ಭಟ್ಕಳದ ಮೂರೂ ನ್ಯಾಯಾಲಯದಲ್ಲಿ ಯಶಸ್ವಿಯಾದ ಲೋಕ ಅದಾಲತ್

| Published : Mar 11 2025, 12:45 AM IST

ಸಾರಾಂಶ

ಕಳೆದ ಐದು ವರ್ಷಗಳಲ್ಲಿ ನ್ಯಾಯಾಲಯದಲ್ಲಿ ಪಡೆದ ಅನುಭವ ಮುಂದಿನ ಸುಖ ಜೀವನಕ್ಕೆ ದಾರಿಯಾಗಲಿದೆ

ಭಟ್ಕಳ: ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯ, ಪ್ರಥಮ ದರ್ಜೆಯ ಸಿವಿಲ್ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಬೃಹತ್ ಲೋಕ ಅದಾಲತ್‌ ನಡೆದಿದ್ದು, ಮೂರೂ ನ್ಯಾಯಾಲಯಗಳಲ್ಲಿ ಒಟ್ಟೂ ೧೧೯೩ ಪ್ರಕರಣಗಳು ಇತ್ಯರ್ಥಗೊಂಡಿವೆ.

ಹಿರಿಯ ಶ್ರೇಣಿಯ ಸಿವಿಲ್, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶ ಕಾಂತ ಕುರಣಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ಶ್ರಾವ್ಯ ನಾಯ್ಕ ಉಪಸ್ಥಿತರಿದ್ದರು. ಇಲ್ಲಿ ೩೦೩ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಕಳೆದ ೫ ವರ್ಷಗಳಿಂದ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿಗಳು ನ್ಯಾಯಿಕ ಸಂಧಾನಕಾರರಾದ ಕಾಂತ ಕುರಣಿ ಹಾಗೂ ವಕೀಲರ ಸಹಕಾರದಿಂದ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ರಾಜಿಯಾಗಿದ್ದು ಪರಸ್ಪರ ಅನ್ಯೋನ್ಯವಾಗಿ ಜೀವನ ನಡೆಸುವ ವಾಗ್ದಾನದೊಂದಿಗೆ ನ್ಯಾಯಾಲಯದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಸಂಸಾರದಲ್ಲಿ ಚಿಕ್ಕಪುಟ್ಟ ಸಮಸ್ಯೆ ಇರುತ್ತದೆ. ಇವುಗಳನ್ನು ಎದುರಿಸಿಕೊಂಡು ಜೀವನ ಸಾಗಿಸಬೇಕಿದೆ. ಕಳೆದ ಐದು ವರ್ಷಗಳಲ್ಲಿ ನ್ಯಾಯಾಲಯದಲ್ಲಿ ಪಡೆದ ಅನುಭವ ಮುಂದಿನ ಸುಖ ಜೀವನಕ್ಕೆ ದಾರಿಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಧನವತಿ, ಇಂದಿನ ಒತ್ತಡದ ದಿನದಲ್ಲಿ ಸಂಸಾರಕ್ಕೆ ಸಮಯ ಕೊಡಲಾಗುತ್ತಿಲ್ಲ ಎನ್ನುವುದು ಸಹಜ. ಆದರೆ ಪರಸ್ಪರ ಹೊಂದಾಣಿಕೆಯಿಂದ ಒಬ್ಬರಿಗೊಬ್ಬರು ಅರಿತು ಬಾಳಿದರೆ ಮಾತ್ರ ಸಂಸಾರದಲ್ಲಿ ಉತ್ತಮ ಬಾಂಧವ್ಯ ಸಾಧ್ಯ ಎಂದರು. ಲೋಕ ಅದಾಲತ್‌ನಲ್ಲಿ ವಿಶೇಷವಾಗಿ ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ₹೯೧,೮೭ ಲಕ್ಷ ಪರಿಹಾರ ಕೊಡಿಸಲಾಯಿತು. ಉಳಿದಂತೆ ರಾಜಿಯಾಗತಕ್ಕ ಪ್ರಕರಣಗಳಲ್ಲಿ ಪರಸ್ಪರ ರಾಜಿ ಮಾಡಿಸಲಾಯಿತು.

ಪ್ರಥಮ ದರ್ಜೆಯ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲದಲ್ಲಿ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶೆ ದೀಪಾ ಅರಳಗುಂಡಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ನಾಗರತ್ನಾ ಟಿ. ನಾಯ್ಕ ಉಪಸ್ಥಿತರಿದ್ದರು. ೪೩೮ ಪ್ರಕರಣಗಳು ಲೋಕ ಅದಾಲತ್ ಮುಂದೆ ಇತ್ಯರ್ಥವಾಗಿವೆ. ಕಲಂ ೧೩೮ರ ಎನ್.ಐ. ಆಕ್ಟ್ ಅಡಿಯಲ್ಲಿ ೭೮ ಪ್ರಕರಣಗಳಲ್ಲಿ ₹2.05 ಕೋಟಿ ಎದುರು ಪಕ್ಷಗಾರರಿಗೆ ಕೊಡಿಸಲಾಯಿತು. ಉಳಿದಂತೆ ವಿವಿಧ ರಾಜೀಯಾಗತಕ್ಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲದಲ್ಲಿ ನ್ಯಾಯಿಕ ಸಂಧಾನಕಾರರಾಗಿ ನ್ಯಾಯಾಧೀಶೆ ಧನವತಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ನಾಗರತ್ನ ಕೆ. ನಾಯ್ಕ ಉಪಸ್ಥಿತರಿದ್ದರು. ಒಟ್ಟೂ ೪೫೨ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು ₹2.47 ಕೋಟಿ ಪರಿಹಾರ ರೂಪದಲ್ಲಿ ಎದುರು ಪಕ್ಷಗಾರರಿಗೆ ಕೊಡಿಲಾಯಿತು. ಲೋಕ ಅದಾಲತ್‌ನಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ, ಕಾರ್ಯದರ್ಶಿ ನಾಗರಾಜ ನಾಯ್ಕ, ಹಿರಿಯ, ಕಿರಿಯ ವಕೀಲರುಗಳು ಉಪಸ್ಥಿತರಿದ್ದು ಯಶಸ್ಸಿಗೆ ಸಹಕರಿಸಿದರು.