ಚಿಕ್ಕಬಳ್ಳಾಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಡಾ.ಕೆ.ಸುಧಾಕರ್‌

| Published : Jun 05 2024, 01:30 AM IST

ಚಿಕ್ಕಬಳ್ಳಾಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಡಾ.ಕೆ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ರಕ್ಷಾರಾಮಯ್ಯ ವಿರುದ್ಧ 1.62 ಲಕ್ಷ ಮತಗಳಿಂದ ಜಯ ಸಾಧಿಸಿದ ಡಾ ಸುಧಾಕರ್‌ ವಿಧಾನಸಭಾ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಂಡರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತೀವ್ರ ಕುತೂಹಲ ಮೂಡಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ವಿರುದ್ಧ 1,62,099 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಡಾ.ಕೆ.ಸುಧಾಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಎದುರು ಸೋಲುಂಡಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸಿದ್ದಾರೆ.

ಮಂಗಳವಾರ ಬೆಳಗ್ಗೆ ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭವಾಗಿ ಅಂಚೆ ಮತಗಳ ಎಣಿಕೆಯಿಂದಲೇ ಮುನ್ನಡೆ ಕಾಯ್ದುಕೊಂಡ ಸುಧಾಕರ್‌ ಅವರು ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡರು. ಡಾ.ಸುಧಾಕರ್ 8,19,588 ಮತ ಪಡೆದರೆ, ಕಾಂಗ್ರೆಸ್‌ನ ರಕ್ಷಾ ರಾಮಯ್ಯ 6,57,489 ಮತಗಳನ್ನಷ್ಟೇ ಸೆಳೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಬಿಎಸ್‌ಪಿಯ ಮಹದೇವ 4,428 ಮತ ಹಾಗೂ ಸಿಪಿಎಂನ ಮುನಿವೆಂಕಟಪ್ಪ 4,546 ಮತಗಳನ್ನು ಪಡೆದಿದ್ದಾರೆ.

ಸಿಎಂಗೆ ಪ್ರತಿಷ್ಠೆಯ ಕಣ: ಈ ಬಾರಿಯ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ. ಸುಧಾಕರ್ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣೆ ತಾರಾ ಮೆರುಗು ಪಡೆದಿತ್ತು.

ಒಂದು ಕಡೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಡಾ.ಸುಧಾಕರ್ ಅವರು ಆತ್ಮವಿಶ್ವಾಸದಿಂದ ಗೆಲ್ಲುವ ಮಾತನಾಡುತ್ತಿದ್ದರೆ, ಏನೇ ಮಾಡಿದರೂ ಸುಧಾಕರ್ ಈ ಚುನಾವಣೆಯಲ್ಲೂ ಗೆಲ್ಲಲ್ಲ ಎಂದು ಪ್ರದೀಪ್ ಈಶ್ವರ್ ಭವಿಷ್ಯ ಹೇಳುತ್ತಲೇ ಇದ್ದರು. ಹಾಗಾಗಿಯೇ ಈ ಕ್ಷೇತ್ರ, ಇಬ್ಬರು ಪರೋಕ್ಷ ಜಿದ್ಜಾಜಿದ್ದಿಗೆ ಕಾರಣವಾಗಿತ್ತು.

ಈ ಚುನಾವಣೆಯಲ್ಲಿ ಡಾ.ಸುಧಾಕರ್‌ ಒಂದು ಮತದ ಅಂತರದಿಂದ ಗೆದ್ದರೂ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಈಶ್ವರ್‌ ಪ್ರದೀಪ್‌ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಈಗ ಡಾ.ಸುಧಾಕರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ.