ಬಸ್ ಚಕ್ರದ ಬ್ರೇಕ್‌ಗಳ ಹಠಾತ್ ಜಾಮ್ : ತಪ್ಪಿದ ಅನಾಹುತ

| Published : Jul 01 2024, 01:47 AM IST

ಸಾರಾಂಶ

ಕೆಎಸ್ಆರ್‌ಟಿಸಿ ಬಸ್‌ನ ಮುಂದಿನ ಚಕ್ರದ ಬ್ರೇಕ್‌ಗಳು ಹಠಾತ್ ಜಾಮ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಕೆಂಭಾವಿ ಪಟ್ಟಣದಲ್ಲಿ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಕೆಎಸ್ಆರ್‌ಟಿಸಿ ಬಸ್‌ನ ಮುಂದಿನ ಚಕ್ರದ ಬ್ರೇಕ್‌ಗಳು ಹಠಾತ್ ಜಾಮ್ ಆಗಿ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಕೆಂಭಾವಿ ಪಟ್ಟಣದಲ್ಲಿ ಶನಿವಾರ ನಡೆಯಿತು.

ಕೆಂಭಾವಿಯಿಂದ ಹುಣಸಗಿ ಪಟ್ಟಣಕ್ಕೆ ತೆರಳುತ್ತಿದ್ದ ಶಹಾಪೂರ ಘಟಕಕ್ಕೆ ಸೇರಿದ ಬಸ್ ಒಂದು ಪ್ರಯಾಣಿಕರಿಂದ ತುಂಬಿತ್ತು. ಕೆಂಭಾವಿ-ಹುಣಸಗಿ ಮುಖ್ಯ ರಸ್ತೆಯ ಅಂಬಿಗರ ಚೌಡಯ್ಯನ ವೃತ್ತದ ಬಳಿಯ ಕರ್ನಾಟಕ ಬ್ಯಾಂಕ್ ಬಳಿ ಬಸ್‌ನ ಮುಂದಿನ ಬ್ರೇಕ್ ನಿಷ್ಕ್ರಿಯಗೊಂಡು ಬಸ್ ರಸ್ತೆಯ ಬದಿಯಲ್ಲಿ ಬೀಳುವ ಹಂತದಲ್ಲೇ ಚಾಲಕ ತೋರಿದ ಸಮಯ ಪ್ರಜ್ಷೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಬಸ್ ಓಡುವ ಸಂದರ್ಭದಲ್ಲಿಯೇ ಈ ಅವಘಢ ಸಂಭವಿಸಿದ್ದು, ಬಸ್ ನಿಯಂತ್ರಣಕ್ಕೆ ತಂದ ಚಾಲಕ ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಸಫಲರಾದರು.

ಘಟಕ ಸಂಪೂರ್ಣ ನಿಷ್ಕ್ರೀಯ-ಶಹಾಪುರ ಘಟಕಕ್ಕೆ ಸೇರಿದ ಎಲ್ಲ ಬಸ್ಸುಗಳ ಸ್ಥಿತಿ ಆಗಿದೆ. ಬಸ್ ದುರಸ್ತಿ ಮಾಡುವ ತಂತ್ರಜ್ಞರು ಘಟಕದಲ್ಲಿ ಇಲ್ಲವೆ ಎಂಬ ಪ್ರಶ್ನೆ ನಿತ್ಯ ಪ್ರಯಾಣಿಕರನ್ನು ಕಾಡುತ್ತಿದೆ. ಈ ಭಾಗದಲ್ಲಿ ಸಂಚರಿಸುವ ಶಹಾಪೂರ ಘಟಕದ ಎಲ್ಲ ಬಸ್ಸುಗಳು ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದು ಬಸ್ ಸ್ಥಿತಿಗತಿ ಬಗ್ಗೆ ಚಾಲಕರು ಘಟಕದ ವ್ಯವಸ್ಥಾಪಕರ ಗಮನಕ್ಕೆ ತಂದರೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಓಡಾಟ ಮಾಡು ಇಲ್ಲವಾದರೆ ಶಿಸ್ತುಕ್ರಮ ಎದುರಿಸು ಎಂಬ ಸ್ಪಷ್ಟ ಸೂಚನೆ ನೀಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕರು ತಮ್ಮ ಅಳಲು ತೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರ ಶಹಾಪುರ ಘಟಕದಲ್ಲಿಯೆ ಇಂಥಾ ದುಸ್ಥಿತಿ ಇದ್ದು ಸಚಿವರು ಗಮನ ಹರಿಸಬೇಕು. ಜನರ ಸೇವೆಯಲ್ಲಿ ಅಸಡ್ಡೆ ತೋರುತ್ತಿರುವ ಘಟಕದ ಅಧಿಕಾರಿಗಳಿಗೆ ಸಚಿವರು ಸ್ಪಷ್ಟ ಸೂಚನೆ ನೀಡಿ ಗುಜರಿ ಬಸ್‌ಗಳಿಗೆ ವಿದಾಯ ಹೇಳಿ ನೂತನ ಬಸ್‌ಗಳನ್ನು ಘಟಕಕ್ಕೆ ಒದಗಿಸಿ ಪ್ರಯಾಣಿಕರ ಹಿತ ಕಾಪಾಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.