ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಪೋಟೋ ಹಾಕಿಕೊಳ್ಳಲು ಮನವಿ.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭವಾರ್ತೆ ಚಳ್ಳಕೆರೆಚಳ್ಳಕೆರೆ ದಶರಥಯ್ಯ ಕಾಂಚನ ಮಾಲ ದಂಪತಿಗಳ ಮೂರನೇ ಮಗನಾಗಿ ಜನಿಸಿದ ಡಿ.ಸುಧಾಕರ್ ಅದೃಷ್ಟವನ್ನೆ ಬೆನ್ನಿಗಂಟಿಸಿಕೊಂಡು ಬಂದವರಂತೆ ತನ್ನ ಬದುಕಿನ ಏಳಿಗೆಯಲ್ಲಿ ಯಶಸ್ವಿಯಾಗಿ ಮುನ್ನಡೆದವರು.

ತನ್ನ ಚಿಕ್ಕಪ್ಪ ದಿವಂಗತ ಎನ್.ಜಯಣ್ಣ ಅವರ ರಾಜಕೀಯವನ್ನು ಹತ್ತಿರದಿಂದ ಕಂಡಿದ್ದ ಸುಧಾಕರ್ ಅವರ ಅಧಿಕಾರವಧಿಯಲ್ಲಿ ತೆರೆಮರೆಯಲ್ಲೆ ರಾಜಕೀಯ ಪಾಳೆಯಪಟ್ಟುಗಳನ್ನು ಕಲಿತುಕೊಂಡು ಅದನ್ನು ತಾನು ರಾಜಕೀಯಕ್ಕೆ ಎಂಟ್ರಿಯಾದ ಮೇಲೆ ಅಳವಡಿಸಿಕೊಂಡು ಮೊದಲ ಅವಧಿಯಲ್ಲಿ ಅಂದರೆ 2004ರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಜೆಡಿಎಸ್ ಮಾಜಿ ಮಂತ್ರಿ ತಿಪ್ಪೇಸ್ವಾಮಿ ಹಾಗೂ ಮಾಜಿ ಶಾಸಕ ಬಿಜೆಪಿಯ ಬಸವರಾಜ್ ಮಂಡೀಮಠ್ ಅವರ ವಿರುದ್ಧ ಗೆದ್ದು ಶಾಸನ ಸಭೆಗೆ ಹೋಗಿದ್ದರು.

ರಾಜಕೀಯ ರಂಗದ ಚದುರಂಗದಾಟದಲ್ಲಿ ಮೊದಲ ಹೆಜ್ಜೆಯಲ್ಲೆ ಯಶಸ್ವಿಯಾಗಿದ್ದ ಸುಧಾಕರ್ 2008ರವರೆಗೂ ಚಳ್ಳಕೆರೆ ಕ್ಷೇತ್ರವನ್ನು ತನ್ನ ಮುಗಿಮುಷ್ಟಿಯಲ್ಲಿಟ್ಟುಕೊಂಡಿದ್ದರು‌. ಆ ಪರಿಯಾಗಿ ಜನಪರವಾಗಿದ್ದರು. ಯಾವಾಗ ಕ್ಷೇತ್ರ ಮರುವಿಂಗಡಣೆಯ ಗುಮ್ಮ ಬಂದು ಚಳ್ಳಕೆರೆ ಸಾಮಾನ್ಯ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತೋ ಆಗಲೇ ಹಿರಿಯೂರಿಗೆ ದಾಪುಗಾಲಿಟ್ಟು ಬಂದು ಚುನಾವಣಾ ತಂತ್ರಗಾರಿಕೆಯನ್ನು ಭಾಗಶಃ ಅಳವಡಿಸಿ ಜೆಡಿಎಸ್‌ನ ಎ.ಕೃಷ್ಣಪ್ಪ ಅವರ ವಿರುದ್ಧ ಗೆದ್ದು ಬೀಗಿದ್ದರು. ಅಲ್ಪಸಂಖ್ಯಾತ ಜೈನ ಸಮುದಾಯವನ್ನ ಪ್ರತಿನಿಧಿಸುತ್ತಿದ್ದ ಡಿ.ಸುಧಾಕರ್ ಅವರ ಸಮುದಾಯದ ಮತಗಳು ಹಿರಿಯೂರು ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಇದ್ದವು. ಆದರೆ, ಯಾದವ ಸಮುದಾಯ ಪ್ರತಿನಿಸುತ್ತಿದ್ದ ಎ.ಕೃಷ್ಣಪ್ಪ ಕಾಂಗ್ರೆಸ್‌ನ ಕಟ್ಟಾಳು. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಗೆದ್ದು ಮಂತ್ರಿಯೂ ಆಗಿದ್ದವರು.

ಇಂತಹ ಕೃಷ್ಣಪ್ಪ ಜೆಡಿಎಸ್‌ಗೆ ಬಂದು ರಾಜ್ಯ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡಿದ್ದವರು. ಅಂತಹವರ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿ ಇದ್ದುದರಿಂದ ಸುಧಾಕರ್ ಗೆಲುವಿಗೆ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ. ಈ ಹಿಂದೆ ಅಂದರೆ 2004ರಿಂದ 2008ರವರೆಗೆ ಅವರು ಚಳ್ಳಕೆರೆ ಕ್ಷೇತ್ರದಲ್ಲಿ ಮೊದಲ ಅವಧಿಯಲ್ಲಿ ಮೂಡಿಸಿದ್ದ ಜನಪ್ರಿಯತೆ ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಫರ್ಧಿಸಿದರೂ ಆ ಅದೃಷ್ಟ ಬೆನ್ನು ಹತ್ತಿ ಗೆಲುವಿನ ದಡ ಸೇರಿಸಿತ್ತು.

ಗೆದ್ದ ಮೇಲೆ ಇವರಿಗೆ ದೊಡ್ಡ ಅದೃಷ್ಟವೇ ಕಾದಿತ್ತು. ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಮಂತ್ರಿ ಆಗಿದ್ದೂ ಕೂಡ ಅದೃಷ್ಟವೇ. ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿ ಸಮಾಜಕಲ್ಯಾಣ ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡುವ ಸಂದರ್ಭದಲ್ಲಿ ಬೆಂಗಳೂರಿನ ಬೆಗ್ಗರ್ಸ್ ಕಾಲೋನಿಯಲ್ಲಿ ನಡೆದ ಹಗರಣವೊಂದು ಇವರ ಸಮಾಜ ಕಲ್ಯಾಣ ಮಂತ್ರಿ ಪದವಿಯನ್ನೇ ಕಿತ್ತುಕೊಂಡಿತ್ತು. ಆ ನಂತರ ಮುಜರಾಯಿ ಖಾತೆಯಲ್ಲಿ ಮುಂದುವರೆದರೂ ನಿಲ್ಲದ ರಾಜಕೀಯ ಸ್ಥಿತ್ಯಂತರಗಳಿಂದ ಶಾಸಕ ಸ್ಥಾನವನ್ನೆ ಕಳೆದುಕೊಂಡು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಂದ ಅನರ್ಹಗೊಂಡು ಮತ್ತೆ ಹೈಕೋರ್ಟ್ ತೀರ್ಪೀನಿಂದ ಶಾಸಕತ್ವವನ್ನು ಕಾಪಾಡಿಕೊಂಡಿದ್ದರು.

20018ರಲ್ಲಿ ಬಿಜೆಪಿಯ ಪೂರ್ಣಿಮ ಶ್ರೀನಿವಾಸ್ ಅವರ ಎದುರು ಸೋತು ಹೋಗಿದ್ದರು. ಸೋತಾಗಲೂ ಕ್ಷೇತ್ರದ ಜನರು ಇವರನ್ನು ಹುಡುಕಿಕೊಂಡು ಬರುವುದು ಮುಂದುವರಿದೇ ಇತ್ತು. ಮತ್ತೆ 2023ಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದು ಬೀಗಿ ಯೋಜನೆ ಮತ್ತು ಸಾಂಖ್ಯಿಕ ಮಂತ್ರಿಯೂ ಆಗಿಬಿಟ್ಟರು. ಅದಕ್ಕಾಗಿಯೇ ಡಿ.ಸುಧಾಕರ್ ಅವರು ರಾಜಕೀಯ ರಂಗದ ಅದೃಷ್ಟದ ಧೃವತಾರೆಯಾಗಿ ಕಂಗೊಳಿಸಿದವರು. ಈಗ ಅಕಾಲಿಕವಾಗಿ ನಿರ್ಗಮಿಸುವ ಮೂಲಕ ದೊಡ್ಡ ನಿರ್ವಾತವನ್ನೆ ಬಿಟ್ಟು ಹೋಗಿದ್ದಾರೆ.