ಸಾರಾಂಶ
ಭಟ್ಕಳ: ಮುರುಡೇಶ್ವರದ ನಿರ್ಮಾತೃ ಡಾ. ಆರ್.ಎನ್. ಶೆಟ್ಟಿಯವರ ಪತ್ನಿ ಸುಧಾ ಆರ್.ಎನ್. ಶೆಟ್ಟಿ(೮೫) ಅವರು ಏ. ೧೧ರ ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸುಧಾ ಆರ್.ಎನ್. ಶೆಟ್ಟಿಯವರು ವಯೋ ಸಹಜ ಕಾಯಿಲೆಯಿಂದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳು ಇದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.ಮೃತರು ತಮ್ಮ ಪತಿಯವರ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಹಕರಿಸುತ್ತಿದ್ದರಲ್ಲದೇ ತಮ್ಮ ಪತಿಯಂತೆಯೇ ಮಹಾ ದಾನಿಗಳಾಗಿದ್ದರು. ತಮ್ಮಲ್ಲಿಗೆ ಇಲ್ಲ ಎಂದು ಬರುವವರನ್ನು ಎಂದೂ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆ ಇಲ್ಲ ಎನ್ನಬಹುದು. ದೇವತಾ ಕಾರ್ಯದಲ್ಲಿಯೂ ತಮ್ಮ ಪತಿಯೊಂದಿಗೆ ಕೈಜೋಡಿಸಿದ್ದಲ್ಲದೇ ಇವರ ಪ್ರೇರಣೆಯಿಂದಲೇ ಮುರ್ಡೇಶ್ವರದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯನ್ನು ದತ್ತು ಪಡೆದುಕೊಂಡ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ಕಟ್ಟಿಸಿದ್ದ ಡಾ. ಆರ್.ಎನ್. ಶೆಟ್ಟಿಯವರು ಸುಧಾ ಆರ್.ಎನ್. ಶೆಟ್ಟಿ ಹೆಣ್ಣುಮಕ್ಕಳ ಶಾಲೆ ಎಂದು ನಾಮಕರಣಮಾಡಿದ್ದನ್ನು ಸ್ಮರಿಸಬಹುದು. ಮುರ್ಡೇಶ್ವರದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಕೂಡಾ ಕೈಜೋಡಿಸುತ್ತಿದ್ದ ಅವರು ಮುರುಡೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭದಿಂದಲೂ ತಮ್ಮ ಪತಿಯವರೊಂದಿಗೆ ಇದ್ದು ಸಹಕರಿಸುತ್ತಿದ್ದರಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವತಹ ಹಾಜರಿರುತ್ತಿದ್ದರು. ಪತಿಯ ಪ್ರತಿ ಹೆಜ್ಜೆಯಲ್ಲಿಯೂ ಸಹಕರಿಸುತ್ತಿದ್ದು, ಇವರು ಸಮಾಜದ ಏಳಿಗೆಗಾಗಿ ಅಪಾರ ಕೊಡುಗೆ ನೀಡಿದ್ದರು. ಮೂಲತಃ ಬೈಂದೂರು ತಾಲೂಕಿನ ಅರೆಹೊಳೆ ಬಡಾಕೆರೆ ಮುತ್ತಯ್ಯ ಶೆಟ್ಟಿಯವರ ಪುತ್ರಿಯಾದ ಇವರು ಆರ್.ಎನ್. ಶೆಟ್ಟಿಯವರನ್ನು ಮದುವೆಯಾಗಿದ್ದರು. ತಮ್ಮ ಊರಿನ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಕೂಡಾ ಕೊಡುಗೈ ದಾನಿಯಾಗಿದ್ದನ್ನು ಜನ ಸ್ಮರಿಸುತ್ತಾರೆ.