ಸಮನ್ವಯತೆ ಸಹಭಾಗಿತ್ವದಿಂದ ಯಶಸ್ಸು

| Published : Mar 06 2025, 12:33 AM IST

ಸಾರಾಂಶ

ಡಯಟ್ ವತಿಯಿಂದ ನಡೆಸಿದ 2024-25 ನೇ ಶೈಕ್ಷಣಿಕ ವರ್ಷದ ರಾಜ್ಯಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಚಟುವಟಿಕೆಗಳ ಸಚಿತ್ರ ವರದಿಯನ್ನು ನೋಡಲ್ ಅಧಿಕಾರಿ ಎಸ್.ಬಸವರಾಜು ಸರ್ವಮಂಗಳರವರಿಗೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಮನ್ವಯತೆ ಸಹಭಾಗಿತ್ವದಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸರ್ವಮಂಗಳ ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯ ಶಾಲಾ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮ ಕುರಿತು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಡಯಟ್ ಪ್ರಾಂಶುಪಾಲರು ಎನ್ ಪಿಇಪಿ ನೋಡಲ್ ಅಧಿಕಾರಿಗಳಿಗೆ ಡಿಎಸ್ಇಆರ್ ಟಿ ಕಚೇರಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಡಯಟ್ ವತಿಯಿಂದ ಸಲ್ಲಿಸಿದ ರಾಜ್ಯಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಚಟುವಟಿಕೆಗಳ ಸಚಿತ್ರ ವರದಿ ಸ್ವೀಕರಿಸಿ ಮಾತನಾಡಿದರು.

ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ ಚಿತ್ರದುರ್ಗ ಡಯಟ್ ವತಿಯಿಂದ 34 ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಪ್ರಾಚಾರ್ಯ ಎಂ.ನಾಸಿರುದ್ದೀನ್, ನೋಡಲ್ ಅಧಿಕಾರಿ ಎಸ್.ಬಸವರಾಜು, ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಸಮನ್ವಯತೆಯಿಂದ ನಿರ್ವಹಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 374 ವಿದ್ಯಾರ್ಥಿಗಳಿಗೆ, 68 ಮೇಲ್ವಿಚಾರಕ ಶಿಕ್ಷಕರಿಗೆ ಗುಣಮಟ್ಟದ ಊಟ, ವಸತಿ ಒದಗಿಸಿ ಸ್ಪರ್ಧಾ ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಿದ್ದಾರೆಂದು ಅಭಿನಂದಿಸಿದರು.

2025-26 ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿ ಎನ್ ಪಿಇಪಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ, ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ, ಹದಿಹರೆಯ ಶಿಕ್ಷಣ, ಗ್ರಾಮ ದತ್ತು ಯೋಜನೆ, ಅಂತರ್ಜಾಲ ಸದ್ಬಳಕೆ, ಒತ್ತಡ ನಿವಾರಣೆ, ಆಪ್ತ ಸಮಾಲೋಚನೆ, ತಾಯಂದಿರ ಸಭೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದರು.