ಜಿಪಂ ಉಪನಿರ್ದೇಶಕರಾದ ಲಕ್ಷ್ಮೀನರಸಯ್ಯ ಅವರು ರೈತರೊಂದಿಗೆ ಸಂವಾದ ನಡೆಸಿ, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದು ರೇಷ್ಮೆ ಬೆಳೆ ಕಷ್ಟಕರವಾಗಿದೆ. ನೀರಾವರಿ ಇದ್ದ ರೈತರು ಒಳ್ಳೆಯ ಬೆಳೆ ಮಾಡುವುದರ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಬಹುದು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು ರೇಷ್ಮೆ ಹುಳುಗಳ ಮೊಟ್ಟೆ ತಯಾರು ಮಾಡುವವರು ರೈತರ ಮನೆ ಬಳಿ ಬಂದು ಕಡಿಮೆ ಬೆಲೆಗೆ ಬೀಜದ ಗೂಡುಗಳನ್ನು ಖರೀದಿಸಿ ಅದರ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಬರುತ್ತಿದ್ದು, ಇದಕ್ಕೆ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಡಾ.ಎಸ್. ಮಂಥಿರಮೂರ್ತಿ ತಿಳಿಸಿದರು.
ತಾಲೂಕಿನ ಬೆಳೆಗರಹಳ್ಳಿ ರೇಷ್ಮೆ ಬೆಳೆಗಾರರಾದ ಬಾಬು ಅವರ ತೋಟದಲ್ಲಿ ತಾಲೂಕು ರೇಷ್ಮೆ ಇಲಾಖೆಯ ತಾಂತ್ರಿಕ ಸೇವಾ ಕೇಂದ್ರ ಹಾಗೂ ಬೆಂಗಳೂರು ಕೇಂದ್ರ ರೇಷ್ಮೆ ಮಂಡಳಿ ಇವರ ಸಹಯೋಗದೊಂದಿಗೆ ‘ನನ್ನ ರೇಷ್ಮೆ ನನ್ನ ಹೆಮ್ಮೆ’ ರೇಷ್ಮೆ ಕೃಷಿ ಕ್ಷೇತ್ರೋತ್ಸವ ಮತ್ತು ರೇಷ್ಮೆ ಬೆಳೆಗಾರರ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದ ಅವರು, ರೇಷ್ಮೆ ಬೆಳೆ ರೈತರ ಆರ್ಥಿಕತೆಗೆ ಉತ್ತಮ ಕೃಷಿಯಾಗಿದ್ದು ವೈಜ್ಞಾನಿಕವಾಗಿ ಮಾಡಿ ಯಶಸ್ವಿಯಾಗಬೇಕೆಂದು ತಿಳಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ರೇಷ್ಮೆ ಜಂಟಿ ನಿರ್ದೇಶಕ ರಾಜಪ್ಪ ಮಾತನಾಡಿ, ರೇಷ್ಮೆ ಬೆಳೆಗಾರರು ದೇಶದ ಬೆನ್ನೆಲುಬಾಗಿ ನಿಂತಿದ್ದು, ನಮ್ಮ ಭಾರತದ ರೇಷ್ಮೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಉಂಟಾಗಿದೆ. ಹೆಚ್ಚು ಹೆಚ್ಚು ರೈತರು ಈ ಕೃಷಿಯಲ್ಲಿ ತೊಡಗಿಕೊಂಡು ರೈತರು ಆರ್ಥಿಕವಾಗಿ ಮುಂದೆ ಬರಬೇಕು ಎಂಬುದು ನಮ್ಮ ಇಲಾಖೆಯ ಆಶಯ. ರೇಷ್ಮೆ ಇಲಾಖೆಯು ರೈತರಿಗೆ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ನೀಡಲಾಗುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಪಂ ಉಪನಿರ್ದೇಶಕರಾದ ಲಕ್ಷ್ಮೀನರಸಯ್ಯ ಅವರು ರೈತರೊಂದಿಗೆ ಸಂವಾದ ನಡೆಸಿ, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದು ರೇಷ್ಮೆ ಬೆಳೆ ಕಷ್ಟಕರವಾಗಿದೆ. ನೀರಾವರಿ ಇದ್ದ ರೈತರು ಒಳ್ಳೆಯ ಬೆಳೆ ಮಾಡುವುದರ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರೇಷ್ಮೆ ಉಪನಿರ್ದೇಶಕರು ಶ್ರೀ ಮೋಹನ್‌ಕುಮಾರ್, ವಿಜ್ಞಾನಿಗಳಾದ ಡಾ. ಜೆ.ರವಿಕುಮಾರ್, ಡಾ. ಪರಮೇಶ್ವರ, ಕಿಶನ್ ಕುಮಾರ್ ಆರ್., ರೇಷ್ಮೆ ಹಿತರಕ್ಷಣಾ ಸಮಿತಿಯ ಎಸ್.ವಿ ಸ್ವಾಮಿ, ಶಿವಾನಂದ, ಪ್ರಗತಿ ಪರ ರೇಷ್ಮೆ ಬೆಳೆಗಾರ ಚನ್ನಬಸಪ್ಪ, ಗಂಗಾಧರಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಟಿ. ಕೃಷ್ಣಮೂರ್ತಿ, ಸಿಬ್ಬಂದಿ ವರ್ಗದವರು ಮತ್ತು ರೇಷ್ಮೆ ಬೆಳೆಗಾರರು ಭಾಗಿಯಾಗಿದ್ದರು.