ಸಾರಾಂಶ
ಮಂಜುನಾಥ ನಾಗಲೀಕರ್
ಬೆಂಗಳೂರು : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಗಣನೀಯ ಏರಿಕೆ ಕಂಡು ಬರುತ್ತಿದ್ದು, 2025-26ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ 34,811 ಜಿಎಸ್ಟಿ ನೋಂದಣಿಯಾಗಿವೆ.
ಕಳೆದ ವರ್ಷ (2024-25) ಇದೇ ಮೂರು ತಿಂಗಳ ಅವಧಿಯಲ್ಲಿ 8,652 ಜಿಎಸ್ಟಿ ನೋಂದಣಿಯಾಗಿದ್ದವು. ಜಿಎಸ್ಟಿ ನೋಂದಣಿ ಮಾಡಿಕೊಳ್ಳದೆ ಜಿಎಸ್ಟಿ ತೆರಿಗೆ ಮಿತಿಯನ್ನು ಮೀರಿ ವಹಿವಾಟು ದಾಖಲಾದ ಪರಿಣಾಮ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ವ್ಯಾಪಾರಿಗಳಿಗೆ ನೋಟಿಸ್‌ಗಳು ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ವ್ಯಾಪಾರಿಗಳು ಜಿಎಸ್ಟಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಅಂಗಡಿಗಳು ಶಿಸ್ತುಬದ್ಧ ವ್ಯಾಪಾರ ನಡೆಸಲು ಜಿಎಸ್ಟಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ ಎನ್ನುವ ಕುರಿತು ವ್ಯಾಪಾರಿ ವಲಯದಲ್ಲಿ ಜಾಗೃತಿ ಮೂಡುತ್ತಿರುವುದರಿಂದ ಕೂಡ ಜಿಎಸ್ಟಿ ನೋಂದಣಿ ಗಣನೀಯವಾಗಿ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.
2024-25ನೇ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ 2,204 ಜಿಎಸ್ಟಿ ನೋಂದಣಿಯಾಗಿದ್ದರೆ, ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಲ್ಲಿ 10,785 ಜಿಎಸ್ಟಿ ನೋಂದಣಿಯಾಗಿವೆ. ಅದೇ ರೀತಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕ್ರಮವಾಗಿ 2,922 ಹಾಗೂ 3,526 ಜಿಎಸ್ಟಿ ನೋಂದಣಿಯಾಗಿದ್ದರೆ, ಈ ವರ್ಷದಲ್ಲಿ ಕ್ರಮವಾಗಿ 12,105 ಹಾಗೂ 10,921 ಜಿಎಸ್ಟಿ ನೋಂದಣಿಯಾಗಿವೆ.
‘ಸೇವೆಗೆ ಸಂಬಂಧಿಸಿದ ವಲಯದ ವ್ಯಾಪಾರದಲ್ಲಿ 20 ಲಕ್ಷ ರು. ಮೇಲ್ಪಟ್ಟು ಹಾಗೂ ಸರಕು ಸಂಬಂಧಿಸಿದ ವ್ಯಾಪಾರದಲ್ಲಿ 40 ಲಕ್ಷ ರು. ಮೇಲ್ಪಟ್ಟು ವಹಿವಾಟು ಆಗಿದ್ದರೆ ಜಿಎಸ್ಟಿ ಕಡ್ಡಾಯ. ಇಂತಹ ವ್ಯಾಪಾರಿಗಳನ್ನು ಪತ್ತೆ ಮಾಡಿ ನೋಟಿಸ್ ನೀಡಲಾಗುತ್ತಿದೆ. ಇದೇ ಕಾರಣದಿಂದ ನೋಂದಣಿ ಹೆಚ್ಚಳವಾಗಿದ್ದರೂ ಆಗುತ್ತಿರಬಹುದು. ಆದರೆ, ನಿಖರವಾಗಿ ಇದೇ ಕಾರಣಕ್ಕೆ ಆಗುತ್ತಿದೆ ಎಂದು ಹೇಳಲು ಇನ್ನಷ್ಟು ಸಮಯ ಬೇಕಾಗುತ್ತದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.
ಜಾಗೃತಿ ಮೂಡುತ್ತಿದೆ:
ವ್ಯಾಪಾರ ಆರಂಭಕ್ಕೆ ವಿವಿಧ ಮಾದರಿಯ ಪರವಾನಗಿಗಳನ್ನು ಪಡೆಯುವಾಗ ಜಿಎಸ್ಟಿ ಕೂಡ ಪಡೆಯಬೇಕು ಎಂಬ ಜಾಗೃತಿ ವ್ಯಾಪಾರ ವಲಯದಲ್ಲಿ ಮೂಡಿದೆ. ಜಿಎಸ್ಟಿ ನೋಂದಣಿ ಮಾಡಿಕೊಳ್ಳಲು ಲಕ್ಷಾಂತರ ರು. ವ್ಯಾಪಾರ ಮಾಡಬೇಕೆಂದು ನಿಯಮವಿಲ್ಲ. ಸಣ್ಣ ಮೊತ್ತದ ವ್ಯಾಪಾರ ಮಾಡುವವರಾಗಿದ್ದರೂ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕೆ ಯಾವುದೇ ಶುಲ್ಕ, ಮಿತಿಯೊಳಗಿನ ವ್ಯಾಪಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಹೀಗಾಗಿ, ಅನೇಕರು ನೋಂದಣಿ ಮಾಡಿಕೊಳ್ಳುತ್ತಿರಬಹುದು ಎಂದು ಅಧಿಕಾರಿ ಹೇಳಿದರು.
ಕಳೆದ ನವೆಂಬರ್‌ನಿಂದ ಏರುಗತಿ:
ಕಳೆದ ವರ್ಷ ನವೆಂಬರ್ ತಿಂಗಳಿಂದ ಜಿಎಸ್ಟಿ ನೋಂದಣಿ ನಾಲ್ಕರಿಂದ ಐದಂಕಿಗೆ ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ 7,569, ನವೆಂಬರ್‌ನಲ್ಲಿ 10,707, ಡಿಸೆಂಬರ್‌ನಲ್ಲಿ 10,420 ಜಿಎಸ್ಟಿ ನೋಂದಣಿಯಾಗಿವೆ.
ಜಿಎಸ್ಟಿ ನೋಂದಣಿ ಅಂಕಿ-ಅಂಶಗಳುತಿಂಗಳು2024-252025-26
ಏಪ್ರಿಲ್2,20410,785
ಮೇ2,92212,105
ಜೂನ್3,52610,921
ಜಿಎಸ್ಟಿ ನೋಂದಣಿ ವರ್ಷವಾರು ಅಂಕಿ-ಅಂಶಗಳು
2022-2352,291
2023-2434,029
2024-2596,590
2025-26 (3 ತಿಂಗಳು)34,811