ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸೃಜನ ಶೀಲತೆ, ಕ್ರಿಯಾಶೀಲತೆ ಮತ್ತು ಸಂಶೋಧನಾತ್ಮಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡರೆ ಯಶಸ್ಸುಗಳಿಸಬಹುದೆಂದು ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ, ಉಪನ್ಯಾಸಕ ಡಾ. ಕೆ.ಎಸ್. ಹರಶಿವಮೂರ್ತಿ ತಿಳಿಸಿದರು. ನಗರದ ಎಸ್.ವಿ.ಪಿ. ಪದವಿಪೂರ್ವ ಕಾಲೇಜು ಹಾಗೂ ಎನ್.ಎಸ್.ಎಂ. ಬಾಲಿಕಾ ಪ್ರೌಢಶಾಲೆ ಮತ್ತು ಎಸ್.ವಿ.ಪಿ. ಪೂರ್ವ ಪ್ರಾಥಮಿಕ ಶಾಲೆಗಳ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ಸಂಘಗಳ ಸಮಾರೋಪ, ಕೃತಿಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳ ಪರಿಪೂರ್ಣ ಪರಿವರ್ತನೆಗೆ ಶಿಕ್ಷಣ ಅತ್ಯವಶ್ಯಕ. ಪಠ್ಯ ಕಲಿಕೆಯ ಜೊತೆಗೆ ಸಾಹಿತ್ಯಾತ್ಮಕ ಅಭಿರುಚಿಗಳನ್ನು ಮೈಗೂಡಿಸಿಕೊಂಡು, ಬರೆಯುವ ಕಲಿಕಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಗಳಿಗೆ ಹೊಂದಿಕೊಂಡು ಶ್ರದ್ಧೆಯಿಂದ ಅಭ್ಯಾಸಮಾಡುವ ಮನಸ್ಥಿತಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ಶಿಕ್ಷಣವನ್ನು ಕಲಿಯದೇ ಸಂಸ್ಕೃತಿ ಸಂಸ್ಕಾರಗಳನ್ನು ಮರೆಯದೆ ಗುಣಸಂಪನ್ನರಾಗಿ ದೇಶದ ಹಿರಿಮೆಯನ್ನು ಹೆಚ್ಚಿಸುವ ವ್ಯಕ್ತಿತ್ವವನ್ನುರೂಪಿಸಿಕೊಳ್ಳಬೇಕು ಎಂದರು. ಡಾ.ಕೆ.ಎಸ್.ಹರಶಿವಮೂರ್ತಿ ವಿರಚಿತ ಕೂಡಿಟ್ಟ ಚಿಲ್ - ಅರ ಬಂಧ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರೊ. ಕೆ.ಆರ್.ಬಸವರಾಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕೃತಿಗಳನ್ನು ಓದುವ, ಬರೆಯುವ ಹವ್ಯಾಸಗಳನ್ನು ಅಧ್ಯಾಪಕರು ಬೆಳಸಬೇಕಾಗಿದೆ. ಆಪ್ಯಾಯಮಾನವಾದ ಬರವಣಿಗೆಗಳೆ ಇಲ್ಲದಂತ ಪರಿಸ್ಥಿತಿಯಲ್ಲಿ ಸ್ಫುಟವಾಗಿ ಭಾಷೆಗಳನ್ನು ಬಳಸುವ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕಾಗಿದೆ. ಸಂಕುಚಿತ ಮನೋಭಾವನೆಗಳನ್ನು ಬಿಟ್ಟು ಜನಜೀವನದ ಸಾಮರಸ್ಯತೆಯ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ವಿವೇಚನಾ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳಬೇಕಾಗಿದೆ ಎಂದರು. ನಗರಸಭೆಯ ಅಧ್ಯಕ್ಷೆ ಯಮುನ ಧರಣೇಶ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಉದ್ದೇಶಗಳನ್ನು ಇಟ್ಟುಕೊಳ್ಳಬೇಕು. ಅನ್ವೇಷಣಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯುನ್ಮಾನದ ಆರ್ಕಷಣೆಗೆ ಒಳಗಾಗದೆ ಗುರುವಿನ ಮಾರ್ಗದರ್ಶನದಲ್ಲಿ ಮುಂದೆಸಾಗಿದರೆ ಸಂಸ್ಕಾರವಂತರಾಗಿ ಬದುಕಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಕೆ.ಎನ್. ರೇಣುಕಯ್ಯನವರು ವಿದ್ಯಾರ್ಥಿಗಳ ಕೈಬರಹದ ಹೊಂಬಾಳೆ ಮತ್ತು ಅರುಣೋದಯ ವಾರ್ಷಿಕ ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಭಕ್ತಿಯಿಂದ ಜ್ಞಾನ ಸಂಪಾದಿಸಿ, ಅದರಿಂದ ಧೈರ್ಯ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಸತತ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಿ ಜೀವನದಲ್ಲಿ ಸಾರ್ಥಕತೆಯನ್ನು ಸಾಧಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾದ ಶ್ರೀ ಚನ್ನೇಗೌಡಮಮತ, ಸೋಮಶೇಖರ್‌ಶಶಿಕಲಾ ದಂಪತಿಗಳನ್ನು ಸುಮತಿ ಶಿಕ್ಷಣಸಂಸ್ಥೆ ಅಧ್ಯಕ್ಷೆ ಡಾ. ಶೈಲಾ ಸತೀಶ್‌ಕುಮಾರ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಎಸ್.ಬಿ.ರೇಣು, ಕವಿ ಸ್ವಭಾವ್ ಕೋಳಗುಂದ, ಬೋಧಕ ವರ್ಗದವರಾದ ವಿಜಯಕುಮಾರ್, ವಿಜಯಕುಮಾರಿ, ಬಿಂದು, ಪತ್ರಕರ್ತ ಪುಟ್ಟಪ್ಪ, ಮತ್ತಿತರು ಉಪಸ್ಥಿತಿರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.