ದಶರಥಯ್ಯ-ಕಾಂಚನಮಾಲಾ ದಂಪತಿಯ ಮೂರನೇ ಮಗನಾಗಿ ಜನಿಸಿದ ಡಿ.ಸುಧಾಕರ್, ಅದೃಷ್ಟವನ್ನೇ ಬೆನ್ನಿಗಂಟಿಸಿಕೊಂಡು ಬಂದವರಂತೆ ತಮ್ಮ ಬದುಕಿನ ಏಳಿಗೆಯಲ್ಲಿ ಯಶಸ್ವಿಯಾಗಿ ಮುನ್ನಡೆದವರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ದಶರಥಯ್ಯ-ಕಾಂಚನಮಾಲಾ ದಂಪತಿಯ ಮೂರನೇ ಮಗನಾಗಿ ಜನಿಸಿದ ಡಿ.ಸುಧಾಕರ್, ಅದೃಷ್ಟವನ್ನೇ ಬೆನ್ನಿಗಂಟಿಸಿಕೊಂಡು ಬಂದವರಂತೆ ತಮ್ಮ ಬದುಕಿನ ಏಳಿಗೆಯಲ್ಲಿ ಯಶಸ್ವಿಯಾಗಿ ಮುನ್ನಡೆದವರು.ಚಳ್ಳಕೆರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಬಳಿಕ, ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ, ಶಿವಮೊಗ್ಗದ ನ್ಯಾಷನಲ್ ಕಾಲೇಜಲ್ಲಿ ಬಿಕಾಂ ಪದವಿ ಪಡೆದರು. ಕುಟುಂಬದಲ್ಲಿ ಅವರ ಚಿಕ್ಕಪ್ಪ ಜಯಣ್ಣ ಅವರು ರಾಜಕಾರಣದಲ್ಲಿ ಇದ್ದುದ್ದರಿಂದ ರಾಜಕೀಯದ ಒಡನಾಟ ಇತ್ತು. ತಂದೆಯಿಂದ ಲಿಕ್ಕರ್ ಉದ್ಯಮ ಬಳುವಳಿಯಾಗಿತ್ತು.
ತಮ್ಮ ಚಿಕ್ಕಪ್ಪ ದಿವಂಗತ ಎನ್.ಜಯಣ್ಣ ಅವರ ರಾಜಕೀಯವನ್ನು ಹತ್ತಿರದಿಂದ ಕಂಡಿದ್ದ ಸುಧಾಕರ್, ಅವರ ಅಧಿಕಾರಾವಧಿಯಲ್ಲಿ ತೆರೆಮರೆಯಲ್ಲೇ ರಾಜಕೀಯ ಪಾಳೆಯದ ಪಟ್ಟುಗಳನ್ನು ಕಲಿತುಕೊಂಡು ಅದನ್ನು ತಾವು ರಾಜಕೀಯಕ್ಕೆ ಎಂಟ್ರಿಯಾದ ಮೇಲೆ ಅಳವಡಿಸಿಕೊಂಡರು. ಮೊದಲ ಅವಧಿಯಲ್ಲಿ ಅಂದರೆ, 2004ರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಜೆಡಿಎಸ್‌ನ ಮಾಜಿ ಮಂತ್ರಿ ತಿಪ್ಪೇಸ್ವಾಮಿ ಹಾಗೂ ಮಾಜಿ ಶಾಸಕ ಬಿಜೆಪಿಯ ಬಸವರಾಜ್ ಮಂಡೀಮಠ್ ಅವರ ವಿರುದ್ಧ ಗೆದ್ದು ಶಾಸನ ಸಭೆಗೆ ಹೋಗಿದ್ದರು.ರಾಜಕೀಯ ರಂಗದ ಚದುರಂಗದಾಟದಲ್ಲಿ ಮೊದಲ ಹೆಜ್ಜೆಯಲ್ಲೇ ಯಶಸ್ವಿಯಾಗಿದ್ದ ಸುಧಾಕರ್, 2008ರವರೆಗೂ ಚಳ್ಳಕೆರೆ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟು ಕೊಂಡಿದ್ದರು. ಆ ಪರಿಯಾಗಿ ಜನಪರವಾಗಿದ್ದರು. ಯಾವಾಗ ಕ್ಷೇತ್ರ ಮರು ವಿಂಗಡಣೆಯಾಗಿ ಚಳ್ಳಕೆರೆ ಸಾಮಾನ್ಯ ಕ್ಷೇತ್ರದಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತೋ, ಆಗಲೇ ಹಿರಿಯೂರಿಗೆ ದಾಪುಗಾಲಿಟ್ಟು ಬಂದು ಚುನಾವಣಾ ತಂತ್ರಗಾರಿಕೆಯನ್ನು ಭಾಗಶಃ ಅಳವಡಿಸಿಕೊಂಡು, ಜೆಡಿಎಸ್‌ನ ಎ.ಕೃಷ್ಣಪ್ಪ ಅವರ ವಿರುದ್ಧ ಗೆದ್ದು ಬೀಗಿದ್ದರು. ಹಾಗೆ ನೋಡಿದರೆ, ಅಲ್ಪಸಂಖ್ಯಾತ ಜೈನ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಡಿ.ಸುಧಾಕರ್ ಅವರ ಸಮುದಾಯದ ಮತಗಳು ಹಿರಿಯೂರು ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಇದ್ದವು.
2004ರಿಂದ 2008ರವರೆಗೆ ಅವರು ಚಳ್ಳಕೆರೆ ಕ್ಷೇತ್ರದಲ್ಲಿ ಮೊದಲ ಅವಧಿಯಲ್ಲಿ ಮೂಡಿಸಿದ್ದ ಜನಪ್ರಿಯತೆ ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಆ ಅದೃಷ್ಟ ಬೆನ್ನು ಹತ್ತಿ ಗೆಲುವಿನ ದಡ ಸೇರಿಸಿತ್ತು. ಗೆದ್ದ ಮೇಲೆ ಇವರಿಗೆ ದೊಡ್ಡ ಅದೃಷ್ಟವೇ ಕಾದಿತ್ತು. ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿ ಸಮಾಜಕಲ್ಯಾಣ ಮಂತ್ರಿಯಾದರು. ಈ ವೇಳೆ, ಬೆಂಗಳೂರಿನ ಬೆಗ್ಗರ್ಸ್ ಕಾಲೋನಿಯಲ್ಲಿ ನಡೆದ ಹಗರಣವೊಂದು ಇವರ ಸಮಾಜ ಕಲ್ಯಾಣ ಮಂತ್ರಿ ಪದವಿಯನ್ನೇ ಕಿತ್ತುಕೊಂಡಿತ್ತು. ನಂತರ ಮುಜರಾಯಿ ಖಾತೆಯಲ್ಲಿ ಮುಂದುವರೆದರೂ, ಶಾಸಕ ಸ್ಥಾನವನ್ನೇ ಕಳೆದುಕೊಂಡು, ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಂದ ಅನರ್ಹಗೊಂಡರು. ಆದರೆ, ಹೈಕೋರ್ಟ್ ತೀರ್ಪಿನಿಂದ ಶಾಸಕತ್ವವನ್ನು ಕಾಪಾಡಿಕೊಂಡರು.2018ರಲ್ಲಿ ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಎದುರು ಸೋತು ಹೋದರು. ಆದರೆ, 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು, ಗೆದ್ದು, ಯೋಜನೆ ಮತ್ತು ಸಾಂಖ್ಯಿಕ ಮಂತ್ರಿ ಆದರು. ಹಾಗಾಗಿಯೇ, ಡಿ.ಸುಧಾಕರ್ ಅವರು ರಾಜಕೀಯ ರಂಗದ ಅದೃಷ್ಟದ ಧ್ರುವತಾರೆಯಾಗಿ ಕಂಗೊಳಿಸಿದವರು. ಈಗ ಅಕಾಲಿಕವಾಗಿ ನಿರ್ಗಮಿಸುವ ಮೂಲಕ ದೊಡ್ಡ ನಿರ್ವಾತವನ್ನೇ ಬಿಟ್ಟು ಹೋಗಿದ್ದಾರೆ.ಸುಧಾಕರ್ ಅಗಲಿಕೆ ಕಾಂಗ್ರೆಸ್‌ಗೆ ನಷ್ಟ:
ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರ ಅಗಲಿಕೆ ನೋವು ತಂದಿದೆ. ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೆಸಿದ್ದ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್ ಹೆಸರಿಡಲು ಚಿಂತನೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ನಮ್ಮ ಪಾಲಿಗೆ ದುಃಖದ ದಿನ. ನನ್ನ ಆಪ್ತಮಿತ್ರ ಹಾಗೂ ನಮ್ಮ ಸರ್ಕಾರದ ಸಚಿವರಾದ ಡಿ.ಸುಧಾಕರ್ ನಮ್ಮನ್ನಗಲಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಂಡಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು. ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದರು, ನಂತರ ಪ್ರಜ್ಞೆ ಕಳೆದುಕೊಂಡಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಪ್ರಜ್ಞೆ ಮರಳಿತ್ತು. ಹೀಗಾಗಿ ಅವರು ಗುಣಮುಖರಾಗಿ ಮರಳುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಭಾನುವಾರ ಬೆಳಗ್ಗಿನ ಜಾವ 3.15ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಕಂಬನಿ ಮಿಡಿದರು.
ಭದ್ರಾ ಯೋಜನೆ ಪೂರ್ಣಗೊಳಿಸಿ ಅದಕ್ಕೆ ಚಾಲನೆ ನೀಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಈ ಯೋಜನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಉದ್ಘಾಟನೆ ಮಾಡಬೇಕು ಎಂದು ಚಿಂತಿಸಿದ್ದೆವು. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿದ್ದರು. ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.ಸರ್ಕಾರಿ ಗೌರವದ ಜತೆ ಇಂದು ಸಚಿವ ಸುಧಾಕರ್ ಅಂತ್ಯಕ್ರಿಯೆ:ಭಾನುವಾರ ಮುಂಜಾನೆ ನಿಧನ ಹೊಂದಿದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರವನ್ನು ಚಳ್ಳಕೆರೆಯ ಅವರ ನಿವಾಸ, ‘ಗೊಮ್ಮಟ ನಿಲಯ’ಕ್ಕೆ ತರಲಾಗಿದ್ದು, ಸೋಮವಾರ ಮಧ್ಯಾಹ್ನ 4 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.
ಇದಕ್ಕೂ ಮೊದಲು, ಸೋಮವಾರ ಬೆಳಗ್ಗೆ ಸಚಿವರ ಸ್ವಂತ ಮನೆ ಗೊಮ್ಮಟ ನಿಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಬಳಿಕ, ಚಳ್ಳಕೆರೆ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಮೈದಾನಕ್ಕೆ ಮೃತದೇಹ ಕೊಂಡೊಯ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿರುವ ಶಾಂತಕುಮಾರ್ ಮೆಮೋರಿಯಲ್ ಶೆಟಲ್ ಕೋರ್ಟ್ ಆವರಣಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗುವುದು. ಬಳಿಕ, ಸಕಲ ಸರ್ಕಾರಿ ಗೌರವಗಳೊಂದಿಗೆ, ಜೈನ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಶಾಸಕರು, ಮಂತ್ರಿಗಳು, ಮುಖಂಡರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.ಸುಧಾಕರ್ ಕುಟುಂಬ ರಾಜಕಾರಣ ಕೊನೆ?:ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ಡಿ.ಸುಧಾಕರ್ ಮನೆತನಕ್ಕೆ ದೊಡ್ಡ ಹೆಸರಿದೆ. ಮೊದಲಿನಿಂದಲೂ ಈ ಕುಟುಂಬ ದಾನ-ಧರ್ಮಗಳಿಗೆ ಎತ್ತಿದ ಕೈ. ಇವರ ತಂದೆ ದಶರಥಯ್ಯ ಮೂಲ ವ್ಯವಹಾರಸ್ಥರು. ಇವರ ಚಿಕ್ಕಪ್ಪ ಎನ್.ಜಯಣ್ಣ, ಚಳ್ಳಕೆರೆ ಕ್ಷೇತ್ರದಲ್ಲಿ ಎರಡು ಬಾರಿಗೆ ಶಾಸಕರಾಗಿದ್ದವರು. ಎನ್.ಜಯಣ್ಣ ಎಂದರೆ ಇಡೀ ಕ್ಷೇತ್ರದಲ್ಲಿ ಬಡವರ ಪರ ಎಂಬ ಖ್ಯಾತಿ ಗಳಿಸಿದವರು. ಸಾಮಾನ್ಯ ಕ್ಷೇತ್ರವಾಗಿದ್ದ ಚಳ್ಳಕೆರೆಯಲ್ಲಿ 1978ರಿಂದ 1983ರವರೆಗೆ ನಂತರ 1989ರಿಂದ 1994ರವರೆಗೆ ಶಾಸಕರಾಗಿದ್ದವರು.ಡಿ.ಸುಧಾಕರ್ ಅವರಿಗೆ ಒಬ್ಬಳು ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಪುತ್ರ ಸುಹಾಸ್ ಮತ್ತು ಪುತ್ರಿ ಸ್ಫೂರ್ತಿ ಇಬ್ಬರಿಗೂ ವಿವಾಹ ಮಾಡಿರುವ ಸುಧಾಕರ್, ಎಂದಿಗೂ ರಾಜಕಾರಣಕ್ಕೆ ಪತ್ನಿ ಹರ್ಷಿಣಿ ಸುಧಾಕರ್ ಮತ್ತು ಮಕ್ಕಳನ್ನು ಪರಿಚಯಿಸಿದವರಲ್ಲ. ಬಹುಶಃ ಇವರ ನಿಧನದ ನಂತರ ಇವರ ಕುಟುಂಬದ ರಾಜಕಾರಣ ಕೊನೆಗೊಳ್ಳುವುದಾ ಎಂಬ ಪ್ರಶ್ನೆ ಈಗ ಎದುರಾಗಿದೆ.
ಇವರ ಕುಟುಂಬ ಮೂಲತಃ ವ್ಯವಹಾರಸ್ಥರಾಗಿದ್ದರಿಂದ ಗೊಮ್ಮಟೇಶ್ವರ ಬಸ್ ಇಟ್ಟಿದ್ದರು. ಈ ಭಾಗದಲ್ಲಿ ಗೊಮ್ಮಟೇಶ್ವರ ಬಸ್ಸು ಒಂದು ಕಾಲದಲ್ಲಿ ಬಲು ಫೇಮಸ್ಸು. ದಶರಥಯ್ಯ-ಕಾಂಚನ್ ಮಾಲ ದಂಪತಿಗೆ ಏಳು ಜನ ಮಕ್ಕಳು. ಅವರಲ್ಲಿ 6 ಗಂಡು ಮಕ್ಕಳು, ಒಬ್ಬರು ಹೆಣ್ಣುಮಗಳು. ಇವರ ಸಹೋದರರಾದ ಶಾಂತಕುಮಾರ್, ಮಹಾವೀರಪ್ಪ ನಿಧನರಾಗಿದ್ದು. ಇದೀಗ ಡಿ.ಸುಧಾಕರ್ ವಿಧಿವಶರಾಗಿದ್ದಾರೆ.ಅಣ್ಣ ಶಾಂತಕುಮಾರ್ ಹೆಸರಿನಲ್ಲಿ ಅವರ ನೆನಪಿಗಾಗಿ ಚಳ್ಳಕೆರೆಯ ವಿಠಲ ನಗರದಲ್ಲಿ ಒಳಾಂಗಣ ಕ್ರೀಡಾಂಗಣದ ರೀತಿಯಲ್ಲಿ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡಿದ್ದಾರೆ. 2004ರಿಂದ 2008ರವರೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಡಿ.ಸುಧಾಕರ್, ದಿನಾಲೂ ಮುಂಜಾನೆ ಇದೇ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಕಾಕ್ ಆಡುತ್ತಿದ್ದರು.ಚಳ್ಳಕೆರೆ ಕ್ಷೇತ್ರ ಸಾಮಾನ್ಯ ಕ್ಷೇತ್ರದಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಲೆ ಹಿರಿಯೂರಿನ ರಾಜಕಾರಣಕ್ಕೆ ಒಗ್ಗಿಕೊಂಡಿದ್ದ ಇವರು ಈ ಕ್ರೀಡಾಂಗಣದಲ್ಲಿ ಆಟ ಆಡುವುದನ್ನು ನಿಲ್ಲಿಸಿದ್ದರು. ಸಹೋದರರ ಪೈಕಿ ಎಲ್ಲರಿಗಿಂತಲೂ ಕಿರಿಯರಾಗಿದ್ದ ಇವರು ರಾಜಕಾರಣದಲ್ಲಿ ಆಸಕ್ತಿ ಇದ್ದ ಕಾರಣ ಜೈನ್ ಮನೆತನದಲ್ಲಿ ಇವರ ಚಿಕ್ಕಪ್ಪ ಶಾಸಕರಾದ ಮೇಲೆ ಅವರ ಹಾದಿಯನ್ನೆ ಮುಂದುವರಿಸಿದ್ದರು.