ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಆತ್ಮವಿಶ್ವಾಸ, ಸತತ ಪರಿಶ್ರಮವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸುಲಭ ಸಾಧ್ಯವಾಗುತ್ತದೆ. ಒಳ್ಳೆಯ ಪರಿಸರದಲ್ಲಿ ಕೌಶಲ್ಯದೊಂದಿಗೆ ಬೆಳೆದು ಬದುಕು ಬೆಳೆಗಿಸಿಕೊಳ್ಳಲು ಸಿದ್ಧರಾಗಿ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.ಹಾನಗಲ್ಲಿನಲ್ಲಿ ಹ್ಯೂಮಾನಿಟಿ ಫೌಂಡೇಶನ್‌ನ ಪರಿವರ್ತನಾ ಕೇಂದ್ರ ಆಯೋಜಿಸಿದ್ದ ವಿವಿಧ ಸ್ಪರ್ಧಾತ್ಮಕ ತರಬೇತಿಯ 2ನೇ ತಂಡದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ ₹೪ ಸಾವಿರ ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಉದ್ಯೋಗಾಕಾಂಕ್ಷಿಗಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಯಶಸ್ಸು ಕಾಣಬೇಕು. ಅದು ನಮ್ಮ ತಾಲೂಕಿನ ಹೆಮ್ಮೆಯಾಗಲಿ ಎಂದರು.
ತಹಸೀಲ್ದಾರ್ ರೇಣುಕಮ್ಮ ಮಾತನಾಡಿ, ಭವಿಷ್ಯದ ಕನಸು ಕಂಡರೆ ಮಾತ್ರ ದಾರಿ ಸಿಗುತ್ತದೆ. ಗ್ರಾಮೀಣ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಉಚಿತವಾಗಿ ತಾಲೂಕು ಕೇಂದ್ರದಲ್ಲೇ ನೀಡುತ್ತಿರುವುದು ಅಪರೂಪದ ಸಂಗತಿಯ ಜತೆಗೆ ಅಭಿಮಾನದ ವಿಷಯವೂ ಹೌದು. ದೈನಂದಿನ ವಿದ್ಯಮಾನಗಳು ತೀರ ಸ್ಪರ್ಧಾತ್ಮಕವಾಗಿವೆ. ತರಬೇತಿ ಪಡೆದರೆ ಸಾಲದು. ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವಂತೆ ಅಧ್ಯಯನ ಮಾಡಬೇಕು. ತರಬೇತಿಗೆ ಅವಕಾಶ ನೀಡಿದವರನ್ನು ಸ್ಮರಿಸಿ, ನೆನಪಿನಲ್ಲಿಟ್ಟುಕೊಳ್ಳಬೇಕು. ಉಪಕಾರಕ್ಕೆ ಪ್ರತಿ ಉಪಕಾರ ಸಲ್ಲಿಸಿ ಋಣಮುಕ್ತರಾಗಿರಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ, ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪುರ, ಹಾವೇರಿಯ ಆರೋಗ್ಯ ಇಲಾಖೆ ಅಧಿಕಾರಿ ಮೆಹಬೂಬ ನಾಯಕ, ಸಂಪನ್ಮೂಲ ವ್ಯಕ್ತಿಗಳಾದ ಅನಂತ ಸಿಡೇನೂರ, ಮುಸ್ತಾಕ ಹಾದಿಮನಿ ಮಾತನಾಡಿದರು. ತಾಪಂ ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಪರಿವರ್ತನ ಕಲಿಕಾ ಕೇಂದ್ರದ ನಿರ್ದೇಶಕ ಸಂತೋಷ ಅಪ್ಪಾಜಿ ಉಪಸ್ಥಿತರಿದ್ದರು. ಕಲಿಕಾರ್ಥಿಗಳಾದ ಎಚ್. ಮಂಜುನಾಥ, ಯೋಗಿನಿ, ವಿನೋದ, ಮಲ್ಲಿಕ್‌ರೆಹಾನ, ಮಧು ಸವಣೂರ ತರಬೇತಿ ಶಿಬಿರದ ಅನುಭವ ಹಂಚಿಕೊಂಡರು.
ನಿವೇದಿತಾ ಭಾವಿಮನಿ, ಸಿರಿನಬಾನು ಪ್ರಾರ್ಥನೆ ಭಾವಗೀತೆ ಹಾಡಿದರು. ಮುಕ್ತಾ ದಾನಣ್ಣನವರ ಸ್ವಾಗತಿಸಿದರು. ಸುಮಂಗಲಾ ಬಡಿಗೇರ, ಯಶೋದಾ ಕಾರ್ಯಕ್ರಮ ನಿರೂಪಿಸಿದರು. ಬಿ.ವಿ. ರಮ್ಯಾ ವಂದಿಸಿದರು.