ಸಕ್ಕರೆ ಕಾರ್ಖಾನೆಯವರು ರೈತರ ಬೇಡಿಕೆಗಳಿಗೆ ಸ್ಪಂದಿಸಲಿ: ದೇಶಪಾಂಡೆ

| Published : Oct 27 2025, 12:30 AM IST

ಸಕ್ಕರೆ ಕಾರ್ಖಾನೆಯವರು ರೈತರ ಬೇಡಿಕೆಗಳಿಗೆ ಸ್ಪಂದಿಸಲಿ: ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಹಂತದಲ್ಲಿದ್ದು, ನಮ್ಮ ರೈತರ ಬೇಡಿಕೆಗಳಿಗೆ ಕಾರ್ಖಾನೆಯವರು ಸ್ಪಂದಿಸಬೇಕು.

ಸುದ್ದಿಗೋಷ್ಠಿಯಲ್ಲಿ ಶಾಸಕ ದೇಶಪಾಡೆಕನ್ನಡಪ್ರಭ ವಾರ್ತೆ ಹಳಿಯಾಳ

ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವ ಹಂತದಲ್ಲಿದ್ದು, ನಮ್ಮ ರೈತರ ಬೇಡಿಕೆಗಳಿಗೆ ಕಾರ್ಖಾನೆಯವರು ಸ್ಪಂದಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದರು.

ಭಾನುವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೂ ನ್ಯಾಯ ದೊರೆಯಬೇಕು ಅತ್ತ ಕಾರ್ಖಾನೆಯು ಬೆಳೆಯಬೇಕು. ಈ ದಿಸೆಯಲ್ಲಿ ಕಾರ್ಖಾನೆಯವರು ರೈತರ ಬೇಡಿಕೆಗಳನ್ನು ಪ್ರಾಧಾನ್ಯತೆ ಮೇಲೆ ಬಗೆಹರಿಸಲು ಮುಂದಾಗಬೇಕು, ಅದಕ್ಕಾಗಿ ಆದಷ್ಟು ಬೇಗ ರೈತರೊಂದಿಗೆ ಕುಳಿತು ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರವನ್ನು ಕಾಣಬೇಕು. ನಾನು ಅಗಸ್ಟ್ ತಿಂಗಳಿನಲ್ಲಿ ಕಾರ್ಖಾನೆ ಅಧಿಕಾರಿಗಳ ಹಾಗೂ ಕಬ್ಬು ಬೆಳೆಗಾರರ ಸಭೆ ನಡೆಸಿ ಕಾರ್ಖಾನೆಯವರು ರೈತರ ಹಿತರಕ್ಷಣೆ ಮರೆಯಬಾರದು, ಅವರ ಬೇಡಿಕೆಗಳಿಗಾಗಿ ಸ್ಪಂದಿಸಬೇಕು ಎಂದು ಸೂಚಿಸಿದ್ದೆ, ಅದಕ್ಕೆ ಕಾರ್ಖಾನೆಯವರು ಸ್ಪಂದಿಸುವ ಭರವಸೆ ನೀಡಿದ್ದರು ಎಂದರು.

₹50 ಕೋಟಿ ವಿಶೇಷ ಅನುದಾನ ಮಂಜೂರು:

ಹಳಿಯಾಳ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳಿಂದ ₹50 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳ ರಸ್ತೆ, ಸೇತುವೆ ಕಾಮಗಾರಿಗಳಿಗೆ ಹಾಗೂ ಹಳಿಯಾಳ ಮತ್ತು ದಾಂಡೇಲಿ ಪೌರಸಂಸ್ಥೆಗಳಲ್ಲಿ ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ 37.50ಕೋಟಿ ಹಾಗೂ ಶಾಸಕರ ವಿವೇಚನಾ ಅಧಿಕಾರದಡಿ ಆಯ್ಕೆ ಮಾಡಬಹುದಾದ ಇತರೇ ಇಲಾಖೆಗಳ ಕಾಮಗಾರಿಗಳಿಗೆ 12.50ಕೋಟಿ ಅನುದಾನವನ್ನು ವಿನಯೋಗಿಸಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದ ಬಳಕೆಯ ಕುರಿತು ಸೂಚಿಸಿದ ನಿಯಾಮವಳಿಯಂತೆ ಶೇ.75 ಅನುದಾನವನ್ನು ಅಭಿವೃದ್ಧಿ ಕಾಮಗಾರಿ ಹಾಗೂ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಹಾಗೂ ಇನ್ನೂಳಿದ ಶೇ. 25 ಅನುದಾನವನ್ನು ಶಾಸಕರಿಗೆ ನೀಡಿರುವ ವಿವೇಚಣಾ ಅಧಿಕಾರದಡಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದರು.ಶೈಕ್ಷಣಿಕ ಯೋಜನೆ:

ತೇರಗಾಂವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್.ಎಂ.ಎಸ್ ಬಂಗೂರನಗರ, ಮತ್ತು ರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತನೆಯಾಗಿದ್ದು, ಈ ಪ್ರತಿಯೊಂದು ಶಾಲೆಗಳ ಅಭಿವೃದ್ಧಿಗಾಗಿ ₹2ರಿಂದ 4ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ ಎಂದರು. ಕನರ್ಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿಗಳ ಕಾರ್ಮಿಕಕರ ಕಲ್ಯಾಣ ಮಂಡಳಿಯ ವತಿಯಿಂದ ದಾಂಡೇಲಿಗೆ ವಸತಿ ಶಾಲೆ ಮಂಜೂರಾಗಿದ್ದು, ಅದಕ್ಕಾಗಿ 39.95%ಕೋಟಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ಹಳಿಯಾಳದ ಶಿವಾಜಿ ಪಿಯು ಕಾಲೇಜಗೆ ಕಿರ್ಲೋಸ್ಕರ್ ಮೋಟಾರ್ಸ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಟೋಮೊಬೈಲ್ ಲ್ಯಾಬೋರೆಟರಿ ಆರಂಭವಾಗಲಿದ್ದು, ಕೌಶಲ್ಯ ಆದಾರಿತ ತರಬೇತಿಗಳು ಇಲ್ಲಿ ಲಭ್ಯವಾಗುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.ಕೋಳಿ ಮರಿ ವಿತರಣೆ:

ಗ್ರಾಮೀಣ ಮಹಿಳೆಯರಲ್ಲಿ ಕೋಳಿ ಸಾಕಾಣಿಕೆಯನ್ನು ಉತ್ತೇಜಿಸುವ ಸದ್ದುದೇಶದಿಂದ 2025-26ನೇ ಸಾಲಿನ ಹೆಚ್ಚುವರಿ ಅನುದಾನದಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಉಚಿತ ಕೋಳಿ ಮರಿಗಳನ್ನು ವಿತರಿಸಲಾಗುವುದು. ಈ ಯೋಜನೆಯಡಿಯಲ್ಲಿ 300 ಮಹಿಳಾ ಫಲಾನುಭವಿಗಳಿಗೆ ತಲಾ 20 ಕೋಳಿ ಮರಿಯಂತೆ 6000ಕೋಳಿ ಮರಿಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದೆಂದರು. ಹಳಿಯಾಳ ಕ್ಷೇತ್ರಕ್ಕೆ ವಿಶೆಷ ಘಟಕ ಯೋಜನೆಯಡಿಯಲ್ಲಿ ₹1.25 ಕೋಟಿ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ₹25 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುರಸಭಾ ನಾಮನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ, ಆಶ್ರಯ ಸಮಿತಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಇದ್ದರು.