ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೇ ಮೊದಲ ಗುರು. ತಾಯಿ ಸಂಸ್ಕಾರ ಕೊಟ್ಟರೆ, ಗುರುಗಳು ಶಿಕ್ಷಣ ಕೊಡುತ್ತಾರೆ. ಸಮಾಜ ಸಂಸ್ಕೃತಿ ಕೊಟ್ಟರೆ, ನಂಬಿಕೆಯ ಪ್ರಪಂಚದಲ್ಲಿ ದೇವರು ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡುತ್ತಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೇ ಮೊದಲ ಗುರು. ತಾಯಿ ಸಂಸ್ಕಾರ ಕೊಟ್ಟರೆ, ಗುರುಗಳು ಶಿಕ್ಷಣ ಕೊಡುತ್ತಾರೆ. ಸಮಾಜ ಸಂಸ್ಕೃತಿ ಕೊಟ್ಟರೆ, ನಂಬಿಕೆಯ ಪ್ರಪಂಚದಲ್ಲಿ ದೇವರು ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡುತ್ತಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 21ನೇ ವಾರ್ಷಿಕ ಸ್ನೇಹ ಸಮ್ಮೇಳನ, ಸರಸ್ವತಿ ಪೂಜೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ವರ್ಷವಿಡೀ ವಿದ್ಯಾರ್ಜನೆ ಮಾಡಿ, ಪಾಠ ಕಲಿತು, ಆಟವಾಡಿ, ಸ್ನೇಹಿತರಾಗಿ ಒಬ್ಬರಿಗೊಬ್ಬರು ಬೆರೆತು ಕಲೆ, ಸಂಸ್ಕೃತಿ ಹಾಗೂ ವಿದ್ಯೆಯ ಪ್ರತಿಭೆ ತೋರಿಸುವ ಹಂತಕ್ಕೆ ಬಂದಿವೆ. ಎಲ್ಲಿ ಮಕ್ಕಳು ಇದ್ದಾರೆ ಅಲ್ಲಿ ದೇವರು ಇರುತ್ತಾರೆ. ಮಕ್ಕಳ ಶ್ರೇಯೋಭಿವೃದ್ಧಿಗೆ ನಿರಂತರ ಪ್ರಯತ್ನವನ್ನು ಪಾಲಕರು, ಶಿಕ್ಷಕರು ಮಾಡಬೇಕು. ಸಂಸ್ಕಾರ, ಶಿಕ್ಷಣ, ಬದುಕು ಪ್ರತಿಯೊಂದನ್ನೂ ಕಲಿಯಬೇಕು. ಜೀವನದುದ್ದಕ್ಕೂ ಕೊನೆಯು ಉಸಿರು ಇರುವತನಕ ನೀವು ವಿದ್ಯಾರ್ಥಿಗಳೇ ಆಗಿರುತ್ತೀರಿ. ಜೀವನದಲ್ಲಿ ಮೊದಲು ಪರೀಕ್ಷೆ, ಆಮೇಲೆ ಪಾಠ ಎದುರಾಗುತ್ತದೆ. ಪಾಠ ಪರೀಕ್ಷೆ, ಪರೀಕ್ಷೆ ಪಾಠ ಇದು ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ ಎಂದರು.ಶಿಕ್ಷಕರು ಪ್ರಾಮಾಣಿಕವಾಗಿ ಮಕ್ಕಳ ಹೃದಯ ಮುಟ್ಟುವ ನಿಟ್ಟಿನಲ್ಲಿ ಶಿಕ್ಷಣ ಕೊಡಿಸಬೇಕು. ಮಕ್ಕಳ ಪ್ರಶ್ನೆಗೆ ಶಾಂತವಾಗಿ ಉತ್ತರ ಕೊಡಬೇಕು. ಮಕ್ಕಳನ್ನು ಬೆಳೆಸುವ ಮೂಲಕ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಕೊಡಬೇಕು. ಮಠ ಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಕೊರತೆಯನ್ನು ನೀಗಿಸಲು ಬಹಳ ದೊಡ್ಡ ಪ್ರಯತ್ನ ಮಾಡುತ್ತವೆ ಎಂದರು.ಸಂಸ್ಥೆಯ ಅಧ್ಯಕ್ಷ ಬಸವರಾಜ ಅರಬಗೊಂಡ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ಎಂ. ಸಂಸ್ಥೆಯ ಅಧ್ಯಕ್ಷ ರಾಮ್ ಮೋಹನ್ ರಾವ್ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾದಾಯಿನಿ ಪಬ್ಲಿಕ್ ಶಾಲೆಯ ಅಧ್ಯಕ್ಷ ನಾಗೇಂದ್ರ ಕಟಕೊಳ, ಎಂ.ಎಸ್. ಪಾಟೀಲ, ದರ್ಶನ ಲಮಾಣಿ, ಅಶೋಕ ಹರನಗಿರಿ, ವೆಂಕಟೇಶ ನಾರಾಯಣಿ, ಡಾ. ಎಸ್. ಎಚ್. ತುಕ್ಕಣ್ಣವರ, ಗಡ್ಡೆಪ್ಪ ಹಂಚಟಗಿ, ಶಿವಾನಂದ ಮ್ಯಾಗೇರಿ, ಬಸವರಾಜ ಬಾಲಕ್ಕನವರ, ಜಯಪ್ಪ ಪೂಜಾರ, ವೀರಭದ್ರಪ್ಪ ಗೋಣೆಮ್ಮನವರ, ಚನ್ನವೀರಪ್ಪ ಅಕ್ಕಿ, ಹನುಮಂತಪ್ಪ ಅಂಗರಗಟ್ಟಿ, ಹುಲಗಪ್ಪ ನಾಗಮ್ಮನವರ, ಮಾಲತೇಶ ಕುರುಬರ, ಡಾ. ನಿಂಗಪ್ಪ ಅರಬಗೊಂಡ, ಬಸವರಾಜ ಕಳಸೂರ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಇದ್ದರು. ಪ್ರಾಥಮಿಕ ಶಿಕ್ಷಣ ಜೀವನದ ಅಮೂಲ್ಯವಾದ ಹಂತವಾಗಿದೆ. ವಿದ್ಯಾರ್ಥಿ ದೇವೋಭವ ಎಂಬ ಮಾತನ್ನು ಶಿಕ್ಷಕರು ಅನುಸರಿಸಿ ಮಕ್ಕಳಿಗೆ ಪ್ರಾಮಾಣಿಕ ಶಿಕ್ಷಣ ಕೊಡಬೇಕು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಯಾವ ಶಿಕ್ಷಕರು ನಮ್ಮ ಮಕ್ಕಳು ಎಂದು ಭಾವಿಸಿ ಪಾಠ ಮಾಡುತ್ತಾರೋ ಅಂತ ಶಿಕ್ಷಕರನ್ನು ದೇವರ ರೂಪದಲ್ಲಿ ಕಾಣುತ್ತಾರೆ. ಮಕ್ಕಳಿಗೆ ಸಂಸ್ಕಾರ ನೀಡುವ ಶಕ್ತಿ ಇಂದಿನ ಮಠ ಮಾನ್ಯಗಳಿಗೆ ಇದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯ. ಟೆಕ್ನಾಲಜಿ ಹಿಂದೆ ನಾವು ಓಡುತ್ತಿದ್ದು, ಕೊಂಚ ಕಡಿವಾಣ ಹಾಕಬೇಕಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಮನ ಮುಟ್ಟುವ ಪಾಠ ಮಾಡಲು ಆಕರ್ಷಿಸುವ ಶಿಕ್ಷಣ ಕೊಡಬೇಕು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು.