ಕೊಪ್ಪಳ: ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೂ ಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದಿಂದ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಸ್.ವಿ. ಡಾಣಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತು, ಬದ್ಧತೆ ಹಾಗೂ ಧ್ಯಾನ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನಿರಂತರ ಅಭ್ಯಾಸ ಮಾಡಿದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು ಎಂದರು.ನಾನೂ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದು ಇಂದು ಈ ಹಂತ ತಲುಪಿದ್ದೇನೆ.ಇದರ ಹಿಂದೆ ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನ ಮತ್ತು ಶ್ರಮವಿದೆ. ಪಿಯುಸಿ ಶಿಕ್ಷಣ ಉತ್ತಮವಾಗಿ ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕಾಗಿ ಪದವಿ ಕಾಲೇಜು ಹಾಗೂ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಬನ್ನಿ ಉನ್ನತ ಶಿಕ್ಷಣ ಪಡೆಯುವವರೆಗೆ ನಿಮ್ಮ ಕಲಿಕೆಯ ಪಯಣ ನಿಲ್ಲಿಸಬೇಡಿ ಎಂದು ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಮನೂರಪ್ಪ ನಾಯಕ್ ಮಾತನಾಡಿ, ತಂದೆ-ತಾಯಿ ನಿಮ್ಮ ಮೇಲೆ ಇಟ್ಟಿರುವ ಭರವಸೆ ಈಡೇರಿಸುವ ಆದರ್ಶ ವಿದ್ಯಾರ್ಥಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.ಸಿಡಿಸಿ ಸದಸ್ಯ ಮಲ್ಲಿಕಾರ್ಜುನ ಪೂಜಾರ ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಶಾಸಕರ ಹಾಗೂ ಸಂಸದರ ನಿಧಿಯಿಂದ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ 2025–26ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 70ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವಿವಿಧ ವಿಷಯಗಳಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಆಯಾ ಉಪನ್ಯಾಸಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೀರನಗೌಡ ಬಿ.ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯ ಶಿವಾನಂದ ಎ.ಆರ್.ವಹಿಸಿದ್ದರು. ಸಿಡಿಸಿ ಸದಸ್ಯ ಮಂಜುಳಾ ಉಂಡಿ, ಗಂಗಮ್ಮ ಚಿಕ್ಕೇನಕೊಪ್ಪ, ವಿನುತಾ ಬಾನು, ಎಂ. ಅನ್ವರ್ ಹುಸೇನ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.ಉಪನ್ಯಾಸಕ ಪತ್ರೆಪ್ಪ ಸಿ.ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಮಲ್ಲಿಕಾರ್ಜುನ ಸ್ವಾಗತಿಸಿದರು. ಸಿದ್ದಣ್ಣ ಮರಿಬಸಪ್ಪನವರ ವಂದಿಸಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪರಶುರಾಮ, ಇಎಲ್‌ಸಿ ಸಂಯೋಜಕ ಎಸ್.ವಿ.ಮೇಲಿ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಳೆಯ ವಿದ್ಯಾರ್ಥಿನಿಯರು, ಪಾಲಕರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.