ಸಾಧಿಸಲೇ ಬೇಕೆಂಬ ಛಲ, ಸರಿಯಾದ ಯೋಚನೆ, ಆ ಯೋಚನೆಗೆ ತಕ್ಕಂತೆ ಯೋಜನೆ ಜೊತೆಗೆ ಸರಿಯಾದ ಸಮಯಪ್ರಜ್ಞೆ ಇರಬೇಕಾಗುತ್ತದೆ ಎಂದು ಬಸವನಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಬೆಳಗಾವಿ ವಲಯದ ಅಧ್ಯಕ್ಷ ಡಾ.ಎನ್.ಬಿ.ಹೊಸಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಧಿಸಲೇ ಬೇಕೆಂಬ ಛಲ, ಸರಿಯಾದ ಯೋಚನೆ, ಆ ಯೋಚನೆಗೆ ತಕ್ಕಂತೆ ಯೋಜನೆ ಜೊತೆಗೆ ಸರಿಯಾದ ಸಮಯಪ್ರಜ್ಞೆ ಇರಬೇಕಾಗುತ್ತದೆ ಎಂದು ಬಸವನಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಬೆಳಗಾವಿ ವಲಯದ ಅಧ್ಯಕ್ಷ ಡಾ.ಎನ್.ಬಿ.ಹೊಸಮನಿ ಹೇಳಿದರು.ನಗರದ ಸರ್ಕಾರಿ ಪಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಅಧ್ಯಾಪಕರು ಪಿಎಚ್‌ಡಿ ಪದವಿ ಪಡೆದ ಮಹಿಳಾ ಕಾಲೇಜಿನ ಹಿರಿಯ ಶ್ರೇಣಿಯ ಪ್ರಾಧ್ಯಾಪಕ ಡಾ.ಎಸ್.ಎಸ್.ರಾಜಮಾನ್ಯ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡೋದು ಅಷ್ಟೊಂದು ಸರಳ ಇರೋದಿಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ ಎಂದು ತಿಳಿಸಿದರು.ಲಯನ್ಸ್ ಪರಿವಾರದ ಸಂಸ್ಥಾಪಕ ಡಾ.ಅಶೋಕಕುಮಾರ ರಾ.ಜಾಧವ ಮಾತನಾಡಿ, ಡಾ.ರಾಜಮಾನ್ಯ ಅವರು ಬಹಳ ಚಾಣಾಕ್ಷತನದ ಸಂಘಟನಾ ಚತುರರು. ಅವರು ಪ್ರಾಚಾರ್ಯರಿದ್ದ ಸಮಯದಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೆಮಿನಾರ್ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಕಾರ್ಯಾಗಾರಗಳನ್ನು, ವಿಶ್ವವಿದ್ಯಾಲಯದ ಮಟ್ಟದ ಹಲವಾರು ಕ್ರೀಡೆಗಳನ್ನು, ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಂಘಟಿಸಿದ್ದರು ಎಂದು ಸ್ಮರಿಸಿದರು.
ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಚಾರ್ಯ ಡಾ.ಎಲ್.ಬಿ.ಪಾಟೀಲ ಮಾತನಾಡಿ, ಯಾವತ್ತೂ ಕ್ರಿಯಾತ್ಮಕರಾಗಿ ಹಲವಾರು ಸಮಾಜಮುಖಿ ಚಟುವಟಿಗಳಿಂದ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಉಪಯುಕ್ತ ಕೊಡುಗೆಗಳನ್ನು ನೀಡುತ್ತ ಬಂದಿರುವ ರಾಜಮಾನ್ಯಯವರು ಪಿ.ಎಚ್.ಡಿ ಪದವಿಗೂ ಮೀರಿದ ಸಾಧನೆಗಳನ್ನು ಮಾಡಿದ್ದಾರೆ ಎಂದರು.ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಎಸ್.ಕಲ್ಲೂರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ರಾಜಮಾನ್ಯ ಇವರದ್ದು ಅಪ್ರತಿಮ ಸಾಧನೆ. ತಾವು ನ್ಯಾಕ್ ಸಂಯೋಜಕರಾಗಿದ್ದ ಸಂದರ್ಭದಲ್ಲಿ ಅವರು ನೀಡಿದ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದ ಫಲವೇ ಕಾಲೇಜಿಗೆ ನ್ಯಾಕ್ ಬಿ ಮಾನ್ಯತೆ ದೊರಕಿದೆ. ವಿವಿಧ ಕಾಲೇಜಿನ ಉಪನ್ಯಾಸಕರು ಕೂಡಿಕೊಂಡು ಹೀಗೆ ಸಾಧನೆಗೈದ ಉಪನ್ಯಾಸಕ ಮಿತ್ರರಿಗೆ ಗೌರವ ಸನ್ಮಾನ ಮಾಡುವುದರಿಂದ ಮತ್ತಷ್ಟು ಉತ್ಸಾಹದಿಂದ ಸೇವೆ ಮಾಡುವುದಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಮತ್ತು ಯಾವತ್ತೂ ಲವಲವಿಕೆಯಿಂದ ಇರುತ್ತಾರೆ ಎಂದರು.ಡಾ.ರಾಜಶೇಖರ ಬೆನಕನಳ್ಳಿ ಸ್ವಾಗತಿಸಿದರು. ಡಾ.ಅಮೀತ ಮಿರ್ಜಿ ವಂದನಾರ್ಪಣೆ ಮಾಡಿದರು. ಡಾ.ಎ.ಜೆ.ಕುಲಕರ್ಣಿ ನಿರೂಪಿಸಿದರು. ಡಾ.ಎ.ಬಿ.ಹೊಸಮನಿ, ಡಾ.ಅನಂತ, ಡಾ.ಸತೀಶ ಪಾಟೀಲ, ಡಾ.ಲಕ್ಷ್ಮೀ ಮೊರೆ, ಪ್ರೊ.ಮಹಾಂತೇಶ ಪಾಟೀಲ ಸೇರಿದಂತೆ ಕಾಲೇಜಿನ ಸಿಬ್ಬಂದಿಯವರು ಉಪಸ್ಥಿತರಿದ್ದರು.ಎಲ್ಲರೂ ಆಸೆಗಳನ್ನು ಹೊತ್ತು ಕನಸುಗಳನ್ನು ಕಾಣುತ್ತಿದ್ದರೂ ಛಲದ, ಪ್ರಾಮಾಣಿಕ ಪ್ರಯತ್ನದ ಮತ್ತು ಸರಿಯಾದ ಯೋಜನೆ ಮತ್ತಿತರ ಕಾರಣಗಳಿಂದ ವಿಫಲಗೊಂಡ ಹಲವರನ್ನು ನಾವು ಕಾಣುತ್ತೇವೆ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಪ್ರತಿಯೊಬ್ಬ ಪ್ರಾಧ್ಯಾಪಕ ಕಾಣುವ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುನ್ನತ ಪದವಿಯಾದ ಪಿಎಚ್‌ಡಿ ಪದವಿಯನ್ನು ಪಡೆದ ಡಾ.ಎಸ್.ಎಸ್.ರಾಜಮಾನ್ಯ ಅವರ ಸಾಧನೆ ಎಲ್ಲರಿಗೂ ಮಾದರಿ.-ಡಾ.ಎನ್.ಬಿ.ಹೊಸಮನಿ,
ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಬೆಳಗಾವಿ ವಲಯದ ಅಧ್ಯಕ್ಷರು.ಡಾ.ರಾಜಮಾನ್ಯಯವರು ಮನಸ್ಸು ಮಾಡಿದ್ದರೇ ಯಾವಾಗಲೋ ಪಿಎಚ್‌ಡಿ ಪಡೆಯಬಹುದಾಗಿತ್ತು. ಆದರೆ, ಅವರೂ ತಮ್ಮ ವೈಯಕ್ತಿಕ ಲಾಭಕ್ಕಿಂತ ಕಾಲೇಜಿನ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿಯೇ ತಮ್ಮ ಸಂತೋಷ ಕಂಡಿದ್ದಾರೆ. ಅವರು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲ, ಸಾಮಾಜಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಚಟುವಟಿಕೆಗಳು ಯಾವತ್ತೂ ಹೀಗೆಯೇ ಮುಂದುವರೆಯಲಿ.-ಡಾ.ಅಶೋಕಕುಮಾರ ರಾ.ಜಾಧವ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು.