಚ ₹50 ಕೋಟಿ ಆಗಲಿರುವ ಈ ನೀರು ಸಂಗ್ರಹಣಾ ಜಲಾಶಯಕ್ಕೆ ವ್ಯಾಸ ತೀರ್ಥ ಜಲಾಶಯವೆಂದು ನಾಮಕರಣ ಮಾಡಲಾಗಿದೆ.