ಹೋಟೆಲ್‌, ಬೇಕರಿಗಳ ಮೇಲೆ ಪುರಸಭೆ, ಆಹಾರ ಸುರಕ್ಷತಾಧಿಕಾರಿಗಳ ದಿಢೀರ್ ದಾಳಿ

| Published : Jul 13 2025, 01:19 AM IST

ಸಾರಾಂಶ

ಬೇಕರಿಗಳಲ್ಲಿಯೂ ಸಹ ಆಹಾರ ತಯಾರು ಮಾಡುವ ಸ್ಥಳ ಅಶುಚಿತ್ವದಿಂದ ಕೂಡಿದ್ದನ್ನು ಗಮನಿಸಿದ ಅಧಿಕಾರಿಗಳು, ಬ್ರೆಡ್ ಕೆಕ್ ತಯಾರಿಸಲು ಉಪಯೋಗಿಸುವ ಪರಿಕರಗಳು ಸಹ ಸಂಪೂರ್ಣ ಹದಗೆಟ್ಟಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು.

ಹೊಳೆನರಸೀಪುರ: ಪುರಸಭೆ ಅಧಿಕಾರಿಗಳು ಮತ್ತು ಆಹಾರ ಸುರಕ್ಷತೆ ಅಧಿಕಾರಿಗಳು ಪಟ್ಟಣದಲ್ಲಿರುವ ಬೇಕರಿ, ಕ್ಯಾಂಟಿನ್‌ಗಳಲ್ಲಿ ಆಹಾರ ಸುರಕ್ಷತೆ ಇಲ್ಲದೆ ಆಹಾರ ತಯಾರು ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅನೇಕ ಕಡೆ ದಾಳಿ ನಡೆಸಿ ಪರಿಶೀಲಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಹಾರ ಸುರಕ್ಷತೆ ಅಧಿಕಾರಿ ವಿನಯ್ ನೇತೃತ್ವದಲ್ಲಿ ಪುರಸಭೆ ಆರೋಗ್ಯಾಧಿಕಾರಿ ವಸಂತ್, ಪಂಕಜ, ರಮೇಶ್ ಮತ್ತು ಪುರಸಭೆ ಸಿಬ್ಬಂದಿ ಪಟ್ಟಣದ ಅಪ್ಪಾಜಿ ಕ್ಯಾಂಟೀನ್, ಪುಷ್ಪಗಿರಿ ಮೆಸ್, ಸ್ವಾಗತ್ ಹೊಟೇಲ್, ವಸಂತ ಬೇಕರಿ, ಶ್ರೀನಿವಾಸ ಬೇಕರಿ, ವೈಭವಿ ಬೇಕರಿ, ದುರ್ಗಾ ಬೇಕರಿ, ಪಾರ್ಕ್ ರಸ್ತೆಯ ವೆಂಕಿ ಪಲಾವ್ ಕ್ಯಾಂಟೀನ್, ತಾಲೂಕು ಕಚೇರಿ ಸಮೀಪದಲ್ಲಿನ ಬೀದಿ ಬದಿ ವ್ಯಾಪಾರಿಗಳ ಪಾನಿಪೂರಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು.

ಕೆಲವು ಕ್ಯಾಂಟೀನ್‌ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಗೂ ಪಾರ್ಸೆಲ್‌ಗೆ ಪ್ಲಾಸ್ಟಿಕ್ ಶೀಟ್ ಬಳಕೆ ಮಾಡುವವರಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಆಹಾರ ತಯಾರು ಮಾಡುವ ಸ್ಥಳ ಶುದ್ಧವಾಗಿಲ್ಲದ ಕಾರಣ ಮತ್ತು ಆಹಾರ ತಯಾರಿಕೆಗೆ ಉಪಯೋಗಿಸುವ ಪದಾರ್ಥಗಳನ್ನು ಪರಿಶೀಲಿಸಿದರು. ಬೇಕರಿಗಳಲ್ಲಿಯೂ ಸಹ ಆಹಾರ ತಯಾರು ಮಾಡುವ ಸ್ಥಳ ಅಶುಚಿತ್ವದಿಂದ ಕೂಡಿದ್ದನ್ನು ಗಮನಿಸಿದ ಅಧಿಕಾರಿಗಳು, ಬ್ರೆಡ್ ಕೆಕ್ ತಯಾರಿಸಲು ಉಪಯೋಗಿಸುವ ಪರಿಕರಗಳು ಸಹ ಸಂಪೂರ್ಣ ಹದಗೆಟ್ಟಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಆಹಾರ, ಬ್ರೇಡ್ ಹಾಗೂ ಇತರೆ ತಿನಿಸುಗಳ ಪಾರ್ಸಲ್ ಮಾಡಲು ಪ್ಲಾಸ್ಟಿಕ್ ಶೀಟ್ ಬಳಸುವುದನ್ನು ತಪ್ಪಿಸಿ, ಶೇಖರಣೆಯಲ್ಲಿದ್ದ ಪ್ಲಾಸ್ಟಿಕ್ ಶೀಟ್ ಕವರ್‌ಗಳನ್ನು ತಮ್ಮ ವಶಕ್ಕೆ ಪಡೆದರು.

ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿ ಅವುಗಳಿಗೆ ದಂಡ ಸಹ ವಿಧಿಸಲಾಯಿತು.