ಚಂದ್ರಯಾನದ ಯಶಸ್ಸು ಸಾಮಾನ್ಯವಲ್ಲ: ಚಂದ್ರಯಾನ-೩ ರೂವಾರಿ ಪಿ.ವೀರಮುತ್ತುವೇಲ್

| Published : Jan 28 2024, 01:19 AM IST

ಸಾರಾಂಶ

ರಷ್ಯಾ ೧೧ ಬಾರಿ ಪ್ರಯತ್ನ ಮಾಡಿದ್ದಾರೆ. ನಾವು ಎರಡನೇ ಬಾರಿ ಯಶಸ್ಸು ಆಗಿದ್ದೇವೆ. ೧೯ ನಿಮಿಷಗಳಲ್ಲಿ ಲ್ಯಾಂಡಿಂಗ್ ಆಗುವುದು ಅಷ್ಟು ಸುಲಭ ಆಗಿರಲಿಲ್ಲ. ಕೊನೆಯ ಸೆಕೆಂಡ್‌ವರೆಗೂ ನಾವು ಆತಂಕದಲ್ಲಿದ್ದೆವು.

ಕೊಪ್ಪಳ: ಚಂದ್ರಯಾನ ಯಶಸ್ಸು ಸಾಮಾನ್ಯವಲ್ಲ, ಅದು ತಂಡದ ಕಾರ್ಯಕ್ಕೆ ಸಿಕ್ಕ ಜಯ ಎಂದು ಖಗೋಳ ವಿಜ್ಞಾನಿ ವೀರ ಮುತ್ತುವೇಲ್ ಹೇಳಿದರು.ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕೈಲಾಸಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಷ್ಯಾ ೧೧ ಬಾರಿ ಪ್ರಯತ್ನ ಮಾಡಿದ್ದಾರೆ. ನಾವು ಎರಡನೇ ಬಾರಿ ಯಶಸ್ಸು ಆಗಿದ್ದೇವೆ. ೧೯ ನಿಮಿಷಗಳಲ್ಲಿ ಲ್ಯಾಂಡಿಂಗ್ ಆಗುವುದು ಅಷ್ಟು ಸುಲಭ ಆಗಿರಲಿಲ್ಲ. ಕೊನೆಯ ಸೆಕೆಂಡ್‌ವರೆಗೂ ನಾವು ಆತಂಕದಲ್ಲಿದ್ದೆವು. ಭೂಮಿ ಮತ್ತು ಚಂದ್ರನ ವಾತಾವರಣದ ನಡುವೆ ಅಘಾದ ವ್ಯತ್ಯಾಸ ಇದೆ. ಹೀಗಾಗಿ ನಾವು ಇಲ್ಲಿ ಸಿದ್ಧ ಮಾಡಿದ್ದನ್ನು ಅಲ್ಲಿ ಕೆಲಸ ಮಾಡುವುದು ಸವಾಲು ಆಗಿತ್ತು. ಇಲ್ಲಿರುವ ಗುರುತ್ವಾಕರ್ಷಣೆಗೂ ಅಲ್ಲಿಯ ಗುರುತ್ವಾಕರ್ಷಣೆಗೂ ಭಾರಿ ವ್ಯತ್ಯಾಸ ಇತ್ತು. ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದೆವು ಎಂದರು.ಲ್ಯಾಂಡ್ ಆದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ.‌ ಆಗ ಪ್ರಾರಂಭವಾಗುತ್ತದೆ. ಅದನ್ನು ನಿಯಂತ್ರಣ ಮಾಡುವುದು ಸೇರಿದಂತೆ ಯಂತ್ರದ ಮೇಲೆ ಸಂಪೂರ್ಣ ನಿಗಾ ಇಡುವುದು ಬಹಳ ಮುಖ್ಯವಾಗುತ್ತದೆ. ಚಂದ್ರಯಾನ-೩ ನಮಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ. ಸಾಕಷ್ಟು ಬಾರಿ ವಿಫಲವಾದಾಗಿನ ದುಃಖ ನಿವಾರಣೆ ಮಾಡಿತು. ಇದು ತಂತ್ರಜ್ಞಾನದ ಯಶಸ್ಸು ಆಗಿದೆ. ನಮ್ಮ ಸಂಶೋಧನೆ ಹಾಗೂ ಕಲಿಯುವಿಕೆಗೆ ಸಿಕ್ಕ ಜಯವಾಗಿದೆ ಎಂದರು.